ಬೆಂಗಳೂರು : “ಮೆಟ್ರೋ ಪ್ರಯಾಣಿಕರಲ್ಲಿ ಭೀತಿ ಮೂಡಿಸಿದ ‘ಗನ್ ಪ್ರಾಂಕ್’ ವಿಡಿಯೋ ಶೂಟಿಂಗ್ ಯತ್ನ ಈಗ ದಂಡದಲ್ಲಿ ಅಂತ್ಯವಾಗಿದೆ. ಜೇಬಿನಲ್ಲಿ ಆಟಿಕೆ ಗನ್ ಇಟ್ಟುಕೊಂಡು ರೀಲ್ಸ್ ಮಾಡಲು ಮುಂದಾಗಿದ್ದ ಪಾಂಡಿಚೇರಿ ಮೂಲದ ಅರ್ಜುನ್ ಎಂಬಾತನನ್ನು ಮೆಟ್ರೋ ಪೊಲೀಸರು ಬಂಧಿಸಿ, ನಿಯಮ ಉಲ್ಲಂಘನೆಗಾಗಿ ದಂಡ ವಿಧಿಸಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಜನರ ನೆಮ್ಮದಿಗೆ ಭಂಗ ತಂದ ಈ ಘಟನೆ ಮೆಟ್ರೋ ಭದ್ರತೆಯ ಬಗ್ಗೆಯೂ ಚರ್ಚೆ ಹುಟ್ಟುಹಾಕಿದೆ.
ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಆಟಿಕೆ ಪಿಸ್ತೂಲ್ ಬಳಸಿ ಪ್ರಾಂಕ್ ವಿಡಿಯೋ ಮಾಡಲು ಯತ್ನಿಸಿದ ಯುವಕನೊಬ್ಬ ಈಗ ಪೊಲೀಸರ ಅತಿಥಿಯಾಗಿ ದಂಡ ಪಾವತಿಸಿದ ಘಟನೆ ನಡೆದಿದೆ.
ಪಾಂಡಿಚೇರಿ ಮೂಲದ ಅರ್ಜುನ್ ಎಂಬ ಯುವಕ ಮೆಟ್ರೋದಲ್ಲಿ ತನ್ನ ಜೇಬಿನಲ್ಲಿ ಆಟಿಕೆ ಗನ್ ಇಟ್ಟುಕೊಂಡು ವಿಡಿಯೋ ಮಾಡಲು ಯತ್ನಿಸಿದ್ದಾನೆ.ಬೆಂಗಳೂರಿನ ದೀಪಾಂಜಲಿ ನಗರ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.ಯುವಕನ ಜೇಬಿನಲ್ಲಿದ್ದ ಗನ್ ನೋಡಿ ಆತಂಕಗೊಂಡ ಸಹ ಪ್ರಯಾಣಿಕರು ತಕ್ಷಣ ಮೆಟ್ರೋ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಸ್ಥಳಕ್ಕೆ ಬಂದ ಭದ್ರತಾ ಸಿಬ್ಬಂದಿ ಮತ್ತು ಪೊಲೀಸರು ಯುವಕನನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ನಡೆಸಿದಾಗ ಅದು ಕೇವಲ ಪ್ರಾಂಕ್ ವಿಡಿಯೋಗಾಗಿ ಬಳಸಿದ ಆಟಿಕೆ ಗನ್ ಎಂದು ತಿಳಿದುಬಂದಿದೆ.ಬಿಎಂಆರ್ಸಿಎಲ್ (BMRCL) ನಿಯಮಗಳ ಉಲ್ಲಂಘನೆಗಾಗಿ ಯುವಕನಿಗೆ 400 ರೂಪಾಯಿ ದಂಡ ವಿಧಿಸಲಾಗಿದ್ದು, ಎಚ್ಚರಿಕೆ ನೀಡಿ ಬಿಡುಗಡೆ ಮಾಡಲಾಗಿದೆ.

