ರಾಜ್ಯದ ಗ್ರಾಮ ಪಂಚಾಯತಿಗಳಲ್ಲಿ 2025-26ನೇ ಸಾಲಿನಲ್ಲಿ ಫೆಬ್ರವರಿ 18ರವರೆಗೆ ಶೇ. 71.39ರಷ್ಟು ತೆರಿಗೆ ಸಂಗ್ರಹವಾಗಿದ್ದು, ಈ ವರ್ಷಾಂತ್ಯಕ್ಕೆ ಗುರಿ ತಲುಪುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಕಟಣೆ ತಿಳಿಸಿದೆ.
“ಕಳೆದ ವರ್ಷಗಳಲ್ಲಿ ಉಳಿದಿರುವ ಬಾಕಿ ಕರ ಸಂಗ್ರಹಣೆಗೂ ಕ್ರಮ ಕೈಗೊಳ್ಳಲಾಗಿದೆ. ಪ್ರಸಕ್ತ ಸಾಲಿನ ಬಾಕಿಯನ್ನು ಮಾರ್ಚ್ 2026ರ ಅಂತ್ಯದೊಳಗೆ ವಸೂಲಾತಿ ಮಾಡಿ ಪ್ರಗತಿ ಸಾಧಿಸಲಾಗುವುದು. ಹಿಂದಿನ ಸಾಲುಗಳ ತೆರಿಗೆ ಬಾಕಿ 3352.4 ಕೋಟಿಗಳಿದ್ದು ಆಸ್ತಿ ವರ್ಗೀಕರಣವಾರು ತೆರಿಗೆ ಬಾಕಿ ಪ್ರತ್ಯೇಕಿಸಿ ಸಂಗ್ರಹಿಸಲಾಗುತ್ತಿದೆ” ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
“ಕಳೆದ 5 ವರ್ಷಗಳಲ್ಲಿ ತೆರಿಗೆ ಬೇಡಿಕೆ ದ್ವಿಗುಣವಾಗಿದ್ದು, ತೆರಿಗೆ ವಸೂಲಾತಿಯ ಮೊತ್ತ ಕೂಡ ಹೆಚ್ಚಳವಾಗಿದೆ. ಆದ್ದರಿಂದ 2024-25ನೇ ಸಾಲಿನಲ್ಲಿ ಕರ್ನಾಟಕ ರಾಜ್ಯವು ದೇಶದಲ್ಲಿಯೇ ಅತಿ ಹೆಚ್ಚು ತೆರಿಗೆ ವಸೂಲಾತಿ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ” ಎಂದು ಹೇಳಿದರು.
ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ತೆರಿಗೆ ವಸೂಲಾತಿ ಆಂದೋಲನಗಳನ್ನು ವಿನೂತನವಾಗಿ ಹಮ್ಮಿಕೊಂಡು ಮಾಹಿತಿ, ಶಿಕ್ಷಣ, ಸಂವಹನದ ಮೂಲಕ ಹಾಗೂ ಸಾಮಾಜಿಕ ಜಾಲತಾಣದ ಮೂಲಕ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತೆರಿಗೆ ಪಾವತಿ ಬಗ್ಗೆ, ವಿನಾಯಿತಿಗಳ ಬಗ್ಗೆ ಸಾಕಷ್ಟು ಪ್ರಚಾರಗಳನ್ನು ಮಾಡಿ, ತೆರಿಗೆ ವಸೂಲಾತಿ ಹೆಚ್ಚಳಕ್ಕೆ ಕ್ರಮವಹಿಸುತ್ತಿದ್ದಾರೆ.
ಯಾವ-ಯಾವ ಜಿಲ್ಲೆ?: ವಿಜಯನಗರ ಜಿಲ್ಲಾ ಪಂಚಾಯತಿ ವ್ಯಾಪ್ತಿಯ 137 ಗ್ರಾಮ ಪಂಚಾಯತಿಗಳಲ್ಲಿ ಹಮ್ಮಿಕೊಳ್ಳಲಾಗಿರುವ ವಿಶೇಷ ತೆರಿಗೆ ವಸೂಲಾತಿ ಅಭಿಯಾನದಲ್ಲಿ ಒಟ್ಟು 3.07 ಕೋಟಿ ರೂ. ಗಳಷ್ಟು ತೆರಿಗೆ ವಸೂಲಾತಿ ಮಾಡಲಾಗಿದೆ. ಯಾದಗಿರಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ 122 ಗ್ರಾಮ ಪಂಚಾಯತಿಗಳಲ್ಲಿ ಒಂದು ದಿನ ಆಸ್ತಿ ತೆರಿಗೆ ಅಭಿಯಾನದಲ್ಲಿ ಒಟ್ಟು 3.12 ಕೋಟಿ ರೂ.ಗಳಷ್ಟು ತೆರಿಗೆಯನ್ನು ವಸೂಲಾತಿ ಮಾಡಲಾಗಿದೆ.
