ಬೆಂಗಳೂರು: ಬಿಡದಿ ಟೌನ್ಶಿಪ್ ಯೋಜನೆ ಕುರಿತು ಚರ್ಚೆಗೆ ಮುಖ್ಯಮಮ್ತ್ರಿಗಳು ಏಕೆ ಬಿಡದಿಗೆ ಹೋಗಬೇಕು?. ಸಿಎಂ ವಿಧಾನಸೌಧಕ್ಕೆ ಕರೆದಿದ್ದಾರೆ, ಅಲ್ಲಿಗೆ ಕುಮಾರಸ್ವಾಮಿಯವರು ಬರಲಿ. ಇವೆಲ್ಲ ನಾಟಕಗಳನ್ನು ಕುಮಾರಸ್ವಾಮಿ ಬಿಡಬೇಕು ಎಂದು ಮಾಗಡಿ ಶಾಸಕ ಹೆಚ್. ಸಿ. ಬಾಲಕೃಷ್ಣ ವಾಗ್ದಾಳಿ ನಡೆಸಿದ್ದಾರೆ.
ಬಿಡದಿ ಟೌನ್ಶಿಪ್ ವಿವಾದ ವಿಚಾರವಾಗಿ ಚರ್ಚೆಗೆ ಬರುವಂತೆ ಆಹ್ವಾನಿಸಿ ಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಪರಸ್ಪರ ಪತ್ರದ ವಿಚಾರವಾಗಿ ಮಾತನಾಡಿದ ಬಾಲಕೃಷ್ಣ, ಟೌನ್ಶಿಪ್ ಮೂಲ ಕೂಸು ಹೆಚ್ ಡಿಕೆಯದ್ದು. ಅಪ್ಪ – ಮಗ ಇದ್ದಾಗ ರದ್ದು ಮಾಡಲಿಲ್ಲ. ಈಗ ನಾಟಕ ಮಾಡೋದು ಏನು ನಡೆಯಲ್ಲ. ಸಿಎಂ ನಿರ್ಧಾರ ತೆಗೆದುಕೊಂಡಿದ್ದಾರೆ. ಖಂಡಿತ ಅದನ್ನು ಮಾಡೇ ಮಾಡ್ತಾರೆ. ಇವರು ಎಷ್ಟು ಹೋರಾಟ ಮಾಡ್ತಾರೆ ಮಾಡಲಿ ಎಂದರು.
ರೈತರ ಸಮ್ಮುಖದಲ್ಲೇ ಚರ್ಚೆ ಆಗಲಿ ಎಂದು ಹೆಚ್ ಡಿಕೆ ಪತ್ರ ವಿಚಾರವಾಗಿ ಯಾಕೆ ಅಲ್ಲಿಗೆ ಹೋಗಬೇಕು. ಮೊನ್ನೆ ಎಲ್ಲರನ್ನೂ ಕಳಿಸಿ ಪ್ರತಿಭಟನೆ ಮಾಡಿದ್ರು. ಪ್ರತಿಭಟನೆಯಲ್ಲಿ ರೈತರು ಇದ್ರಾ? ಎಲ್ಲರೂ ಹೊರಗಿನಿಂದ ಬಂದವರು. ದುಡ್ದು ಕೊಟ್ಟು ಜನರನ್ನು ಕರೆಸಿ ಪ್ರತಿಭಟನೆ ಮಾಡಿಸುತ್ತಿದ್ದಾರೆ. ಸಿಎಂ ಚರ್ಚೆಗೆ ಕರೆದಿದ್ದಾರೆ ಬರಲಿ. ಬರುವುದಿದ್ದರೆ ಬರಲಿ, ಇಲ್ಲ ಅಂದ್ರೆ ಬಿಡಿ ಎಂದು ತಿರುಗೇಟು ನೀಡಿದರು.
ರೈತರನ್ನು ವಿಶ್ವಾಸಕ್ಕೆ ಪಡೆದೇ ಯೋಜನೆ ನಡೆಸುತ್ತೇವೆ. ಹೆಚ್ ಡಿಕೆಗಿಂತ ಹೆಚ್ಚು ಹಣವನ್ನು ರೈತರಿಗೆ ನೀಡುತ್ತಿದ್ದೇವೆ. ನಾವು ಕೆರೆ ಶುದ್ಧೀಕರಣ ಮಾಡಬೇಕು, ಅದಕ್ಕಾಗಿ ಹಣ ಇಟ್ಟಿದ್ದೇವೆ. ಅಲ್ಲಿ ವಾತಾವರಣ ಹಾಳಾಗಿಬಿಟ್ಟಿದೆ. ಪ್ರತಿದಿನ ರೈತರಿಗೆ RTGS ಮಾಡ್ತಿದ್ದೇವೆ. ಕೆಲ ರೈತರು ಸಾಲ ಪಡೆದಿದ್ರು. ಅವರಿಗೆ 1 ಟೈಮ್ ಸೆಟಲ್ ಮಾಡ್ತಿದ್ದೇವೆ. ರೈತರಿಗೆ ಅನುಕೂಲ ಮಾಡಿಕೊಡುತ್ತಿದ್ದೇವೆ. ಕೇವಲ ಬೈರಮಂಗಲ ಪಂಚಾಯತ್ ತೋರಿಸುತ್ತಿದ್ದಾರೆ. ಬನ್ನಿಕೊಪ್ಪ ಪಂಚಾಯತ್ ತೋರಿಸಿ, ಅಲ್ಲಿ ಲೇಔಟ್ ಆಗಿಬಿಟ್ಟಿವೆ. ಸಿದ್ದರಾಮಯ್ಯ ಇದ್ದಾಗ ಪಾದಯಾತ್ರೆ ಮಾಡಲಿಲ್ಲ, ಡಿ.ಕೆ. ಶಿವಕುಮಾರ್ ಸಿಎಂ ಆದ ಮೇಲೆ ಪಾದಯಾತ್ರೆ ಯಾಕೆ?. ಉದ್ದೇಶಪೂರ್ವಕವಾಗಿ ಈಗ ವಿರೋಧ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ನಾವು ರೈತರಿಗೆ ಸಹಾಯ ಮಾಡೇ ಮಾಡುತ್ತೇವೆ. ನಾವು ದುಡ್ಡು ಮಾತ್ರ ಕೊಡ್ತಿಲ್ಲ. ಭೂಮಿ ಷೇರು ಕೊಡುತ್ತಿದ್ದೇವೆ. ಡೆವಲಪ್ಮೆಂಟ್ ಮಾಡಿದ ಭೂಮಿ ಕೊಡ್ತೇವೆ. ಸಣ್ಣ ರೈತರಿಗೆ ಮಾತ್ರ ಭೂ ಪರಿಹಾರ ನೀಡ್ತಿದ್ದೇವೆ. ಅವರು ಒಪ್ಪಿದ ತಕ್ಷಣವೇ ಹಣ ನೀಡ್ತಿದ್ದೇವೆ. ನಿಖಿಲ್ 5 ಎಕರೆ ಜಾಗ ಬಿಡಲಿ. ಹೋರಾಟಗಾರರಿಗೆ ಅಲ್ಲಿ ಸೈಟ್ ಕೊಡೋಣ. ನಿಖಿಲ್ ಲೇಔಟ್ ಅಂತ ಹೆಸರಿಡೋಣ ಎಂದು ಟಾಂಗ್ ನೀಡಿದರು.
ಹೆಚ್.ಡಿ. ಕುಮಾರಸ್ವಾಮಿಗೆ ಈಗ ನಿದ್ರೆ ಬರುತ್ತಿಲ್ಲ. ಕೇಂದ್ರ ಬಿಟ್ಟು ರಾಜ್ಯಕ್ಕೆ ಬಂದು ಕುಳಿತಿದ್ದಾರೆ. ಅಲ್ಲಿ ಬಿಟ್ಟು ಇಲ್ಲೇ ಇದ್ದಾರೆ. ಮಗನನ್ನು ಹೋರಾಟಕ್ಕೆ ಬಿಟ್ಟಿದ್ದಾರೆ. ನಾವು ತಪ್ಪು ಮಾಡಿದ್ರೆ ಜನ ತೀರ್ಮಾನಿಸಲಿ. ನಮಗೆ ಎರಡು ವರ್ಷ ಅವಕಾಶ ಇದೆ. ನಾವು ಸರಿಯಾಗಿ ಮಾಡ್ಲಿಲ್ಲ ಅಂದ್ರೆ ಆಮೇಲೆ ಹೇಳಿ. ಅಲ್ಲಿಯವರೆಗೆ ನೀವು ಕಾಯಬೇಕು. ಮೊದಲು ನಿಮ್ಮ ಆಸ್ತಿ ಬಗ್ಗೆ ತನಿಖೆ ಮಾಡಿಸೋಣ. ನಂತರ ಡಿ. ಕೆ. ಶಿವಕುಮಾರ್ ಆಸ್ತಿ ತನಿಖೆ ಮಾಡಿಸೋಣ. ಅಲ್ಲೇನು ಟಾಟಾ ಬಿರ್ಲಾ ತರ ವ್ಯವಹಾರ ಮಾಡುತ್ತಿದ್ದಾರಾ?. ನೀವು ಪ್ರಾಮಾಣಿಕರಾಗಿದ್ದರೆ ಬಂದು ಪ್ರೂವ್ ಮಾಡಿ ಎಂದು ಸವಾಲು ಹಾಕಿದರು.

