ವಾಟ್ಸಾಪ್ ಬಳಕೆದಾರರಿಗೆ ಮತ್ತೊಂದು ಅದ್ಭುತ ಫೀಚರ್ ಲಭ್ಯವಾಗಿದೆ. ಇದುವರೆಗೆ ವಾಯ್ಸ್ ಮತ್ತು ವಿಡಿಯೋ ಕಾಲಿಂಗ್ ಆಯ್ಕೆಯು ಕೇವಲ ಮೊಬೈಲ್ ಆ್ಯಪ್ ಅಥವಾ ಡೆಸ್ಕ್ಟಾಪ್ ಆ್ಯಪ್ಗೆ ಮಾತ್ರ ಸೀಮಿತವಾಗಿತ್ತು. ಇದರಿಂದಾಗಿ ಕಾಲ್ ಮಾಡಬೇಕೆಂದರೆ ಮೊಬೈಲ್ ಆ್ಯಪ್ ತೆರೆಯುವುದು ಅನಿವಾರ್ಯವಾಗಿತ್ತು. ಆದರೆ ಇನ್ಮುಂದೆ ಆ ತೊಂದರೆ ಇರುವುದಿಲ್ಲ. ವಾಟ್ಸಾಪ್ ವೆಬ್ (WhatsApp Web) ವರ್ಷನ್ನಲ್ಲಿಯೂ ಇನ್ನು ಮುಂದೆ ವಾಯ್ಸ್ ಮತ್ತು ವಿಡಿಯೋ ಕಾಲ್ ಮಾಡಬಹುದು.
ಹೌದು, ವಾಟ್ಸಾಪ್ ಈ ಫೀಚರ್ ಅನ್ನು ಸದ್ದಿಲ್ಲದೆ ಆರಂಭಿಸುತ್ತಿದೆ. ಹಲವು ವರ್ಷಗಳಿಂದ ಈ ಫೀಚರ್ಗಾಗಿ ಕಾಯುತ್ತಿದ್ದ ಬಳಕೆದಾರರ ಕನಸು ಈಗ ನನಸಾಗಿದೆ.
ಬ್ರೌಸರ್ನಿಂದಲೇ ಕರೆಗಳು
ಇನ್ಮುಂದೆ ವಾಟ್ಸಾಪ್ ವೆಬ್ ಮೂಲಕವೂ ನೇರವಾಗಿ ವಾಯ್ಸ್ ಮತ್ತು ವಿಡಿಯೋ ಕಾಲ್ ಮಾಡಬಹುದು. ದಿನನಿತ್ಯದ ಕೆಲಸಗಳು ಮತ್ತು ಚಾಟ್ಗಳಿಗಾಗಿ ಬ್ರೌಸರ್ ಬಳಸುವವರಿಗೆ ಇದು ತುಂಬಾ ಉಪಯುಕ್ತವಾಗಲಿದೆ. ಕಚೇರಿ ಕೆಲಸ ಮಾಡುವ ಉದ್ಯೋಗಿಗಳು, ವಿದ್ಯಾರ್ಥಿಗಳು ಮತ್ತು ದಿನವಿಡೀ ಕಂಪ್ಯೂಟರ್ ಬಳಸುವವರಿಗೆ ಇದು ಸಮಯ ಉಳಿತಾಯ ಮಾಡುವುದಲ್ಲದೆ, ಪ್ರತಿ ಸಣ್ಣ ವಿಷಯಕ್ಕೂ ಮೊಬೈಲ್ ನೋಡುವ ಅಗತ್ಯವನ್ನು ತಪ್ಪಿಸುತ್ತದೆ.
ಸದ್ಯಕ್ಕೆ ಈ ಫೀಚರ್ ಮೂಲಕ ಒಬ್ಬರಿಗೆ ಮಾತ್ರ (One-to-One) ಕಾಲ್ ಮಾಡಲು ಸಾಧ್ಯವಿದೆ. ಈಗ ಕೆಲವೇ ಕೆಲವು ಬಳಕೆದಾರರಿಗೆ ಈ ಅಪ್ಡೇಟ್ ಕಾಣಿಸಿಕೊಳ್ಳುತ್ತಿದ್ದು, ಶೀಘ್ರದಲ್ಲೇ ಎಲ್ಲರಿಗೂ ಲಭ್ಯವಾಗಲಿದೆ. ಪ್ರಸ್ತುತ ಗ್ರೂಪ್ ಕಾಲಿಂಗ್ ಸೌಲಭ್ಯವಿಲ್ಲದಿದ್ದರೂ, ಭವಿಷ್ಯದಲ್ಲಿ ಆ ಫೀಚರ್ ತರಲು ವಾಟ್ಸಾಪ್ ಪ್ರಯತ್ನಿಸುತ್ತಿದೆ.
ಸಂಪೂರ್ಣ ಭದ್ರತೆ (End-to-End Encryption)
ಈ ಕರೆಗಳು ಕೂಡ ಎಂಡ್-ಟು-ಎಂಡ್ ಎನ್ಕ್ರಿಪ್ಶನ್ ಹೊಂದಿರುತ್ತವೆ. ಅಂದರೆ ನೀವು ಮಾತನಾಡುವ ವಿಷಯಗಳು ವಾಟ್ಸಾಪ್ ಅಥವಾ ಮೆಟಾ ಸಂಸ್ಥೆಗೂ ತಿಳಿಯುವುದಿಲ್ಲ. ಇದು ಡಿಫಾಲ್ಟ್ ಆಗಿ ಇರುವುದರಿಂದ ನಿಮ್ಮ ಕರೆಗಳು ಸುರಕ್ಷಿತ ಮತ್ತು ರಹಸ್ಯವಾಗಿರುತ್ತವೆ.
ಶೀಘ್ರದಲ್ಲೇ ವೆಬ್ ವರ್ಷನ್ನಲ್ಲಿ ಬರಲಿರುವ ಇತರ ಫೀಚರ್ಗಳು:
• ವೆಬ್ ವರ್ಷನ್ನಲ್ಲಿ ಏಕಕಾಲಕ್ಕೆ 32 ಮಂದಿ ಗ್ರೂಪ್ ವಿಡಿಯೋ ಕಾಲ್ನಲ್ಲಿ ಭಾಗವಹಿಸುವ ಅವಕಾಶ.
• ವಿಡಿಯೋ ಕಾಲ್ಗೆ ಸೇರಲು ಲಿಂಕ್ಗಳನ್ನು ಶೇರ್ ಮಾಡುವುದು.
• ವಿಡಿಯೋ ಕಾಲ್ ಶೆಡ್ಯೂಲ್ (Schedule) ಮಾಡುವ ಆಯ್ಕೆ.
• ವಿಡಿಯೋ ಕಾಲ್ ಸಮಯದಲ್ಲಿ ಸ್ಕ್ರೀನ್ ಶೇರಿಂಗ್ (Screen Sharing).
• ಸ್ಕ್ರೀನ್ ಶೇರಿಂಗ್ ಮೂಲಕ ಕಚೇರಿಯ ದಾಖಲೆಗಳನ್ನು ಇತರರಿಗೆ ಸುಲಭವಾಗಿ ತೋರಿಸಬಹುದು.
• ವಿದ್ಯಾರ್ಥಿಗಳಿಗೂ ಈ ಫೀಚರ್ಗಳು ತುಂಬಾ ಸಹಕಾರಿಯಾಗಲಿವೆ.
ನೀವು ವಾಟ್ಸಾಪ್ ವೆಬ್ ಬಳಸುತ್ತಿದ್ದರೆ, ನಿಮ್ಮ ಬ್ರೌಸರ್ ಅನ್ನು ಒಮ್ಮೆ ಅಪ್ಡೇಟ್ ಮಾಡಿ ಈ ಹೊಸ ಫೀಚರ್ ಬಂದಿದೆಯೇ ಎಂದು ಪರೀಕ್ಷಿಸಿ.