ಸಾರ್ವಜನಿಕರು ತಾವಿರುವಲ್ಲಿಯೇ ತಮ್ಮ ಆಸ್ತಿಗೆ ಸಂಬಂಧಿಸಿದಂತೆ ತೆರಿಗೆ ಪಾವತಿಗಾಗಿ ಫೋನ್ ಪೇ, ಗೂಗಲ್ ಪೇ, , ಇಲಾಖೆಯ ಬಾಪೂಜಿ ಸೇವಾ ಕೇಂದ್ರಗಳ ಮೂಲಕ ತೆರಿಗೆ ಪಾವತಿಗೆ ಅವಕಾಶ ಕಲ್ಪಿಸಲಾಗಿದೆ ಹಾಗೂ ಆಸ್ತಿ ತೆರಿಗೆ ಸಂಬಂಧ ಪಾವತಿಸಬೇಕಾದ ತೆರಿಗೆಯ ವಿವರಗಳನ್ನು ವೀಕ್ಷಿಸಲು ಪಂಚಮಿತ್ರ ತಂತ್ರಾಂಶದಲ್ಲಿ ಅವಕಾಶವನ್ನು ಕಲ್ಪಿಸಲಾಗಿದೆ ಎಂದೂ ಸಚಿವರು ಹೇಳಿದ್ದಾರೆ.
ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಗ್ರಾಮಠಾಣಗಳ ಹೊರಗೆ ಭೂಪರಿವರ್ತನೆ ಮಾಡಿಸದೆ, ಮನೆ ನಿರ್ಮಿಸಿಕೊಂಡು ವಾಸಿಸುವ ಜನರಿಗೆ ಕುಡಿಯುವ ನೀರು, ಬೀದಿ ದೀಪ, ರಸ್ತೆ, ಚರಂಡಿ ಇತ್ಯಾದಿ ನಾಗರಿಕ ಸೌಲಭ್ಯಗಳನ್ನು ನೀಡಲಾಗುತ್ತಿದೆ.
ಗ್ರಾಮ ಪಂಚಾಯತಿಗಳಿಗೆ ಇದು ಆರ್ಥಿಕವಾಗಿ ಹೊರೆಯಾಗುತ್ತಿತ್ತು. ಈ ಹಿನ್ನಲೆಯಲ್ಲಿ ಸರ್ಕಾರ ದೃಢ ನಿರ್ಧಾರ ತೆಗೆದುಕೊಂಡು ಕರ್ನಾಟಕ ಗ್ರಾಮ ಸ್ವರಾಜ್ ಹಾಗೂ ಪಂಚಾಯತ್ ರಾಜ್ ಅಧಿನಿಯಮ-1993 ಪ್ರಕರಣ 199ಕ್ಕೆ ತಿದ್ದುಪಡಿ ತಂದು ಪ್ರಕರಣ 199ಬಿ ಹಾಗೂ 199ಸಿ ಸೇರಿಸಲಾಗಿರುತ್ತದೆ.
ತಿದ್ದುಪಡಿಯನ್ನು ದಿನಾಂಕ 07.04.2025 ರಂದು ಅಧಿಸೂಚಿಸಲಾಗಿರುತ್ತದೆ. ಅದರನ್ವಯ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯತಿಗಳ ತೆರಿಗೆ, ದರ ಮತ್ತು ಶುಲ್ಕಗಳು) ನಿಯಮಗಳು- 2025ನ್ನು ರೂಪಿಸಲಾಗಿದೆ. ಈ ನಿಯಮಗಳು ದಿನಾಂಕ 17.10.2025ರಿಂದ ಜಾರಿಗೆ ಬಂದಿದ್ದು, ತನ್ಮೂಲಕ ಗ್ರಾಮ ಪಂಚಾಯತಿಗಳ ಸ್ವಂತ ಸಂಪನ್ಮೂಲ ಹೆಚ್ಚಿಸಲು ಹಲವಾರು ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ತೆರಿಗೆ ವಸೂಲಾತಿಯಿಂದ ಗ್ರಾಮ ಪಂಚಾಯತಿಗಳ ಸ್ವಂತ ಸಂಪನ್ಮೂಲ ವೃದ್ಧಿಯಾಗಲಿದ್ದು ಅದರಿಂದ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಅನುಕೂಲವಾಗುತ್ತದೆ ಹಾಗೂ ಸ್ಥಳೀಯ ಸರ್ಕಾರಗಳಾದ ಗ್ರಾಮ ಪಂಚಾಯತಿಗಳ ಆರ್ಥಿಕ ಸಬಲೀಕರಣಕ್ಕೆ ಪೂರಕವಾಗಿದೆ.

