ಮಹಿಳೆಯೊಬ್ಬರ ಖಾಸಗಿ ವಿಡಿಯೋ ಇಟ್ಟುಕೊಂಡು ಲೈಂಗಿಕ ಸಂಪರ್ಕಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ 20 ವರ್ಷದ ಯುವಕನೊಬ್ಬ ದಂಪತಿಯ ಕೈಯಲ್ಲಿ ಭೀಕರವಾಗಿ ಹತ್ಯೆಯಾಗಿರುವ ಘಟನೆ ಗುಜರಾತ್‌ನ ಗಾಂಧಿನಗರ ಜಿಲ್ಲೆಯಲ್ಲಿ ಸಂಭವಿಸಿದೆ. ಯುವಕನ ಮಿತಿಮೀರಿದ ಕಿರುಕುಳದಿಂದ ಬೇಸತ್ತ ಮಹಿಳೆ ತನ್ನ ಪತಿಯೊಂದಿಗೆ ಸೇರಿ ಈ ಭೀಕರ ಹತ್ಯೆ ಮಾಡಿದ್ದಾಳೆ.
ಮೃತ ಯುವಕನ ಮೊಬೈಲ್ ಸ್ವಿಚ್ಡ್ ಆಫ್ ಆಗಿದ್ದರಿಂದ ಹಾಗೂ ಆತನ ಸ್ಕೂಟರ್ ಮನೆಯಲ್ಲೇ ಇದ್ದಿದ್ದರಿಂದ ಸಂಶಯಗೊಂಡ ಸಂಬಂಧಿಕರು ಹುಡುಕಾಟ ನಡೆಸಿದಾಗ ಈ ಭೀಕರ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.
ಸ್ನಾನದ ದೃಶ್ಯ ಸೆರೆಹಿಡಿದು ಶುರುವಾಗಿತ್ತು ಅಸಭ್ಯ ಆಟ !
ಪೊಲೀಸ್ ತನಿಖೆಯ ಪ್ರಕಾರ, ಕೊಲೆಯಾದ ಯುವಕ ಎರಡು ತಿಂಗಳ ಹಿಂದೆ ತನ್ನದೇ ನೆರೆಮನೆಯಲ್ಲಿದ್ದ ವಿವಾಹಿತ ಮಹಿಳೆಯೊಬ್ಬಳು ಸ್ನಾನ ಮಾಡುತ್ತಿದ್ದ ದೃಶ್ಯವನ್ನು ಮೊಬೈಲ್‌ನಲ್ಲಿ ರಹಸ್ಯವಾಗಿ ಚಿತ್ರೀಕರಿಸಿದ್ದ. ಈ ವಿಡಿಯೋ ಕ್ಲಿಪ್ ಅನ್ನು ಆಕೆಗೆ ತೋರಿಸಿ, ತನ್ನೊಂದಿಗೆ ದೈಹಿಕ ಸಂಬಂಧ ಹೊಂದುವಂತೆ ಮಾನಸಿಕ ಹಾಗೂ ಲೈಂಗಿಕ ಕಿರುಕುಳ ನೀಡಲು ಆರಂಭಿಸಿದ್ದ. ಆರಂಭದಲ್ಲಿ ಮರ್ಯಾದೆಗೆ ಅಂಜಿ ಸುಮ್ಮನಿದ್ದ ಮಹಿಳೆ, ಯುವಕನ ಅತಿರೇಕದ ವರ್ತನೆಯಿಂದ ಬೇಸತ್ತು ಕೊನೆಗೆ ತನ್ನ ಪತಿಗೆ ವಿಷಯ ತಿಳಿಸಿದ್ದಾಳೆ. ಪತಿಗೆ ವಿಷಯ ತಿಳಿದಿದೆ ಎಂದು ಗೊತ್ತಿದ್ದರೂ ಆ ಕಾಮುಕ ಯುವಕ ಮಹಿಳೆಗೆ ಕರೆ ಮಾಡುವುದನ್ನು ನಿಲ್ಲಿಸಿರಲಿಲ್ಲ. ಇದು ಪತಿಯ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿತ್ತು.
ಒಂಟಿತನದ ನಾಟಕವಾಡಿ ಕರೆಸಿಕೊಂಡರು, ದುಪಟ್ಟಾ-ಫ್ಯಾನ್ ವೈರ್‌ನಿಂದ ಕೊಂದರು !
ಶನಿವಾರದಂದು ದಂಪತಿ ಯುವಕನನ್ನು ಮುಗಿಸಲು ಪಕ್ಕಾ ಪ್ಲಾನ್ ಮಾಡಿದ್ದರು. ಪ್ಲಾನ್ ಪ್ರಕಾರ ಮಹಿಳೆಯು ಯುವಕನಿಗೆ ಫೋನ್ ಮಾಡಿ, “ನನ್ನ ಪತಿ ಮನೆಯಲ್ಲಿಲ್ಲ, ನಾನು ಒಂಟಿಯಾಗಿದ್ದೇನೆ, ನಮ್ಮ ಮನೆಗೆ ಬಾ” ಎಂದು ನಂಬಿಸಿ ಕರೆಸಿಕೊಂಡಿದ್ದಾಳೆ. ಯುವಕ ಆಸೆಯಿಂದ ಮನೆ ಒಳಗೆ ಬರುತ್ತಿದ್ದಂತೆ ಅಡಗಿದ್ದ ಪತಿ ಆತನ ಮೇಲೆ ಮುಗಿಬಿದ್ದಿದ್ದಾನೆ. ಮಹಿಳೆಯು ಯುವಕ ಕದಲದಂತೆ ಗಟ್ಟಿಯಾಗಿ ಹಿಡಿದುಕೊಂಡರೆ, ಪತಿ ತನ್ನ ಬಳಿಯಿದ್ದ ದುಪಟ್ಟಾದಿಂದ ಯುವಕನ ಕುತ್ತಿಗೆ ಬಿಗಿದಿದ್ದಾನೆ. ಅಷ್ಟಕ್ಕೇ ನಿಲ್ಲಿಸದ ಪತಿ, ಯುವಕ ಪೂರ್ತಿಯಾಗಿ ಪ್ರಾಣ ಬಿಟ್ಟಿರುವುದನ್ನು ಖಚಿತಪಡಿಸಿಕೊಳ್ಳಲು ಎಲೆಕ್ಟ್ರಿಕ್ ಫ್ಯಾನ್‌ನ ವೈರ್‌ನಿಂದಲೂ ಕುತ್ತಿಗೆಯನ್ನು ಬಿಗಿದು ಸಾಯಿಸಿದ್ದಾನೆ.
ಬಳಿಕ ಇಬ್ಬರೂ ಸೇರಿ ಶವವನ್ನು ಬಿಳಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ, ಕಾಂಪೌಂಡ್ ಒಳಗೇ ಎಸೆದು ಮನೆಗೆ ಬೀಗ ಹಾಕಿ ಬೈಕ್‌ನಲ್ಲಿ ಪರಾರಿಯಾಗಿದ್ದರು. ಮಧ್ಯಾಹ್ನದ ವೇಳೆಗೆ ಗ್ರಾಮಸ್ಥರು ಶವವನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಕ್ಕಳನ್ನು ಶಾಲೆಯಿಂದ ಕರೆತಂದು ಸಂಬಂಧಿಕರ ಮನೆಯಲ್ಲಿ ಬಿಟ್ಟಿದ್ದರು !
ಈ ಭೀಕರ ಕೊಲೆಯ ಹಿಂದೆ ದಂಪತಿಯ ಪೂರ್ವಯೋಜಿತ ಸ್ಕೆಚ್ ಇತ್ತು ಎಂಬುದಕ್ಕೆ ಪೊಲೀಸರಿಗೆ ಪ್ರಮುಖ ಸಾಕ್ಷ್ಯ ಸಿಕ್ಕಿದೆ. ಕೊಲೆ ಮಾಡುವ ಕೆಲವೇ ಗಂಟೆಗಳ ಮುನ್ನ ದಂಪತಿ ಮಕ್ಕಳ ಶಾಲೆಗೆ ಹೋಗಿ ಅವರನ್ನು ಕರೆದುಕೊಂಡು ಬಂದಿದ್ದರು. ತದನಂತರ ಸಂಬಂಧಿಕರ ಮನೆಗೆ ಹೋಗಿ ಮಕ್ಕಳನ್ನು ಬಿಡುತ್ತಾ, “ನಾವು ಒಬ್ಬರನ್ನು ಕೊಲೆ ಮಾಡಲು ಹೋಗುತ್ತಿದ್ದೇವೆ, ಪೊಲೀಸರು ನಮ್ಮನ್ನು ಬಂಧಿಸುತ್ತಾರೆ. ಮಕ್ಕಳನ್ನು ನೋಡಿಕೊಳ್ಳಿ,” ಎಂದು ಹೇಳಿ ಹೋಗಿದ್ದರು ಎಂದು ಕಲೋಲ್ ತಾಲೂಕು ಪೊಲೀಸ್ ಇನ್ಸ್‌ಪೆಕ್ಟರ್ ಜೆ.ಜೆ. ಗಧ್ವಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಆರ್.ಎಂ. ಸರೋಡೆ ಅವರು ಮಾತನಾಡಿ, ಶವಪರೀಕ್ಷೆಯ (Postmortem) ವರದಿಯಲ್ಲಿ ಕುತ್ತಿಗೆ ಬಿಗಿದಿದ್ದರಿಂದಲೇ ಸಾವು ಸಂಭವಿಸಿದೆ ಎಂದು ದೃಢಪಟ್ಟಿದೆ. ಪೊಲೀಸರು ಶನಿವಾರ ರಾತ್ರಿಯೇ ಕಾರ್ಯಾಚರಣೆ ನಡೆಸಿ 30ರ ಹರೆಯದ ದಂಪತಿಯನ್ನು ಬಂಧಿಸಿದ್ದಾರೆ. ಕೊಲೆಯಾದ ಯುವಕನ ಮೊಬೈಲ್ ಫೋನ್ ಅನ್ನು ದಂಪತಿ ನಾಶಪಡಿಸಿರುವ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ತನಿಖೆ ಮುಂದುವರಿದಿದೆ.

