ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಶಾಗ್ಯ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳ ಗುಂಡೇಟಿಗೆ ಮೂವರು ಬಲಿ ಪ್ರಕರಣದಲ್ಲಿ ಬಚಾವಾಗಿದ್ದ ವ್ಯಕ್ತಿ ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿದ್ದಾರೆ.
ಹನೂರು ಎನ್ ಕೌಂತರ್ ಪ್ರಕರಣದಲ್ಲಿ ಅರಣ್ಯ ಸಿಬ್ಬಂದಿಗಳ ಗುಂಡೇಟಿನಿಂದ ಬಚಾವಾಗಿದ್ದ ಮಹಿಮದಾಸ್ ಎಂಬುವವರು, ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಅರಣ್ಯ ಸಿಬ್ಬಂದಿ ಶೂಟೌಟ್ ಮಾಡುವೆ ವೇಳೆ ಪರಾರಿಯಾಗಿ ಆಸ್ಪತ್ರೆ ಸೇರಿದ್ದೆ, ಈಗ ಹೊರ ಬರಲು ಭಯ ಆಗುತ್ತಿದೆ ಎಂದು ತಿಳಿಸಿದ್ದಾರೆ.
ಕೇಸ್ ಬಗ್ಗೆ ಪೊಲೀಸರು, ಅರಣ್ಯ ಇಲಾಖೆ ತನಿಖೆ ಮಾಡುತ್ತಿದ್ದಾರೆ. ವಿಚಾರಣೆಗೆ ಬರುವಂತೆ ಹೇಳ್ತಿದ್ದಾರೆ. ಆದ್ರೆ ನನಗೆ ಪೊಲೀಸ್ ಅಂದ್ರೆ ಭಯ. ಆ ಕಾರಣದಿಂದ ಆಚೆ ಬರಲು ಹಿಂದೇಟು ಹಾಕುತ್ತಿರುವೆ ಎಂದವರು ತಿಳಿಸಿದ್ದಾರೆ.
ಹನೂರು ತಾಲೂಕಿನ ಶಾಗ್ಯ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಪ್ರಾಣಿಬೇಟೆಗೆ ಬಂದಿದ್ದಾರೆಂದು ಭಾವಿಸಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ್ದ ಗುಂಡಿನ ದಾಳಿಯಲ್ಲಿ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದರು. ಓರ್ವ ತಪ್ಪಿಸಿಕೊಂಡು ಬಚಾವ್ ಆಗಿದ್ದ. ಮೃತರನ್ನು ಪೀಟರ್, ಕುಮಾರ್, ಅಂಥೋಣಿಸ್ವಾಮಿ ಎಂದು ಗುರುತಿಸಲಾಗಿದೆ. ಗುಂಡೇಟಿನಿಂದ ತಪ್ಪಿಸಿಕೊಂಡು ಬಚಾವ್ ಆಗಿದ್ದ ಮಹಿಮದಾಸ್ ಇದೀಗ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಇನ್ನು ಪ್ರಕರಣವನ್ನು ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಲಾಗಿದ್ದು, ಒಂದೆಡೆ ತನಿಖೆ ಮುಂದುವರೆದಿದೆ.

