ಕ್ರೆಡಿಟ್ ಕಾರ್ಡ್’ಗಳು ಹಾಗೂ ಸಾಲ ಪಡೆದು ಮರುಪಾವತಿ ಮಾಡದಿದ್ದರೆ ರಿಕವರಿ ಏಜೆಂಟ್ ಗಳ ಕಿರುಕುಳ ಸಾಮಾನ್ಯ. ಮನೆಗೆ ಬಂದು ಗಲಾಟೆ ಮಾಡುವುದು, ಮರ್ಯಾದೆ ಕಳೆಯುವುದು, ಪತಿ ಸಾಲ ಪಡೆದರೆ ಪತ್ನಿಗೆ, ಪತ್ನಿ ಸಾಲ ಪಡೆದರೆ ಪತಿಗೆ ಕರೆ ಮಾಡಿ ಕಿರುಕುಳ ನೀಡುವುದು, ಸಂಬಂಧಿಕರಿಗೂ ಕರೆ ಮಾಡಿ ವಿಷಯ ತಿಳಿಸುವುದು ನಡೆಯುತ್ತಲೇ ಇರುತ್ತದೆ. ಆದರೆ ಸೈಬರಾಬಾದ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರು ಸಾಲದ ಹಣವನ್ನು ಮರುಪಾವತಿ ಮಾಡಿದರೂ, ಹೆಚ್ಚುವರಿ ಹಣಕ್ಕೆ ಬೇಡಿಕೆ ಇಟ್ಟು ರಿಕವರಿ ಏಜೆಂಟ್ ಗಳು ಮಾನಸಿಕವಾಗಿ ಹಿಂಸಿಸಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
15 ತಿಂಗಳಲ್ಲಿ ಅವರು 57 ಲೋನ್ ಆ್ಯಪ್ಗಳಿಂದ ಸುಮಾರು ₹83 ಲಕ್ಷ ಸಾಲ ಪಡೆದಿದ್ದರು. ಆದರೆ ಅವರು ಈಗಾಗಲೇ ₹1.05 ಕೋಟಿ ವರೆಗೆ ಮರುಪಾವತಿ ಮಾಡಿದ್ದರು.
ಆದರೂ ಹೆಚ್ಚುವರಿ ಹಣಕ್ಕೆ ಬೇಡಿಕೆ ಇಟ್ಟಿದ್ದರಿಂದ ಮತ್ತೊಂದು ₹22 ಲಕ್ಷ ಪಾವತಿಸಿದ್ದಾರೆ. ಇದಾದರೂ ಸುಮ್ಮನಾಗದ ಏಜೆಂಟ್ಗಳು ಇನ್ನೂ ಹಣ ಪಾವತಿಸಬೇಕು ಎಂದು ಅಶ್ಲೀಲವಾಗಿ ಬೈದು, ಸಾಮಾಜಿಕ ಜಾಲತಾಣಗಳಲ್ಲಿ ನಗ್ನ ಫೋಟೋಗಳನ್ನು ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಒಂದೇ ಅಲ್ಲ, 105 ಮೊಬೈಲ್ ನಂಬರ್ಗಳಿಂದ ಹಗಲು-ರಾತ್ರಿ ನಿರಂತರ ಕರೆ ಮಾಡಿದ್ದಾರೆ. ಒಟಿಪಿಗಳನ್ನೂ ಕಳುಹಿಸಿದ್ದಾರೆ. ಕೊನೆಗೆ ಆಕೆಯ ಫೋಟೋಗಳನ್ನು ಮಾರ್ಫ್ ಮಾಡಿ ತಾಯಿ ಮತ್ತು ಸಹೋದರಿಗೆ ಕಳುಹಿಸುವುದಾಗಿ ಬೆದರಿಸಿದ ಹಿನ್ನೆಲೆಯಲ್ಲಿ ಸೈಬರಾಬಾದ್ ಸೈಬರ್ ಕ್ರೈಂ ಪೊಲೀಸರನ್ನು ಸಂಪರ್ಕಿಸಿದ್ದಾರೆ.
ಲೆಕ್ಕ ಸರಿಯಾಗಿಲ್ಲವೆಂದು ಕಿರುಕುಳ
ಸೈಬರಾಬಾದ್ ಕಮಿಷನರೇಟ್ ವ್ಯಾಪ್ತಿಯ ಬಾಚುಪಲ್ಲಿಯ 32 ವರ್ಷದ ಮಹಿಳೆಯೊಬ್ಬರು ಖಾಸಗಿ ಉದ್ಯೋಗಿಯಾಗಿದ್ದಾರೆ. ವೈಯಕ್ತಿಕ ಅಗತ್ಯಗಳಿಗಾಗಿ 2024ರ ನವೆಂಬರ್ನಿಂದ ಈ ವರ್ಷದ ಫೆಬ್ರವರಿವರೆಗೆ 57 ಲೋನ್ ಆ್ಯಪ್ಗಳಿಂದ ₹83,83,179 ಸಾಲ ಪಡೆದಿದ್ದರು. ಬಡ್ಡಿ ಸೇರಿದಂತೆ ₹1.05 ಕೋಟಿ ಪಾವತಿಸಿದ್ದರು.
ಆದರೂ ರಿಕವರಿ ಏಜೆಂಟ್ಗಳು ಹೆಚ್ಚುವರಿ ಬಡ್ಡಿ ಪಾವತಿಸಬೇಕು ಎಂದು ಒತ್ತಾಯಿಸಿದ್ದಾರೆ. ಅದಕ್ಕೆ ಒಪ್ಪದಿದ್ದಾಗ ಕರೆ ಮಾಡಿ ಕಿರುಕುಳ ನೀಡಲು ಆರಂಭಿಸಿದ್ದಾರೆ. ಇದರಿಂದ ಮತ್ತಷ್ಟು ಲೋನ್ ಆ್ಯಪ್ಗಳಲ್ಲಿ ಸಾಲ ಪಡೆದು ಮತ್ತೊಂದು ₹22 ಲಕ್ಷ ಪಾವತಿಸಿದ್ದಾರೆ. ಆದರೂ ಲೆಕ್ಕ ಸರಿಯಾಗಿಲ್ಲ ಎಂದು ಹೇಳಿ ಇನ್ನಷ್ಟು ಹಣ ಪಾವತಿಸುವಂತೆ ಸಂದೇಶ ಹಾಗೂ ಕರೆಗಳನ್ನು ಮಾಡಿದ್ದಾರೆ.
‘ಆಕೆ ಮೋಸಗಾರ್ತಿ, ಎಚ್ಚರ’ ಎಂದು ಪ್ರಚಾರ
ಮಹಿಳೆಯ ಫೋನ್ನಲ್ಲಿದ್ದ ಫೋಟೋಗಳನ್ನು ಮಾರ್ಫ್ ಮಾಡಿ, ‘ಫ್ರಾಡ್ ಪರ್ಸನ್’ ಎಂದು ಶೀರ್ಷಿಕೆ ನೀಡಿ ಆಕೆಯ ಸಂಪರ್ಕ ಪಟ್ಟಿಯಲ್ಲಿದ್ದ ಎಲ್ಲ ನಂಬರ್ಗಳಿಗೆ ಕಳುಹಿಸಿದ್ದಾರೆ. ಅಶ್ಲೀಲವಾಗಿ ಬೈದು ಆಕೆ ಹಾಗೂ ಆಕೆಯ ಸ್ನೇಹಿತರಿಗೆ ಸಂದೇಶಗಳನ್ನು ಕಳುಹಿಸಿದ್ದಾರೆ.ಆಕೆಯ ಬ್ಯಾಂಕ್ ಖಾತೆ ವಿವರಗಳನ್ನು ಪಡೆದು, ಯಾರಾದರೂ ಹಣ ಕಳುಹಿಸುತ್ತಿದ್ದರೆ ಅವರಿಗೆ ಕರೆ ಮಾಡಿ, ‘ಆಕೆ ಮೋಸಗಾರ್ತಿ. ನಮ್ಮಿಂದ ಹಣ ಪಡೆದು ವಂಚಿಸಿದ್ದಾಳೆ. ನಿಮಗೂ ಹೀಗೆಯೇ ಮಾಡುತ್ತಾಳೆ’ ಎಂದು ಸುಳ್ಳು ಪ್ರಚಾರ ಮಾಡಿದ್ದಾರೆ.
105 ಮೊಬೈಲ್ ನಂಬರ್ಗಳಿಂದ ನಿರಂತರ ಕರೆ
ಆರ್ಬಿಐ ಮಾರ್ಗಸೂಚಿಗಳ ಪ್ರಕಾರ ಬೆಳಗ್ಗೆ 8 ಗಂಟೆಯ ಮೊದಲು ಹಾಗೂ ರಾತ್ರಿ 7 ಗಂಟೆಯ ನಂತರ ಕರೆ ಮಾಡಬಾರದು ಎಂಬ ನಿಯಮವಿದೆ. ಆದರೆ ಈ ಪ್ರಕರಣದಲ್ಲಿ24 ಗಂಟೆಯೂ ಕರೆಗಳು ಮತ್ತು ನಿರಂತರ ಸಂದೇಶಗಳಿಂದ ಮಹಿಳೆಗೆ ಕಿರುಕುಳ ನೀಡಿದ್ದಾರೆ.ಪ್ರತಿದಿನ ಒಂದರ ಹಿಂದೆ ಒಂದರಂತೆ ಸುಮಾರು 1,500 ಒಟಿಪಿಗಳನ್ನು ಮಹಿಳೆಯ ಫೋನ್ ಹಾಗೂ ಆಕೆಯ ಸ್ನೇಹಿತರ ಫೋನ್ಗಳಿಗೆ ಕಳುಹಿಸಿ ನರಕ ತೋರಿಸಿದ್ದಾರೆ. ಒಂದಲ್ಲ, ಬರೋಬ್ಬರಿ 105 ಮೊಬೈಲ್ ನಂಬರ್ಗಳಿಂದ ಕರೆ ಮಾಡಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತದೆ.
ಆಕೆಯ ಲಿಂಕ್ಡ್ಇನ್ ಪ್ರೊಫೈಲ್ಗೂ ಪ್ರವೇಶ ಪಡೆದು, ಕೆಲಸ ಮಾಡುತ್ತಿದ್ದ ಕಚೇರಿಯ ಬಾಸ್ ಮತ್ತು ಸಹೋದ್ಯೋಗಿಗಳಿಗೆ ಕರೆ ಮಾಡಿ ಆಕೆಯ ಮಾನಹಾನಿ ಮಾಡಿದ್ದಾರೆ. ಆಕೆಯ ಫೋಟೋಗಳು ಮತ್ತು ಸಾಲದ ವಿವರಗಳನ್ನು ಎಚ್ಆರ್ ಮ್ಯಾನೇಜರ್ಗೆ ಕಳುಹಿಸಿ ಹಣ ಪಾವತಿಸುವಂತೆ ಸಂದೇಶಗಳನ್ನು ಹಾಕಿದ್ದಾರೆ.ಇದರಿಂದ ಕಚೇರಿಯವರು ‘ಇನ್ನೊಮ್ಮೆ ಕರೆಗಳು ಬಂದರೆ ಕೆಲಸ ಬಿಟ್ಟುಬಿಡು’ ಎಂದು ಹೇಳಿದ್ದಾರೆ. ಇದರಿಂದ ಮಹಿಳೆ ಮಾನಸಿಕವಾಗಿ ಕುಗ್ಗಿಹೋಗಿದ್ದಾರೆ. ‘ನಿನ್ನ ಅಮ್ಮ, ತಂಗಿಗೆ ನಗ್ನ ಫೋಟೋ ಕಳುಹಿಸುತ್ತೇವೆ’ಇಷ್ಟೆಲ್ಲ ಮಾಡಿದರೂ ಮಹಿಳೆ ಹೆಚ್ಚುವರಿ ಹಣ ಪಾವತಿಸಲು ಒಪ್ಪದಿದ್ದಾಗ, ಆಕೆಯ ಫೋನ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿದ್ದ ಫೋಟೋಗಳನ್ನು ಮಾರ್ಫ್ ಮಾಡಿ ತಾಯಿ ಮತ್ತು ಸಹೋದರಿಗೆ ಕಳುಹಿಸುವುದಾಗಿ ಬೆದರಿಸಿದ್ದಾರೆ.
ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲೂ ಅಪ್ಲೋಡ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇದರಿಂದ ಮಹಿಳೆ ಸೈಬರಾಬಾದ್ ಸೈಬರ್ ಕ್ರೈಂ ಪೊಲೀಸರನ್ನು ಸಂಪರ್ಕಿಸಿದ್ದಾರೆ.ಲೋನ್ ಆ್ಯಪ್ಗಳಿಂದ ಪಡೆದ ಹಣಕ್ಕೆ ಹೆಚ್ಚುವರಿಯಾಗಿ ₹22 ಲಕ್ಷ ಪಾವತಿಸಿದರೂ ಕಿರುಕುಳ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ತನಗೆ ನ್ಯಾಯ ಒದಗಿಸಬೇಕು ಎಂದು ದೂರು ನೀಡಿದ್ದಾರೆ.
ಫೋನ್ ಹ್ಯಾಕ್ ಮಾಡಿ ಕಿರುಕುಳ
ಲೋನ್ ಆ್ಯಪ್ಗಳಿಂದ ಸಾಲ ಪಡೆಯುವಾಗ ಅಥವಾ ಕ್ರೆಡಿಟ್ ಕಾರ್ಡ್ ಬಳಸುವಾಗ, ಆ್ಯಪ್ಗಳು ಕೇಳುವ ಕಾಂಟ್ಯಾಕ್ಟ್ ಲಿಸ್ಟ್, ಫೋಟೋಗಳು, ಕ್ಯಾಮೆರಾ ಸೇರಿದಂತೆ ವಿವಿಧ ಅನುಮತಿಗಳನ್ನು ನೀಡುವುದನ್ನು ರಿಕವರಿ ಏಜೆಂಟ್ಗಳು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಈ ಮಹಿಳೆಯೂ 57 ಲೋನ್ ಆ್ಯಪ್ಗಳಿಗೆ ಎಲ್ಲಾ ಅನುಮತಿಗಳನ್ನು ನೀಡಿದ್ದರಿಂದ, ರಿಕವರಿ ಏಜೆಂಟ್ಗಳು ಆಕೆಯ ಕಾಂಟ್ಯಾಕ್ಟ್ ಲಿಸ್ಟ’ಗೆ ಪ್ರವೇಶ ಪಡೆದಿದ್ದಾರೆ. ಕೆಲವರು ಆಕೆಯ ಫೋನ್ ಹ್ಯಾಕ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.

