HomeKarnatakaಡಿಜಿಸಿಎ ತಾಂತ್ರಿಕ ಪರಿಶೀಲನೆ ಬಳಿಕ ವಿಮಾನ ನಿಲ್ದಾಣ ನಿರ್ಮಾಣ ಬಗ್ಗೆ ಸರ್ಕಾರ ನಿರ್ಧಾರ: ಡಿಸಿಎಂ ಪರಮೇಶ್ವರ್

ಡಿಜಿಸಿಎ ತಾಂತ್ರಿಕ ಪರಿಶೀಲನೆ ಬಳಿಕ ವಿಮಾನ ನಿಲ್ದಾಣ ನಿರ್ಮಾಣ ಬಗ್ಗೆ ಸರ್ಕಾರ ನಿರ್ಧಾರ: ಡಿಸಿಎಂ ಪರಮೇಶ್ವರ್

ಬೆಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತುಮಕೂರು ಬಳಿಯೇ ಆಗಲಿ ಎಂಬ ಇಚ್ಛೆಯನ್ನು ನಾನು ಮೊದಲಿನಿಂದಲೂ ವ್ಯಕ್ತಪಡಿಸುತ್ತಾ ಬಂದಿದ್ದೇನೆ. ಈಗಾಗಲೇ ತಾಂತ್ರಿಕ ತಂಡ 2 ಜಾಗಗಳನ್ನು ಶಿಫಾರಸ್ಸು ಮಾಡಿದೆ. ಈ ಬಗ್ಗೆ ಸರ್ಕಾರವೇ ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳಲಿದೆ. ತುಮಕೂರಿನಲ್ಲೇ ಆದರೆ ಬಹಳ ಸಂತೋಷ ಎಂದು ಡಿಸಿಎಂ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.

ಇಂದು ಬೆಂಗಳೂರಿನ‌ ಸದಾಶಿವನಗರದ ಗೃಹಕಚೇರಿ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

ತಾಂತ್ರಿಕ ಸಮಿತಿಯು ನೆಲಮಂಗಲದ ಕುಣಿಗಲ್ ರಸ್ತೆ ಹಾಗೂ ಬಿಡದಿ ಪ್ರದೇಶಗಳನ್ನು ಪರಿಶೀಲಿಸಿ ಸರ್ಕಾರಕ್ಕೆ ಶಿಫಾರಸ್ಸು ಸಲ್ಲಿಸಿದ್ದು, ಡಿಜಿಸಿಎ ತಾಂತ್ರಿಕ ಪರಿಶೀಲನೆ ನಡೆಸಿದ ಬಳಿಕ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಿಡದಿಯಿಂದ ಬಿಜೆಪಿ ಪಾದಯಾತ್ರೆ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯವರಿಗೆ ಏನು ತಿಳಿದಿದೆ, ಅದನ್ನು ಮಾಡುತ್ತಾರೆ. ನಾವು ಅಭಿವೃದ್ಧಿಯ ದೃಷ್ಟಿಯಿಂದ ಟೌನ್‌ ಶಿಪ್ ಮಾಡಲು ಹೊರಟಿದ್ದೇವೆ. ಕುಮಾರಸ್ವಾಮಿಯವರು ಪ್ರಸ್ತಾಪ ಮಾಡಿ, ಆನಂತರ ಕೈಬಿಟ್ಟಿದ್ದರು. ವ್ಯವಸ್ಥಿತವಾಗಿ ಮಾಡಬೇಕೆಂದು ಸಿಎಂ ಅವರು ಕೈಗೆತ್ತಿಕೊಂಡಿದ್ದಾರೆ. ಭೂಸ್ವಾಧೀನದ ವಿಚಾರದಲ್ಲಿ ಯಾರ ಮೇಲೂ ಒತ್ತಾಯ ಮಾಡುವುದಿಲ್ಲ, ಮನವೊಲಿಸುವ ಪ್ರಯತ್ನ ಮಾತ್ರ ನಡೆಸಲಾಗುವುದು ಎಂದು ಮುಖ್ಯಮಂತ್ರಿಯವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಈ ವಿಷಯವನ್ನು ರಾಜಕೀಯ ದೃಷ್ಟಿಯಿಂದ ನೋಡದೆ, ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಪರಿಗಣಿಸಬೇಕು ಎಂದರು.

