HomeKarnatakaಗುಟ್ಕಾ ಬ್ಯಾನ್: ಅಡಿಕೆ ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರಕ್ಕೆ ಆಗ್ರಹ: ಸಿಎಂ ಡಿ.ಕೆ.ಶಿವಕುಮಾರ್ ಭೇಟಿಯಾದ ಶಾಸಕ...

ಗುಟ್ಕಾ ಬ್ಯಾನ್: ಅಡಿಕೆ ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರಕ್ಕೆ ಆಗ್ರಹ: ಸಿಎಂ ಡಿ.ಕೆ.ಶಿವಕುಮಾರ್ ಭೇಟಿಯಾದ ಶಾಸಕ ಆರಗ ಜ್ಞಾನೇಂದ್ರ ನೇತೃತ್ವದ ನಿಯೋಗ

ಬೆಂಗಳೂರು: ರಾಜ್ಯದ ಅಡಿಕೆ ಬೆಳೆಗಾರರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಲು ರಾಜ್ಯ ಅಡಿಕೆ ಸಹಕಾರ ಸಂಘಗಳ ಮಹಾಮಂಡಲದ ಅಧ್ಯಕ್ಷರೂ ಆಗಿರುವ ಶಾಸಕ ಆರಗ ಜ್ಞಾನೇಂದ್ರ ನೇತೃತ್ವದ ನಿಯೋಗವು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಸದಾಶಿವನಗರದಲ್ಲಿರುವ ಅವರ ನಿವಾಸದಲ್ಲಿ ಭೇಟಿ ಮಾಡಿತು.

ಈ ಸಂದರ್ಭದಲ್ಲಿ ಗುಟ್ಕಾ ಬ್ಯಾನ್ ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳು, ಅಡಿಕೆ ಬೆಳೆಯ ಬೆಲೆ ಏರಿಳಿತ, ಉತ್ಪಾದನಾ ವೆಚ್ಚ ಹೆಚ್ಚಳ, ಮಾರುಕಟ್ಟೆ ಸವಾಲುಗಳು ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಮುಖ್ಯಮಂತ್ರಿ ಅವರೊಂದಿಗೆ ನಿಯೋಗವು ವಿವರವಾಗಿ ಚರ್ಚಿಸಿತು.

ಅಡಿಕೆ ಬೆಳೆ ರಾಜ್ಯದ ಮಲೆನಾಡು ಹಾಗೂ ಕರಾವಳಿ ಭಾಗದ ಸಾವಿರಾರು ರೈತ ಕುಟುಂಬಗಳ ಪ್ರಮುಖ ಜೀವನಾಧಾರವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಕೃಷಿ ಕಾರ್ಮಿಕರ ಕೊರತೆ, ರಸಗೊಬ್ಬರ ಹಾಗೂ ಕೃಷಿ ಪರಿಕರಗಳ ಬೆಲೆ ಏರಿಕೆ, ಉತ್ಪಾದನಾ ವೆಚ್ಚ ಹೆಚ್ಚಳ, ಹವಾಮಾನ ವೈಪರೀತ್ಯ ಹಾಗೂ ಮಾರುಕಟ್ಟೆಯ ಅನಿಶ್ಚಿತತೆಯಿಂದಾಗಿ ಬೆಳೆಗಾರರು ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಅಡಿಕೆ ಬೆಳೆಗಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಿಯೋಗ ಒತ್ತಾಯಿಸಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಡಿಕೆಗೆ ಸ್ಥಿರ ಹಾಗೂ ನ್ಯಾಯಸಮ್ಮತ ಬೆಲೆ ದೊರೆಯುವಂತೆ ಮಾರುಕಟ್ಟೆ ವ್ಯವಸ್ಥೆಯನ್ನು ಬಲಪಡಿಸುವುದು, ಬೆಳೆಗಾರರಿಗೆ ಅನುಕೂಲವಾಗುವ ರೀತಿಯಲ್ಲಿ ಸಹಕಾರಿ ಸಂಸ್ಥೆಗಳ ಮೂಲಕ ಅಡಿಕೆ ಖರೀದಿ ಮತ್ತು ಮಾರುಕಟ್ಟೆ ವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಯಿತು.

ಅಡಿಕೆ ಬೆಳೆಗಾರರಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಸರ್ಕಾರದ ಮಟ್ಟದಲ್ಲಿ ಸೂಕ್ತ ಪರಿಹಾರ ಕಂಡುಕೊಳ್ಳುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಕ್ರಮ ಕೈಗೊಳ್ಳುವಂತೆ ನಿಯೋಗ ಮನವಿ ಮಾಡಿತು.

ರಾಜ್ಯದ ಅಡಿಕೆ ಬೆಳೆಗಾರರ ಹಿತಾಸಕ್ತಿಯನ್ನು ಕಾಪಾಡಲು ಸರ್ಕಾರದ ಸಹಕಾರ ಅತ್ಯಗತ್ಯವಾಗಿದ್ದು, ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆರಗ ಜ್ಞಾನೇಂದ್ರ ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

ನಿಯೋಗದ ಮನವಿಯನ್ನು ಆಲಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಡಿಕೆ ಬೆಳೆಗಾರರ ಸಮಸ್ಯೆಗಳ ಕುರಿತು ಅಗತ್ಯ ಮಾಹಿತಿ ಪಡೆದು, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಅಡಿಕೆ ಬೆಳೆಗಾರರ ಸಮಸ್ಯೆಗಳಿಗೆ ಸರ್ಕಾರದ ಸ್ಪಂದನೆ ದೊರೆತಿರುವುದು ರೈತ ಸಮುದಾಯದಲ್ಲಿ ಆಶಾಭಾವನೆ ಮೂಡಿಸಿದೆ ಎಂದು ನಿಯೋಗದ ಸದಸ್ಯರು ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular