HomeKarnatakaಮೃತರ ಖಾತೆಗೆ ಗೃಹಲಕ್ಷ್ಮಿ ಹಣ ಜಮೆ ಹಿನ್ನೆಲೆ ಫಲಾನುಭವಿಗಳ ಮರು ಪರಿಶೀಲನೆಗೆ ತಾಕೀತು

ಮೃತರ ಖಾತೆಗೆ ಗೃಹಲಕ್ಷ್ಮಿ ಹಣ ಜಮೆ ಹಿನ್ನೆಲೆ ಫಲಾನುಭವಿಗಳ ಮರು ಪರಿಶೀಲನೆಗೆ ತಾಕೀತು

 ಬಳ್ಳಾರಿ: ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಕೇಂದ್ರ ಕಚೇರಿ ಪಟ್ಟಿ ಪ್ರಕಾರ 5,972 ಮಂದಿ ಮರಣ ಹೊಂದಿದ ಫಲಾನುಭವಿಗಳಾಗಿದ್ದು, ಅವರಲ್ಲಿ 3,748 ಜನರಿಗೆ ಯಾವುದೇ ಹಣ ಜಮೆಯಾಗಿಲ್ಲ. ಉಳಿದ 2,224 ಮೃತರ ಖಾತೆಗೆ ಜಮೆಯಾಗಿರುವ ಒಟ್ಟು 2,28,96,000 ರೂ. ಹಣವನ್ನು ಸರ್ಕಾರದ ನಿಯಮಾವಳಿಗಳಂತೆ ನಾಮಿನಿಗಳ ಒಪ್ಪಿಗೆ ಪಡೆದು ಮರುಪಾವತಿ ಮಾಡಿಕೊಳ್ಳಲು ಬ್ಯಾಂಕುಗಳೊಂದಿಗೆ ಸಮನ್ವಯತೆ ಸಾಧಿಸಬೇಕು ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಕೆ.ಇ. ಚಿದಾನಂದಪ್ಪ ಅವರು ಹೇಳಿದರು.

ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ನಗರದ ಕೋಟೆ ಪ್ರದೇಶದ ಜಿಪಂ ಹಳೆಯ ನಜೀರ್ ಸಾಬ್ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಯೋಜನೆ ಆರಂಭವಾದ ಆಗಸ್ಟ್-2023 ರಿಂದ ಮಾರ್ಚ್-2026 ರವರೆಗೆ ಪ್ರತಿ ಫಲಾನುಭವಿಗೆ ಮಾಸಿಕ 2,000 ರೂ. ನಂತೆ ಜಿಲ್ಲೆಯಲ್ಲಿ ಒಟ್ಟು 1667,58,40,000 ರೂ. ಅನುದಾನ ಪಾವತಿಸಲಾಗಿದೆ. ಸಾರ್ವಜನಿಕ ಹಣ ದುರುಪಯೋಗವಾಗದಂತೆ ತಡೆಯಲು ಮತ್ತು ಅರ್ಹರಿಗೆ ಯೋಜನೆ ತಲುಪಿಸಲು ಮೃತಪಟ್ಟ ಫಲಾನುಭವಿಗಳ ನಿಖರ ಸಂಖ್ಯೆಯನ್ನು ಪತ್ತೆಹಚ್ಚಬೇಕು. ಕೇವಲ ಸಾಫ್ಟ್ವೇರ್ ವರದಿಗಳನ್ನು ಅವಲಂಬಿಸದೆ, ಸ್ಥಳೀಯವಾಗಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರ ಮೂಲಕ ಮರು ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸಭೆಯಲ್ಲಿ ತಾಕೀತು ಮಾಡಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಹೊಸ ಪ್ರಕ್ರಿಯೆಗಳು ಸಾರ್ವಜನಿಕವಾಗಿ ಇಂಟರ್ನೆಟ್ ಕೇಂದ್ರಗಳಲ್ಲಿ ಆರಂಭವಾಗಿಲ್ಲ. ಹೀಗಾಗಿ ಸಾರ್ವಜನಿಕರು ಯಾವುದೇ ಗೊಂದಲಕ್ಕೊಳಗಾಗದೆ, ಸೈಬರ್ ಸೆಂಟರ್ ಅಥವಾ ಗ್ರಾಮ್ ಒನ್ ಕೇಂದ್ರಗಳಿಗೆ ಅಲೆಯಬಾರದು. ಮಾರ್ಗಸೂಚಿ ಬಂದ ನಂತರ ಅಂಗನವಾಡಿ ಕಾರ್ಯಕರ್ತೆಯರೇ ನಿಮ್ಮ ಮನೆಗೆ ಬರಲಿದ್ದಾರೆ. ಈ ಕುರಿತು ಗ್ರಾಪಂ ಮಟ್ಟದಲ್ಲಿ ತಿಳಿವಳಿಕೆ ನೀಡಬೇಕು ಎಂದು ಹೇಳಿದರು.

ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್ ಅವರು ಮಾತನಾಡಿ, ‘ಗೃಹಲಕ್ಷ್ಮಿ’ ಯೋಜನೆಯಡಿ ಸೌಲಭ್ಯ ಪಡೆಯುತ್ತಿರುವ ಮೃತ ಫಲಾನುಭವಿಗಳನ್ನು ಗುರುತಿಸಲು ಹಾಗೂ ಬ್ಯಾಂಕ್ ಖಾತೆಗಳ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಇನ್ನು ಮುಂದೆ ಸಾರ್ವಜನಿಕರು ಇ-ಕೆವೈಸಿಗಾಗಿ ಗ್ರಾಮ್ ಒನ್ ಅಥವಾ ಪಂಚಾಯತ್ ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲ, ಬದಲಿಗೆ ಅಂಗನವಾಡಿ ಕಾರ್ಯಕರ್ತೆಯರೇ ಫಲಾನುಭವಿಗಳ ಮನೆ ಬಾಗಿಲಿಗೆ ಬಂದು ಸಮೀಕ್ಷೆ ನಡೆಸಲಿದ್ದಾರೆ. ಯೋಜನೆಯ ಅರ್ಹ ಫಲಾನುಭವಿಗಳ ಮರುಪರಿಶೀಲನೆಗಾಗಿ ಸರ್ಕಾರವು ವಿಶೇಷ ‘ಸಮೀಕ್ಷಾ ಆಪ್’ ಸಿದ್ಧಪಡಿಸುತ್ತಿದ್ದು, ಈ ಆಪ್ ಮೂಲಕ ಅಂಗನವಾಡಿ ಕಾರ್ಯಕರ್ತೆಯರು ಪ್ರತಿ ಮನೆಗೆ ಭೇಟಿ ನೀಡಿ, ರೇಷನ್ ಕಾರ್ಡ್ ಹಾಗೂ ಗೃಹಲಕ್ಷ್ಮಿ ಯೋಜನೆಯ ಸಂಖ್ಯೆಯನ್ನು ದಾಖಲಿಸಲಿದ್ದಾರೆ. ಈ ವೇಳೆ ಫಲಾನುಭವಿ ಜೀವಂತವಾಗಿದ್ದಾರೆಯೇ ಅಥವಾ ಮೃತಪಟ್ಟಿದ್ದಾರೆಯೇ ಎಂಬುದನ್ನು ಸ್ಥಳದಲ್ಲೇ ಖಚಿತಪಡಿಸಿಕೊಳ್ಳಲಾಗುತ್ತದೆ ಎಂದು ವಿವರಿಸಿದರು.

ವಿದ್ಯಾರ್ಥಿ ಬಸ್ ಪಾಸ್ ವಿತರಣೆ, ವೇಗಗೊಳಿಸಲು ಅಧಿಕಾರಿಗಳಿಗೆ ಸೂಚನೆ:

ಬಳ್ಳಾರಿ ಜಿಲ್ಲೆಯಲ್ಲಿ ‘ಶಕ್ತಿ ಯೋಜನೆ’ಯಡಿ ವಿದ್ಯಾರ್ಥಿ ಬಸ್ ಪಾಸ್ ವಿತರಣೆಯು ನಿರೀಕ್ಷಿತ ಮಟ್ಟದಲ್ಲಿ ಆಗದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಬಸ್ ಪಾಸ್ ವಿತರಣೆಯಲ್ಲಿ ಜಿಲ್ಲೆಯು ಕೊನೆಯ ಸ್ಥಾನದಲ್ಲಿದೆ. ಬಳ್ಳಾರಿಯಲ್ಲಿ ಕೇವಲ 4,455 ಪಾಸ್‌ಗಳು ಮಾತ್ರ ವಿತರಣೆಯಾಗಿದ್ದು, ಇದು ಅತ್ಯಂತ ಕಡಿಮೆ ಪ್ರಮಾಣವಾಗಿದೆ. ಪ್ರಗತಿಯನ್ನು ಶೀಘ್ರವಾಗಿ ಸುಧಾರಿಸುವಂತೆ ಕೆಕೆಆರ್‌ಟಿಸಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಉಚಿತ ಬಸ್ ಪಾಸ್ ವಿತರಣೆ ಸಂಖ್ಯೆ 5,000 ದಾಟಿದಾಗ ಸ್ಥಳೀಯ ಶಾಸಕರನ್ನು ಹಾಗೂ ಗ್ಯಾರಂಟಿ ಸಮಿತಿ ಅಧ್ಯಕ್ಷರು, ಸದಸ್ಯರನ್ನು ಆಹ್ವಾನಿಸಿ ಕನಿಷ್ಠ 100 ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ ಬಸ್ ನಿಲ್ದಾಣದಲ್ಲಿ ಸಾರ್ವಜನಿಕವಾಗಿ ಪಾಸ್ ವಿತರಿಸುವ ಮೂಲಕ ಯೋಜನೆಗೆ ಹೆಚ್ಚಿನ ಪ್ರಚಾರ ನೀಡಬೇಕು. ಸರ್ಕಾರದ ಜನಪದ ಕಾರ್ಯಕ್ರಮಗಳು ಸಾರ್ವಜನಿಕರಿಗೆ ತಲುಪಬೇಕಾದರೆ ವ್ಯಾಪಕ ಪ್ರಚಾರ ಅತ್ಯಗತ್ಯ ಎಂದು ತಿಳಿಸಿದರು.

ಗೃಹಜ್ಯೋತಿ ಇ-ಕೆವೈಸಿ ಪ್ರಗತಿ ಪರಿಶೀಲನೆ – ನಕಲಿ ದಾಖಲೆಗಳ ಪತ್ತೆ:

ಜಿಲ್ಲೆಯಲ್ಲಿ ‘ಗೃಹಜ್ಯೋತಿ’ ಯೋಜನೆಯಡಿ ನಕಲಿ ದಾಖಲೆಗಳನ್ನು ತಡೆಗಟ್ಟಲು ಮತ್ತು ಅರ್ಹ ಫಲಾನುಭವಿಗಳನ್ನು ಗುರುತಿಸಲು ಹಮ್ಮಿಕೊಳ್ಳಲಾಗಿರುವ ಎರಡನೇ ಹಂತದ ಇ-ಕೆವೈಸಿ ಪ್ರಕ್ರಿಯೆ ಪ್ರಗತಿ ಸಾಧಿಸಬೇಕು. ಇ-ಕೆವೈಸಿ ಪ್ರಕ್ರಿಯೆಗೆ ವೋಟರ್ ಐಡಿ, ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಅನ್ನು ಕಡ್ಡಾಯಗೊಳಿಸಲಾಗಿದೆ. ಈ ಹಿಂದೆ ಕೇಳಲಾಗಿದ್ದ ಜಾತಿ ಪ್ರಮಾಣಪತ್ರದ ಅಗತ್ಯವನ್ನು ಈಗ ಕೈಬಿಡಲಾಗಿದೆ. ಒಟ್ಟು 3 ಲಕ್ಷ ಗ್ರಾಹಕರ ಪೈಕಿ ಇದುವರೆಗೆ ಕೇವಲ 29,000 ಗ್ರಾಹಕರ ಇ-ಕೆವೈಸಿ ಮಾತ್ರ ಪೂರ್ಣಗೊಂಡಿದೆ. ಅಂದರೆ ಕೇವಲ ಶೇ. 10 ರಷ್ಟು ಪ್ರಗತಿಯಾಗಿದ್ದು, ಇನ್ನು ಶೇ. 90 ರಷ್ಟು ಕೆಲಸ ಬಾಕಿ ಇದೆ. ನಿಗದಿತ ಸಮಯದೊಳಗೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ತಿಳಿಸಿದರು.