ಗ್ರಾಮೀಣಾಭಿವೃದ್ಧಿ ಇಲಾಖೆಯ ಇ-ಸ್ವತ್ತು ವಿತರಣೆಯನ್ನು ವೇಗಗೊಳಿಸಲು ಕಂದಾಯ ಇಲಾಖೆ ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿದ್ದು, ಹಲವು ವರ್ಷಗಳಿಂದ ಬಾಕಿ ಉಳಿದಿರುವ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸಲಾಗುವುದು.

ರಾಜ್ಯದಲ್ಲಿನ ಬರ ಪರಿಸ್ಥಿತಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅವರೊಂದಿಗೆ ಬೆಳಗಾವಿ ಕಂದಾಯ ವಿಭಾಗ, ಕಲಬುರಗಿ ಕಂದಾಯ ವಿಭಾಗ, ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಗಳ ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸಲಾಗಿದೆ. ಬರ ಪರಿಸ್ಥಿತಿಯನ್ನು ಎದುರಿಸಲು ಮುಂದೆ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಸಿಇಒಗಳೊಂದಿಗೆ ನಾಳೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮುಖ್ಯಮಂತ್ರಿಯವರು ಸಭೆ ಕರೆದಿದ್ದಾರೆ. ಈ ವೇಳೆ ಪರಿಸ್ಥಿತಿಯನ್ನು ಅವಲೋಕಿಸಿ ಅಗತ್ಯ ಸೂಚನೆಗಳನ್ನು ನೀಡಲಾಗುವುದು ಎಂದರು.

ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಪ್ರತಿ ಜಿಲ್ಲೆಗೆ ₹5 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದ್ದು, ಒಟ್ಟು ₹329 ಕೋಟಿ ಲಭ್ಯವಿದೆ. ಇದಲ್ಲದೆ ಜಿಲ್ಲಾಧಿಕಾರಿಗಳ ಪಿಡಿ ಖಾತೆಗಳಲ್ಲಿ ಸುಮಾರು ₹600 ಕೋಟಿ ಲಭ್ಯವಿದ್ದು, ಅಗತ್ಯ ಸಂದರ್ಭಗಳಲ್ಲಿ ಬಳಸಿಕೊಳ್ಳುವಂತೆ ಸೂಚಿಸಲಾಗಿದೆ ಎಂದರು.

ಸರ್ಕಾರ ಪತ್ರ ಬರೆಯಲು ಸೀಮಿತವಾಗಿದೆ ಎಂಬ ವಿಪಕ್ಷದವರ ಆರೋಪದ ಕುರಿತು ಪ್ರತಿಕ್ರಿಯಿಸಿ, ಬರ ಘೋಷಣೆ ಮಾಡಲು ಕೇಂದ್ರ ಸರ್ಕಾರ ಕೆಲವು ನಿಯಮಗಳನ್ನು ಮಾಡಿದೆ. ಅದನ್ನು ಸಡಿಲಿಕೆ ಮಾಡುವಂತೆ ಪತ್ರ ಬರೆದಿದ್ದೇನೆ. ರಾಜ್ಯಕ್ಕೆ ಶೀಘ್ರ ಹಣ ಕೊಡಿಸಲಿ. ಕರ್ನಾಟಕ ಮಾತ್ರವಲ್ಲದೇ, ಇಡೀ ದೇಶದಲ್ಲಿ ಬರ ಪರಿಸ್ಥಿತಿ ಇದೆ. ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ಪತ್ರ ಬರೆದಿದ್ದೇನೆ. ನಾವು ಸುಮ್ಮನೆ ಕುಳಿತುಕೊಂಡು ಕಾಲಕಳೆಯುತ್ತಿಲ್ಲ. ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದೇವೆ. ಸುಖಾಸುಮ್ಮನೆ ಆರೋಪ ಮಾಡುತ್ತಾ ಕುಳಿತುಕೊಳ್ಳುವುದೇ ಅವರಿಗಿರುವ ಕೆಲಸ ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular