ನಾಯಿ ಮಾಂಸದ ಮೇಲಿನ ನಿಷೇಧ ರದ್ದುಗೊಳಿಸಿದ ಗುವಾಹಟಿ ಹೈಕೋರ್ಟ್; ವ್ಯಾಪಾರಿಗಳಿಂದ ಸ್ವಾಗತ, ಪ್ರಾಣಿಪ್ರಿಯರ ಕಳವಳ

ನಾಗಾಲ್ಯಾಂಡ್‌ನಲ್ಲಿ ನಾಯಿ ಮಾಂಸದ ವ್ಯಾಪಾರ, ಸೇವನೆ ಮತ್ತು ಮಾರಾಟದ ಮೇಲಿನ ನಿಷೇಧವನ್ನು ಗುವಾಹಟಿ ಹೈಕೋರ್ಟ್‌ನ ಕೊಹಿಮಾ ಪೀಠವು ಇತ್ತೀಚೆಗೆ ರದ್ದುಗೊಳಿಸಿದೆ. ಈ ನಿರ್ಧಾರವನ್ನು ಗುಡ್ಡಗಾಡು ರಾಜ್ಯದ ವ್ಯಾಪಾರಿಗಳು ಸ್ವಾಗತಿಸಿದರೆ ಪ್ರಾಣಿ ಪ್ರಿಯರು ವಿಷಾದ ವ್ಯಕ್ತಪಡಿಸಿದ್ದಾರೆ.

ಅರ್ಜಿಯನ್ನು ಕೂಲಂಕುಷವಾಗಿ ಪರಿಗಣಿಸಿದ ನಂತರ ಏಕಸದಸ್ಯ ಪೀಠದ ನ್ಯಾಯಾಧೀಶರಾದ ಜಸ್ಟಿಸ್ ಮಾರ್ಲಿ ವ್ಯಾಂಕನ್ ಅವರು ಜುಲೈ 4, 2020 ರಂದು ನೀಡಲಾದ ನಿಷೇಧದ ಆದೇಶವನ್ನು ರದ್ದುಗೊಳಿಸಿ ತೀರ್ಪು ನೀಡಿದರು. ನ್ಯಾಯಾಲಯವು ಸುಪ್ರೀಂ ಕೋರ್ಟ್‌ನ ಹಿಂದಿನ ತೀರ್ಪುಗಳ ಅವಲೋಕನಗಳು ಮತ್ತು ತಾರ್ಕಿಕತೆಯನ್ನು ಉಲ್ಲೇಖಿಸಿ, ನಾಯಿ ಮಾಂಸ ಮಾರಾಟ ನಿಷೇಧವನ್ನು ರದ್ದುಗೊಳಿಸುವ ನಿರ್ಧಾರಕ್ಕೆ ಬಂದಿತು.

ನಾಯಿ ಮಾಂಸವನ್ನು ಸೇವಿಸಲು ಯಾವುದೇ ಕಡ್ಡಾಯ ಆಚರಣೆಗಳು ಅಥವಾ ಕಾರ್ಯವಿಧಾನಗಳಿಲ್ಲ. ನಾಗಾ ಜನರಿಗೆ ಇದು ಸವಿಯುವ ಖಾದ್ಯ. ಮಾಂಸವು ಔಷಧೀಯ ಗುಣಗಳನ್ನು ಹೊಂದಿದೆ ಎಂದು ನಂಬಲಾಗಿದೆ. ನಾಯಿ ಮಾಂಸ ರೋಗಗಳ ವಿರುದ್ಧ ಪ್ರತಿರಕ್ಷೆಯನ್ನು ಒದಗಿಸುತ್ತದೆ ಮತ್ತು ಶಕ್ತಿಯನ್ನು ಮರಳಿ ಪಡೆಯಲು ಸಹಾಯ ಮಾಡುತ್ತದೆ ಎಂದು ನಾಗಾಲ್ಯಾಂಡ್ ನ ಗುಡ್ಡಗಾಡು ಜನ ನಂಬಿದ್ದಾರೆ.

ವಿಚಾರಣೆಯ ಸಂದರ್ಭದಲ್ಲಿ, ಅರ್ಜಿದಾರರ ಪರ ವಕೀಲರು ಕೊಹಿಮಾದಲ್ಲಿ ನಾಯಿ ಮಾಂಸದ ಸೇವನೆಯು ವ್ಯಾಪಕವಾಗಿದೆ ಮತ್ತು ಇದು ಸಂವಿಧಾನದ 21 ನೇ ವಿಧಿಯಲ್ಲಿ ಪ್ರತಿಪಾದಿಸಿರುವ ಗೌಪ್ಯತೆಯ ಹಕ್ಕಿನ ಅಡಿಯಲ್ಲಿ ಬರುತ್ತದೆ ಎಂದು ವಾದಿಸಿದರು. ನಾಯಿ ಮಾಂಸ ತಿನ್ನುವುದು ನಾಗಾ ಪದ್ಧತಿಯ ಒಂದು ಭಾಗವಾಗಿದೆ ಮತ್ತು ಹಿಂದಿನಿಂದಲೂ ಆಚರಣೆಯಲ್ಲಿದೆ ಎಂದು ಅವರು ಒತ್ತಿ ಹೇಳಿದರು.

ಪೀಪಲ್ ಫಾರ್ ಅನಿಮಲ್ ಅಸ್ಸಾಂ ಚಾಪ್ಟರ್‌ನ ಜನರಲ್ ಕಾರ್ಯದರ್ಶಿ ಇಂದಿರಾ ಅಮ್ಮ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ “ಈ ತೀರ್ಪು ನ್ಯಾಯಾಂಗದ ವಿಷಯವಾಗಿರುವುದರಿಂದ ನಾನು ಅದರ ಬಗ್ಗೆ ಪ್ರತಿಕ್ರಿಯಿಸಬಾರದು. ಆದರೆ ಭೂಮಿಯ ಮತ್ತು ಮಾನವ ಸಮಾಜದ ಒಳಿತಿಗಾಗಿ ನಮ್ಮ ಪರಿಸರವನ್ನು ಸಂರಕ್ಷಿಸುವ ಜವಾಬ್ದಾರಿ ನಮ್ಮ ಮೇಲಿದೆ. ನಾಯಿಗಳು, ಬೆಕ್ಕುಗಳು, ಮರಗಳು ಮತ್ತು ಎಲ್ಲಾ ಜೀವಿಗಳು ಪರಿಸರದ ಭಾಗವಾಗಿದೆ. ಭಾರತದಲ್ಲಿ ಯಾವುದೇ ಪ್ರಾಣಿಗಳನ್ನು ಕೊಲ್ಲುವುದು, ನಿಂದಿಸುವುದನ್ನು ಮತ್ತು ಹೊಡೆಯುವುದನ್ನು ನಿಷೇಧಿಸುವ PCA ಕಾಯಿದೆ 1960 ರಲ್ಲಿ ನಾವು ಪ್ರಾಣಿ ಹಿಂಸೆಯನ್ನು ತಡೆಗಟ್ಟಲು ಈಗಾಗಲೇ ಕಾನೂನುಗಳನ್ನು ಹೊಂದಿದ್ದೇವೆ.” ಎಂದರು.

ನಾಗಾಲ್ಯಾಂಡ್ ಕ್ಯಾಬಿನೆಟ್ ಆರಂಭದಲ್ಲಿ ನಾಯಿಗಳ ವಾಣಿಜ್ಯ ಆಮದು, ವ್ಯಾಪಾರ ಮತ್ತು ಮಾರಾಟ, ಹಾಗೆಯೇ ಬೇಯಿಸಿದ ಮತ್ತು ಬೇಯಿಸದ ನಾಯಿ ಮಾಂಸದ ಮಾರಾಟದ ಮೇಲೆ ನಿಷೇಧ ಹೇರಿತ್ತು. ಆದಾಗ್ಯೂ ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗೆ ಪ್ರತಿಕ್ರಿಯಿಸಲು ರಾಜ್ಯ ಸರ್ಕಾರ ವಿಫಲವಾದ ನಂತರ 2020 ರ ನವೆಂಬರ್‌ನಲ್ಲಿ ಹೈಕೋರ್ಟ್‌ನ ಏಕ ಪೀಠವು ತಾತ್ಕಾಲಿಕವಾಗಿ ನಿಷೇಧವನ್ನು ತೆಗೆದುಹಾಕಿತು.

ಕೊಹಿಮಾ ಮುನ್ಸಿಪಲ್ ಕೌನ್ಸಿಲ್ ಅಡಿಯಲ್ಲಿ ಪರವಾನಗಿ ಪಡೆದ ವ್ಯಾಪಾರಿಗಳು ನಿಷೇಧದ ಕಾನೂನು ಆಧಾರ ಮತ್ತು ಅಧಿಕಾರ ವ್ಯಾಪ್ತಿಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. ಸರ್ಕಾರದ ಅಧಿಸೂಚನೆಯು ಆಹಾರ ಸುರಕ್ಷತಾ ಕಾಯ್ದೆಯನ್ನು ತಪ್ಪಾಗಿ ಅರ್ಥೈಸಿದೆ ಎಂದು ಅವರು ವಾದಿಸಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read