ಒಂದು ಆರ್.ಆರ್ ಸಂಖ್ಯೆಗೆ ಒಂದು ಆಧಾರ್ ಕಾರ್ಡ್ ಮಾತ್ರ ಲಿಂಕ್ ಮಾಡಲು ಅವಕಾಶವಿದ್ದು, ಯಾರು ಮನೆಯ ನಿಜವಾದ ಮಾಲೀಕ ಅಥವಾ ಅರ್ಹ ಬಾಡಿಗೆದಾರರೋ ಅವರಿಗೆ ಮಾತ್ರ ಯೋಜನೆ ಅನ್ವಯವಾಗುತ್ತದೆ. ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಸಾರ್ವಜನಿಕರಿಗೆ ಯಾವುದೇ ಗೃಹಜ್ಯೋತಿ ಸಬ್ಸಿಡಿ ಕಡಿತವಾಗುವುದಿಲ್ಲ. ಸದ್ಯಕ್ಕೆ ಇರುವ 3 ಲಕ್ಷ ಫಲಾನುಭವಿಗಳಿಗೂ ಸಬ್ಸಿಡಿ ಮುಂದುವರಿಯಲಿದೆ ಎಂದು ಜೆಸ್ಕಾಂ ಅಧಿಕಾರಿಗಳು ಸಭೆಗೆ ಸ್ಪಷ್ಟತೆ ನೀಡಿದರು.

ಅಧ್ಯಕ್ಷ ಕೆ.ಇ. ಚಿದಾನಂದಪ್ಪ ಅವರು ಮಾತನಾಡಿ, ಯುವನಿಧಿ ಯೋಜನೆಯಡಿ ಸೌಲಭ್ಯ ಪಡೆಯುತ್ತಿರುವ ಅಭ್ಯರ್ಥಿಗಳು ಉನ್ನತ ಶಿಕ್ಷಣಕ್ಕೆ ಸೇರ್ಪಡೆಯಾಗಿದ್ದರೆ, ಅವರಿಗೆ ಯುವನಿಧಿ ಭತ್ಯೆ ಕಡಿತಗೊಳಿಸುವ ವ್ಯವಸ್ಥೆ ಇದೆ. ಆದರೆ, ಯುಯುಸಿಎಂಎಸ್ ಪೋರ್ಟಲ್‌ ನಲ್ಲಿ ತಾಂತ್ರಿಕ ಕಾರಣಗಳಿಂದಾಗಿ ಉನ್ನತ ಶಿಕ್ಷಣ ಪಡೆಯದ ವಿದ್ಯಾರ್ಥಿಗಳೂ ಸಹ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ತಪ್ಪಾಗಿ ತೋರಿಸುತ್ತಿರುವುದು ಬೆಳಕಿಗೆ ಬಂದಿದೆ. ಯಾವುದೇ ವಿದ್ಯಾರ್ಥಿ ಉನ್ನತ ಶಿಕ್ಷಣ ಪಡೆಯುತ್ತಿಲ್ಲದಿದ್ದರೂ, ಪೋರ್ಟಲ್‌ನಲ್ಲಿ ತಪ್ಪು ಮಾಹಿತಿ ಪ್ರದರ್ಶನವಾಗುತ್ತಿದ್ದರೆ, ಅಂತಹ ಪ್ರಕರಣಗಳನ್ನು ಮರುಪರಿಶೀಲಿಸಿ ನೈಜ ಪಟ್ಟಿ ಸಿದ್ಧಪಡಿಸುವಂತೆ ಜಿಲ್ಲಾ ಉದ್ಯೋಗಾಧಿಕಾರಿಗೆ ಸೂಚಿಸಿದರು.

