ಹೇರ್ ಸ್ಟ್ರೈಟ್ನಿಂಗ್ ಮಾಡಿಸಿಕೊಂಡ 17 ವರ್ಷದ ಹುಡುಗಿ ಆಸ್ಪತ್ರೆಗೆ ದಾಖಲಾಗಿದ್ದು, ಆಕೆಗೆ ಕಿಡ್ನಿ ಫೆಲ್ಯೂರ್ ಆಗಿದೆ. ಕೆಲವು ತಿಂಗಳ ಹಿಂದೆ 25 ವರ್ಷದ ಮಹಿಳೆಗೆ ಸಹ ಕಿಡ್ನಿ ಫೆಲ್ಯೂರ್ ಆಗಿತ್ತು ಎಂದು ವರದಿಗಳು ಹೇಳಿವೆ.
ಆದ್ದರಿಂದ ಈಗ ಹೇರ್ ಸ್ಟ್ರೈಟನಿಂಗ್ (ಕೂದಲು ನೇರಗೊಳಿಸುವಿಕೆ) ಚಿಕಿತ್ಸೆ ಬಗ್ಗೆ ಎಚ್ಚರವಹಿಸುವಂತೆ ಆಗಿದೆ. ಶಾರೆ ಝೆಡೆಕ್ ವೈದ್ಯಕೀಯ ಕೇಂದ್ರದ ವರದಿಯ ಪ್ರಕಾರ, ಹೇರ್ ಸ್ಟ್ರೈಟನಿಂಗ್ ಚಿಕಿತ್ಸೆಗೆ ಒಳಗಾದ 17 ವರ್ಷದ ಬಾಲಕಿಯೊಬ್ಬಳು ತೀವ್ರವಾದ ಮೂತ್ರಪಿಂಡ ವೈಫಲ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾಳೆ.
ಸುಮಾರು ಒಂದು ತಿಂಗಳ ಹಿಂದೆ 25 ವರ್ಷದ ಮಹಿಳೆಯೂ ಸಹ ಇದೇ ಕಾರಣದಿಂದ ಕಿಡ್ನಿ ವೈಫಲ್ಯಕ್ಕೆ ಒಳಗಾಗಿದ್ದರು. ವಾಂತಿ, ತಲೆಸುತ್ತು ಮತ್ತು ತೀವ್ರ ತಲೆನೋವಿನಿಂದ ಬಳಲುತ್ತಿದ್ದ ಈ ಬಾಲಕಿಯನ್ನು ಮಕ್ಕಳ ವಿಭಾಗದಲ್ಲಿ ಹಲವಾರು ದಿನಗಳ ಕಾಲ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆಕೆಯನ್ನು ಸೋಮವಾರ ಡಿಸ್ಚಾರ್ಜ್ ಮಾಡಲಾಗಿದ್ದು, ಆಸ್ಪತ್ರೆಯ ಮಕ್ಕಳ ನೆಫ್ರಾಲಜಿ ವಿಭಾಗದಲ್ಲಿ ಮುಂದಿನ ಚಿಕಿತ್ಸೆ ಮುಂದುವರಿಯಲಿದೆ.
ಆಸ್ಪತ್ರೆಯ ನೆಫ್ರಾಲಜಿ ಸಂಸ್ಥೆಯ ಮುಖ್ಯಸ್ಥರಾದ ಪ್ರೊ. ಲಿಂಡಾ ಶಾವಿತ್ ಮತ್ತು ಡಾ. ಅಲೋನ್ ಬೆನಾಯಾ ಅವರು 2023ರಲ್ಲಿ ಪ್ರಕಟಿಸಿದ ಅಧ್ಯಯನವು ಈ ವಿಚಾರದಲ್ಲಿ ಹಲವು ಅಂಶಗಳ ಮೇಲೆ ಬೆಳಕು ಚೆಲ್ಲಿದೆ.
ದೇಶಾದ್ಯಂತ 14 ರಿಂದ 58 ವರ್ಷ ವಯಸ್ಸಿನ 26 ಮಹಿಳೆಯರು ಯಾವುದೇ ಪೂರ್ವ ಅನಾರೋಗ್ಯವಿಲ್ಲದಿದ್ದರೂ ತೀವ್ರ ಕಿಡ್ನಿ ವೈಫಲ್ಯದೊಂದಿಗೆ ತುರ್ತು ಚಿಕಿತ್ಸಾ ವಿಭಾಗಕ್ಕೆ ಬಂದಿದ್ದರು.
ಸಂಶೋಧನೆಯಿಂದ ಕಂಡುಕೊಂಡಂತೆ, ಇವರೆಲ್ಲರೂ ಗ್ಲೈಆಕ್ಸಿಲಿಕ್ ಆಮ್ಲ (Glyoxylic acid) ಹೊಂದಿರುವ ಹೇರ್ ಸ್ಟ್ರೈಟನಿಂಗ್ ಚಿಕಿತ್ಸೆಗೆ ಒಳಗಾಗಿದ್ದರು. ಇದರ ಬೆನ್ನಲ್ಲೇ, ಗ್ಲೈಆಕ್ಸಿಲಿಕ್ ಆಮ್ಲವನ್ನು ಹೊಂದಿರುವ ಹತ್ತಾರು ಸೌಂದರ್ಯವರ್ಧಕ ಉತ್ಪನ್ನಗಳ ಪರವಾನಗಿಯನ್ನು ಆರೋಗ್ಯ ಸಚಿವಾಲಯವು ರದ್ದುಗೊಳಿಸಿದೆ.
ಹೇರ್ ಸ್ಟ್ರೈಟನಿಂಗ್ ಉತ್ಪನ್ನಗಳನ್ನು ನೇರವಾಗಿ ನೆತ್ತಿಗೆ ಅಥವಾ ಕೂದಲಿನ ಬೇರುಗಳಿಗೆ ಹಚ್ಚಬಾರದು. ಅವುಗಳಿಂದ ಕನಿಷ್ಠ 1.5 ಸೆಂಟಿಮೀಟರ್ ದೂರವನ್ನು ಕಾಯ್ದುಕೊಳ್ಳುವುದು ಅತ್ಯಗತ್ಯ ಎಂದು ಪ್ರೊ. ಶಾವಿತ್ ಹೇಳುತ್ತಾರೆ.
ಅಲ್ಲದೆ, ಹೇರ್ ಡ್ರೆಸ್ಸರ್‌ಗಳು ಮತ್ತು ಗ್ರಾಹಕರು ಉತ್ಪನ್ನವನ್ನು ಕಾಯಿಸದಂತೆ ಎಚ್ಚರಿಕೆ ವಹಿಸಬೇಕು ಮತ್ತು ಕೇವಲ ತಯಾರಕರ ಸೂಚನೆಗಳ ಪ್ರಕಾರವೇ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದ್ದಾರೆ.

