ನವದೆಹಲಿ: ಕಾರ್ಮಿಕರ ಭವಿಷ್ಯ ನಿಧಿಗೆ ಅರ್ಹತೆ ಪಡೆಯಲು ನಿಗದಿಪಡಿಸಿದ ಮೂಲವೇತನ ಮಿತಿಯನ್ನು 15 ರಿಂದ 25 ಸಾವಿರ ರೂ.ಗೆ ಹೆಚ್ಚಳ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಇಪಿಎಫ್ಒ ಮಿತಿಯನ್ನು ಹೆಚ್ಚಿಸುವ ಪ್ರಸ್ತಾವನೆ ಮುಂದಿನ ವರ್ಷದ ಆರಂಭದಲ್ಲಿ ಕೇಂದ್ರ ಟ್ರಸ್ಟಿಗಳ ಮಂಡಳಿಯ ಮುಂದೆ ಬರಲಿದ್ದು, ಅಲ್ಲಿ ಚರ್ಚಿಸಿದ ಬಳಿಕ ಅಧಿಕೃತ ಪ್ರಕಟಣೆ ಹೊರಬೀಳಲಿದೆ.
ಸಾಮಾಜಿಕ ಸುರಕ್ಷಾ ತಜ್ಞರು ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಇಪಿಎಫ್ ಸೇರ್ಪಡೆಗೆ ಮೂಲವೇತನ ಮಿತಿ ಹೆಚ್ಚಳವಾದರೆ ಸಾಮಾಜಿಕ ಭದ್ರತಾ ವ್ಯವಸ್ಥೆ ಇನ್ನಷ್ಟು ಬಲವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ನಿಯಮ ಜಾರಿಯಾದಲ್ಲಿ 25,000 ರೂ. ಮತ್ತು ಇದಕ್ಕಿಂತ ಕಡಿಮೆ ವೇತನ ಇರಬಹುದಾದ ಉದ್ಯೋಗಿಗಳಿಗೆ ಕಂಪನಿಗಳು ಕಡ್ಡಾಯವಾಗಿ ಇಪಿಎಫ್ ಖಾತೆ ತೆರೆಯಬೇಕಾಗುತ್ತದೆ. ಇದರಿಂದ ಒಂದು ಕೋಟಿಗೂ ಹೆಚ್ಚು ಉದ್ಯೋಗಿಗಳು ಮತ್ತು ನೌಕರರ ಪಿಂಚಣಿ ಯೋಜನೆ -ಇಪಿಎಸ್ ವ್ಯಾಪ್ತಿಗೆ ಬರುವ ಸಾಧ್ಯತೆ ಇದೆ.
2014ಕ್ಕೆ ಮೊದಲು ಪಿಎಫ್ ಗೆ ಅರ್ಹರಾಗಲು ವೇತನದ ಮಿತಿ 6,500 ರೂ. ಆಗಿತ್ತು. 2014ರಲ್ಲಿ ಅದನ್ನು 15,000ರೂ.ಗೆ ಹೆಚ್ಚಳ ಮಾಡಲಾಯಿತು. ಇದರಿಂದ ಲಕ್ಷಾಂತರ ಉದ್ಯೋಗಿಗಳಿಗೆ ಇಪಿಎಫ್ ಭಾಗ್ಯ ದೊರೆತಿತ್ತು. ಈಗ 25,000 ರೂ. ಮಿತಿ ಹೆಚ್ಚಳ ಮಾಡಿದಲ್ಲಿ ಉದ್ಯೋಗಿಗಳ ಸಂಖ್ಯೆ ಹೆಚ್ಚಳವಾಗುತ್ತದೆ.
ಇಪಿಎಫ್ ಗೆ ಅರ್ಹತೆ ಹೊಂದಲು ಮೂಲವೇತನ ಮತ್ತು ತುಟ್ಟಿ ಭತ್ಯೆ ಎರಡು ಸೇರಿ ಮಾಸಿಕ 15,000 ರೂ. ಎಂದು ಮಿತಿ ಹಾಕಲಾಗಿದೆ. ಈ 15000 ರೂ.ಗಿಂತ ಕಡಿಮೆ ವೇತನ ಇರುವವರಿಗೆ ಕಂಪನಿಗಳು ಇಪಿಎಫ್ ಖಾತೆ ತೆರೆಯುವುದು ಕಡ್ಡಾಯ. ಇದಕ್ಕಿಂತ ಹೆಚ್ಚು ಮೂಲವೇತನ ಹೊಂದಿದ ಉದ್ಯೋಗಿಗಳಿಗೆ ಉದ್ಯೋಗದಾತರು ಖಾತೆ ತೆರೆಯುವುದು ಕಡ್ಡಾಯವಲ್ಲ, ಐಚ್ಚಿಕವಾಗಿರುತ್ತದೆ.
