ಬೆಂಗಳೂರು: ಪಾನೀಯಗಳಲ್ಲಿ ಹಾನಿಕಾರಕ ಅಂಶ ಎಂಬ ಶೀರ್ಷಿಕೆ ಅಡಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಆಯೋಗದಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಿದೆ.
ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಗೆ ಬಂದಿರುವ Buzz Ballz ಎಂಬ ಡ್ರಿಂಕ್ ಜ್ಯೂಸ್ ಮಾದರಿಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದ್ದು ಈ ಪಾನೀಯದಲ್ಲಿ ಅಧಿಕಮಟ್ಟದ ಸಕ್ಕರೆ ಅಂಶಗಳಿರುವುದಲ್ಲದೆ ಶೇಕಡ. 15ರಷ್ಟು ಆಲೋಹಾಲ್ ಇದೆ ಎಂದು ವರದಿಯಾಗಿದ್ದು, ಈ ಪಾನೀಯವು ಟಿನ್ ರೂಪದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಈ ಪಾನೀಯಗಳು ಹೆಚ್ಚಾಗಿ ಶಾಲಾ ಕಾಲೇಜಿನ ಸುತ್ತ ಮುತ್ತಲಿನ ಪ್ರದೇಶದಲ್ಲಿ ಮಾರಾಟವಾಗುತ್ತಿದ್ದು, ಮಕ್ಕಳು ಈ ಪಾನೀಯಕ್ಕೆ ವ್ಯಸನರಾಗಿದ್ದು, ಈ ಪಾನೀಯದಲ್ಲಿರುವ ಅಧಿಕ ಸಕ್ಕರೆ ಮಟ್ಟ ಹಾಗೂ ಶೇ.15ರಷ್ಟು ಆಲ್ಕೋಹಾಲ್ ನ ಅಂಶದಿಂದ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದಲ್ಲದೆ, ಮಕ್ಕಳು ತಮಗೆ ಅರಿವಿಲ್ಲದಂತೆ ಮದ್ಯವ್ಯಸನಕ್ಕೆ ಒಳಗಾಗುತ್ತಿದ್ದಾರೆ ಎಂಬ ಆತಂಕವನ್ನು ವ್ಯಕ್ತಪಡಿಸಿರುವ ಬರವಣಿಗೆಯೊಂದು ಸಾಮಾಜಿಕ ಜಾಲತಾಣದಲ್ಲಿ ಬಿತ್ತರವಾಗಿದೆ.
ಇದನ್ನು ಗಮನಿಸಿದ ಆಯೋಗವು ಮಕ್ಕಳ ದೈಹಿಕ, ಮಾನಸಿಕ ಸ್ವಾಸ್ಥ್ಯದ ಮೇಲೆ ಗಂಭೀರ ಪರಿಣಾಮ ಬೀರುವಂತ ಇಂತಹ ಪಾನೀಯಗಳನ್ನು ಮುಕ್ತವಾಗಿ ಮಾರಾಟ ಮಾಡಲು ಅವಕಾಶ ನೀಡಬಾರದೆಂಬ ಅಭಿಪ್ರಾಯವನ್ನು ಹೊಂದಿರುತ್ತದೆ. ಅಲ್ಲದೆ, ಜಾಹಿರಾತಲ್ಲೇ ತಿಳಿಸಿರುವಂತೆ ಶೇ.15ರಷ್ಟು abv ಇದೆಯೆಂದು ಉಲ್ಲೇಖಿಸಿರುವುದು ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.
ಆದ್ದರಿಂದ Buzz Ballz ಈ ಪಾನೀಯವನ್ನು ಸೂಕ್ತ ಪ್ರಯೋಗಾಲಯದ ತನಿಖೆಗೆ ಒಳಪಡಿಸಿ ಇದರಲ್ಲಿ ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಹಾನಿ ಉಂಟಾಗುವ ಆಲೋಹಾಲಿನ ಪ್ರಮಾಣವಿದ್ದಲ್ಲಿ ಕೂಡಲೇ ಈ ಪಾನೀಯವನ್ನು ಮಕ್ಕಳು ಉಪಯೋಗಿಸಲು ನಿರ್ಭಂಧಿಸಲು ಕ್ರಮ ಕೈಗೊಂಡು, ಕೈಗೊಂಡ ಕ್ರಮದ ವರದಿಯನ್ನು 05 ದಿನಗಳ ಒಳಗಾಗಿ ಸಲ್ಲಿಸುವಂತೆ ಕರ್ನಾಟಕ ರಾಜ್ಯ ಔಷಧ ನಿಯಂತ್ರಣ ಇಲಾಖೆಗೆ ಕೋರಿದೆ.