ಜಿಲ್ಲೆಯ ಒಟ್ಟು ಜನಸಂಖ್ಯೆಯಲ್ಲಿ ಶೇ.90 ರಷ್ಟು ಜನ ಪಡಿತರ ಚೀಟಿಗಳನ್ನು ಹೊಂದಿದೆ. ಸರ್ಕಾರದ ನಿಯಮಾವಳಿಗಳ ಪ್ರಕಾರ ವಾರ್ಷಿಕ ಆದಾಯ 1,20,000 ರೂ. ಗಳಿಗಿಂತ ಹೆಚ್ಚಿರುವವರು, ಸ್ವಂತದ ನಾಲ್ಕು ಚಕ್ರದ ವಾಹನ ಹೊಂದಿರುವವರು, ಆದಾಯ ತೆರಿಗೆ ಪಾವತಿದಾರರು ಹಾಗೂ ಗ್ರಾಮೀಣ ಭಾಗದಲ್ಲಿ 7.5 ಎಕರೆಗಿಂತ ಹೆಚ್ಚು ಜಮೀನು ಹೊಂದಿರುವವರು ಬಿಪಿಎಲ್ ಕಾರ್ಡ್ ಪಡೆಯಲು ಅನರ್ಹರಾಗಿರುತ್ತಾರೆ. ಇಂತಹ ನಿಯಮ ಉಲ್ಲಂಘಿಸಿ ಕಾರ್ಡ್ ಪಡೆದಿರುವವರನ್ನು ಪತ್ತೆ ಹಚ್ಚಬೇಕು ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಆಹಾರ ಇಲಾಖೆಯ ಉಪನಿರ್ದೇಶಕ ಕೆ.ಆರ್.ದೇವರಾಜ್ ಅವರು, ಜಿಲ್ಲೆಯಲ್ಲಿ ಸುಮಾರು 6,000ಕ್ಕೂ ಹೆಚ್ಚು ಅನುಮಾನಾಸ್ಪದ ಕಾರ್ಡ್ ಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಡ್ರೈವ್ ಮೂಲಕ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಭೆಗೆ ತಿಳಿಸಿದರು.

ಜಿಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಅವರು ಮಾತನಾಡಿ, ಬಳ್ಳಾರಿ ಭಾಗದ ಜನರ ಮುಖ್ಯ ಆಹಾರ ಜೋಳವಾಗಿರುವುದರಿಂದ, ಅಕ್ಕಿಯ ಪ್ರಮಾಣವನ್ನು ಕೊಂಚ ಕಡಿತಗೊಳಿಸಿ ಪರ್ಯಾಯ ಧಾನ್ಯ ನೀಡಬೇಕು ಎಂದರು. ಇದಕ್ಕೆ ಆಹಾರ ಇಲಾಖೆಯ ಉಪನಿರ್ದೇಶಕರು ಪ್ರತಿಕ್ರಿಯಿಸಿ, ಜುಲೈ ತಿಂಗಳಿನಿಂದ ಪ್ರತಿ ಕಾರ್ಡ್ ಗೆ 3 ಕೆಜಿ ಜೋಳ ಹಾಗೂ 2 ಕೆಜಿ ರಾಗಿ ನೀಡುವ ಕುರಿತು ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಜಿಪಂ ಉಪಕಾರ್ಯದರ್ಶಿ ಶಶಿಕಾಂತ್ ಶಿವಪುರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಮಕೃಷ್ಣ ನಾಯಕ, ಬಳ್ಳಾರಿ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಗೋನಾಳ್ ನಾಗಭೂಷಣ ಗೌಡ, ಸಂಡೂರು ತಾಲ್ಲೂಕು ಅಧ್ಯಕ್ಷ ನೂರುದ್ದೀನ್.ಎಸ್., ಕಂಪ್ಲಿ ತಾಲ್ಲೂಕು ಅಧ್ಯಕ್ಷ ಶ್ರೀನಿವಾಸರಾವ್, ಕುರುಗೋಡು ತಾಲ್ಲೂಕು ಅಧ್ಯಕ್ಷ ಜಿ.ಬಸವನಗೌಡ ಸೇರಿದಂತೆ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular