HomeKarnatakaಗ್ಯಾರಂಟಿ ಯೋಜನೆಗಳಲ್ಲಿ ಗೋಲ್ ಮಾಲ್: ಸಿಎಂ ಹೇಳಿಕೆಗೂ ಅಂಕಿ-ಅಂಶಗಳಿಗೂ ಹೊಂದಾಣಿಕೆಯೇ ಇಲ್ಲ: ಶ್ವೇತಪತ್ರ ಹೊರಡಿಸಲಿ ಎಂದ...

ಗ್ಯಾರಂಟಿ ಯೋಜನೆಗಳಲ್ಲಿ ಗೋಲ್ ಮಾಲ್: ಸಿಎಂ ಹೇಳಿಕೆಗೂ ಅಂಕಿ-ಅಂಶಗಳಿಗೂ ಹೊಂದಾಣಿಕೆಯೇ ಇಲ್ಲ: ಶ್ವೇತಪತ್ರ ಹೊರಡಿಸಲಿ ಎಂದ ಆರ್.ಅಶೋಕ್

ಬೆಂಗಳೂರು: ಗ್ಯಾರಂಟಿ ಯೋಜನೆಗಳಲ್ಲಿ ಭಾರಿ ಗೋಲ್‌ಮಾಲ್‌ ನಡೆದಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ವಾತಂತ್ರ್ಯ ದಿನಾಅಚರಣೆಯ ಭಾಷಣದಲ್ಲಿ ಹೇಳಿದ ಅಂಶಗಳಿಗೂ ಯೋಜನೆಗ:ಅ ಅಂಕಿ-ಅಂಶಗಳಿಗೂ ವ್ಯತ್ಯಾಸವಿದೆ. ಹಾಗಾಗಿ ಶ್ವೇತಪತ್ರ ಹೊರಡಿಸಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.

ಗ್ಯಾರಂಟಿ ಯೋಜನೆಗಳ ಬಗ್ಗೆ ಸರ್ಕಾರದ ಬಳಿ ಇರುವ ಯಾವುದೇ ಅಂಕಿ-ಅಂಶಗಳು ಹೊಂದಾಣಿಕೆಯಾಗುತ್ತಿಲ್ಲ. ಆದ್ದರಿಂದ ಈ ಕುರಿತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಶ್ವೇತಪತ್ರ ಹೊರಡಿಸಿ ಸದನದಲ್ಲಿ ಸರಿಯಾದ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಶಕ್ತಿ ಯೋಜನೆಯ ಕುರಿತು ಮಾತನಾಡಿದ್ದಾರೆ. ಶಕ್ತಿ ಯೋಜನೆಯಡಿ ರಾಜ್ಯದ 3.5 ಕೋಟಿ ಮಹಿಳೆಯರು 796 ಕೋಟಿ ಉಚಿತ ಪ್ರಯಾಣ ಮಾಡಿದ್ದಾರೆ. ಇದಕ್ಕಾಗಿ ಮೂರು ವರ್ಷಗಳಲ್ಲಿ 14,875 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ಮುಖ್ಯಮಂತ್ರಿಗಳು ಭಾಷಣದಲ್ಲಿ ಹೇಳಿದ್ದಾರೆ. ಆದರೆ ಸರ್ಕಾರಕ್ಕೆ ಮೂರು ವರ್ಷ ಪೂರ್ಣಗೊಂಡ ಸಮಯದಲ್ಲಿ ಮಹಿಳೆಯರು 753.7 ಕೋಟಿ ಉಚಿತ ಪ್ರಯಾಣ ಮಾಡಿದ್ದು, 19,771 ಕೋಟಿ ರೂ. ಮೌಲ್ಯದ ಉಚಿತ ಟಿಕೆಟ್‌ಗಳನ್ನು ನೀಡಲಾಗಿದೆ ಎಂದು ಮುಖ್ಯಮಂತ್ರಿಗಳ ಅಧಿಕೃತ ಎಕ್ಸ್‌ನಿಂದ ಪೋಸ್ಟ್‌ (2026, ಜೂನ್‌ 11) ಮಾಡಲಾಗಿತ್ತು. ಇದಕ್ಕೂ ಮುನ್ನ 2026, ಮೇ 25ರಂದು ಮಾಡಿದ್ದ ಎಕ್ಸ್‌ ಪೋಸ್ಟ್‌ನಲ್ಲಿ 726 ಕೋಟಿ ಉಚಿತ ಪ್ರಯಾಣಗಳಾಗಿದ್ದು, 18,943 ಕೋಟಿ ರೂ. ವ್ಯಯಿಸಲಾದ ಅನುದಾನ ಎಂದು ಉಲ್ಲೇಖಿಸಲಾಗಿದೆ. ಇದನ್ನು ತಾಳೆ ಹಾಕಿದರೆ ಐದಾರು ಸಾವಿರ ಕೋಟಿ ರೂ.ಗಳ ವ್ಯತ್ಯಾಸ ಬರುತ್ತದೆ. ಆಗ ಹೆಚ್ಚಿದ್ದ ಖರ್ಚು ಈಗ ದಿಢೀರನೆ ಕಡಿಮೆಯಾಗಿದ್ದು ಹೇಗೆ ಎಂದು ಸರ್ಕಾರ ಸ್ಪಷ್ಟನೆ ನೀಡಬೇಕಿದೆ ಎಂದು ಅಶೋಕ್ ಒತ್ತಾಯಿಸಿದ್ದಾರೆ.

