ಬೆಂಗಳೂರು: ಹದಿನೈದನೇ ಹಣಕಾಸು ಆಯೋಗದ ಅನುದಾನ ಬಿಡುಗಡೆ ವಿಳಂಬ ಹಾಗೂ ಇ-ಸ್ವತ್ತು 2.0 ತಂತ್ರಾಂಶದ ತಾಂತ್ರಿಕ ಸಮಸ್ಯೆಗಳಿಂದ ರಾಜ್ಯದ ಗ್ರಾಮ ಪಂಚಾಯಿತಿಗಳ ಕಾರ್ಯನಿರ್ವಹಣೆಗೆ ತೀವ್ರ ಅಡಚಣೆ ಉಂಟಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘವು ಪ್ರಕಟಣೆಯಲ್ಲಿ ತಿಳಿಸಿದೆ.
ಅನುದಾನ ವಿಳಂಬದಿಂದ ಕುಡಿಯುವ ನೀರು, ನೈರ್ಮಲ್ಯ, ಬೀದಿ ದೀಪ ನಿರ್ವಹಣೆ, ಸ್ವಚ್ಛತಾ ಸಿಬ್ಬಂದಿ ವೇತನ ಹಾಗೂ ಕಚೇರಿ ನಿರ್ವಹಣೆಯಂತಹ ಮೂಲಭೂತ ಸೇವೆಗಳನ್ನು ಒದಗಿಸಲು ಸಮಸ್ಯೆಯಾಗುತ್ತಿದೆ. ಈ ಪರಿಸ್ಥಿತಿಗೆ ಸಂಬಂಧಿಸಿದಂತೆ ಸರ್ಕಾರದ ವಿಳಂಬ ಕ್ರಮದ ಬಗ್ಗೆ ಸಂಘವು ತೀವ್ರವಾಗಿ ಆಕ್ಷೇಪಿಸಿದೆ.
2024-25 ಹಾಗೂ 2025-26ನೇ ಸಾಲಿನ ಹದಿನೈದನೇ ಹಣಕಾಸು ಆಯೋಗದ ಅನುದಾನ ಸಮರ್ಪಕವಾಗಿ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ ಎಂದು ಸಂಘದ ರಾಜ್ಯಾಧ್ಯಕ್ಷ ದಿಲೀಪ್ ಕುಮಾರ್ ಬಿ.ಎಂ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದರ ಜೊತೆಗೆ ಇ-ಸ್ವತ್ತು 2.0 ತಂತ್ರಾಂಶ ಜಾರಿಯಾದ ಬಳಿಕ ರಾಜ್ಯದಾದ್ಯಂತ ಹಲವು ತಾಂತ್ರಿಕ ಸಮಸ್ಯೆಗಳು ಮುಂದುವರಿದಿವೆ. 11ಬಿ, ಸಿ.ಇ.ಒ.ಲಾಗಿನ್, ಹೊಸ ಅರ್ಜಿ ಅನುಮೋದನೆ, ದಾಖಲೆ ತಿದ್ದುಪಡಿ ಸೇರಿದಂತೆ ಹಲವು ಪ್ರಕ್ರಿಯೆಗಳು ವಿಳಂಬವಾಗುತ್ತಿದ್ದು, ಸಾರ್ವಜನಿಕರಿಗೆ ಸಮಯಕ್ಕೆ ಸರಿಯಾಗಿ ಸೇವೆ ಒದಗಿಸಲು ಅಡಚಣೆ ಉಂಟಾಗಿದೆ ಎಂದು ಸಂಘ ತಿಳಿಸಿದೆ.
ತಾಂತ್ರಿಕ ದೋಷಗಳು ಹಾಗೂ ಅನುದಾನ ಬಿಡುಗಡೆ ವಿಳಂಬದಿಂದ ಉಂಟಾಗುತ್ತಿರುವ ಸಮಸ್ಯೆಗಳಿಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡುವುದು ಸರಿಯಲ್ಲ. ಇಂತಹ ಕ್ರಮಗಳಿಗೆ ಸಂಘವು ತೀವ್ರವಾಗಿ ಆಕ್ಷೇಪಿಸಿದ್ದು, ಸರ್ಕಾರ ಕೂಡಲೇ ಬಾಕಿ ಅನುದಾನ ಬಿಡುಗಡೆ ಮಾಡಿ, ಇ-ಸ್ವತ್ತು 2.0 ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.
10 ದಿನಗಳೊಳಗೆ ಅನುದಾನ ಬಿಡುಗಡೆ, ಪರ್ಯಾಯ ಆರ್ಥಿಕ ನೆರವು ಹಾಗೂ ಇ-ಸ್ವತ್ತು ಸಮಸ್ಯೆಗಳ ಪರಿಹಾರ ಕುರಿತು ಸ್ಪಷ್ಟ ಕ್ರಮ ಕೈಗೊಳ್ಳದಿದ್ದರೆ ರಾಜ್ಯದಾದ್ಯಂತ ಗ್ರಾಮ ಪಂಚಾಯಿತಿ ಸೇವೆಗಳನ್ನು ಸ್ಥಗಿತಗೊಳಿಸುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷರ ಸೂಚನೆ ಮೇರೆಗೆ ಜಿಲ್ಲಾ ಘಟಕವು ಪ್ರಕಟಣೆಯಲ್ಲಿ ಎಚ್ಚರಿಸಿದೆ.
ಚಿತ್ರಕೃಪೆ: ಎಐ