ಗೃಹಲಕ್ಷ್ಮಿ ಯೋಜನೆಯಲ್ಲಿ ಎರಡು ತಿಂಗಳ 5,000 ಕೋಟಿ ರೂ. ಹಣವನ್ನು ಇನ್ನೂ ನೀಡಿಲ್ಲ. ಇದನ್ನು ನೀಡಲಾಗಿದೆಯೇ ಎಂಬ ಬಗ್ಗೆ ಸರ್ಕಾರದಿಂದ ಇನ್ನೂ ಉತ್ತರ ಸಿಕ್ಕಿಲ್ಲ. ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಮುಖ್ಯಮಂತ್ರಿಗಳು, 1.28 ಕೋಟಿ ಮಹಿಳಾ ಫಲಾನುಭವಿಗಳು ಇದ್ದಾರೆ ಹಾಗೂ ಇದುವರೆಗೆ 76,908 ಕೋಟಿ ರೂ.ಗೂ ಅಧಿಕ ಮೊತ್ತವನ್ನು ನೀಡಿರುವುದಾಗಿ ಹೇಳಿದ್ದಾರೆ. ಆದರೆ ಸರ್ಕಾರ ಮೂರು ವರ್ಷ ಪೂರೈಸಿದ ಸಮಯದಲ್ಲಿ 2026, ಮೇ 26ರಂದು ಮಾಡಿದ್ದ ಪೋಸ್ಟ್‌ನಲ್ಲಿ, 1.24 ಕೋಟಿ ಫಲಾನುಭವಿಗಳಿಗೆ ಈವರೆಗೆ 74,216 ಕೋಟಿ ರೂ. ನೀಡಲಾಗಿದೆ ಎಂದು ತಿಳಿಸಲಾಗಿದೆ. ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್‌ ಗೂಳಿಗೌಡ ಅವರು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳು ಇನ್ನಷ್ಟು ಗೊಂದಲ ಹುಟ್ಟುಹಾಕುತ್ತದೆ. ಈ ಸಮಿತಿಯ ಪ್ರಕಾರ, ಗೃಹಲಕ್ಷ್ಮಿ ಯೋಜನೆಯಡಿ 31 ಕಂತುಗಳಲ್ಲಿ 1.24 ಕೋಟಿ ಮಹಿಳೆಯರಿಗೆ 74,650 ಕೋಟಿ ರೂ. ನೀಡಲಾಗಿದೆ. ಅಂದರೆ ಮೇ ತಿಂಗಳಿಂದ ಈವರೆಗೆ 4 ಲಕ್ಷ ಫಲಾನುಭವಿಗಳು ಹೆಚ್ಚಾಗಿದ್ದಾರೆ. ಅಂಕಿ ಅಂಶಗಳಲ್ಲಿ ಇಷ್ಟೊಂದು ವ್ಯತ್ಯಾಸ ಏಕಿದೆ ಎಂದು ಮುಖ್ಯಮಂತ್ರಿಗಳು ಹೇಳಬೇಕಿದೆ ಎಂದು ಆಗ್ರಹಿಸಿದ್ದಾರೆ.

ಆದ್ದರಿಂದ ಎಲ್ಲ ಗ್ಯಾರಂಟಿ ಯೋಜನೆಗಳ ಅಂಕಿ, ಅಂಶಗಳ ಬಗ್ಗೆ ಸರ್ಕಾರ ನಿಖರವಾದ ಮಾಹಿತಿಯನ್ನು ಸದನಕ್ಕೆ ನೀಡಬೇಕು. ಇಲ್ಲವಾದರೆ ಇದು ಜನರಲ್ಲಿ ಇನ್ನಷ್ಟು ಗೊಂದಲ ಉಂಟು ಮಾಡುತ್ತದೆ. ಹಾಗೆಯೇ ಈ ಯೋಜನೆಗಳಲ್ಲಿ ಅಕ್ರಮ ನಡೆದಿದೆ ಎಂದು ಖಾತರಿಯಾಗುತ್ತದೆ. ಈ ಗೊಂದಲ ನಿವಾರಿಸಲು ಶ್ವೇತಪತ್ರವನ್ನು ಮಂಡಿಸಬೇಕು ಎಂದು ಒತ್ತಾಯಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular