HomeLatest NewsBIG NEWS : ಹೆಚ್ಚುವರಿ ಶುಲ್ಕ ವಸೂಲಿ ಮಾಡಿದರೆ ಮಾನ್ಯತೆ ರದ್ದು !ಖಾಸಗಿ ಶಾಲೆಗಳಿಗೆ ಸರ್ಕಾರದ...

BIG NEWS : ಹೆಚ್ಚುವರಿ ಶುಲ್ಕ ವಸೂಲಿ ಮಾಡಿದರೆ ಮಾನ್ಯತೆ ರದ್ದು !ಖಾಸಗಿ ಶಾಲೆಗಳಿಗೆ ಸರ್ಕಾರದ ಖಡಕ್ ಎಚ್ಚರಿಕೆ

ಶಿವಮೊಗ್ಗ : ಸರ್ಕಾರ ನಿಗಧಿಪಡಿಸಿದ ಶುಲ್ಕಕ್ಕಿಂತ ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿರುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ಅನಿವಾರ್ಯವಾಗಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಮಂಜುನಾಥಸ್ವಾಮಿ ಅವರು ಹೇಳಿದರು.

ಅವರು ಇಂದು ನಗರದ ಡಾ|| ಬಿ.ಆರ್.ಅಂಬೇಡ್ಕರ್‌ಭವನದಲ್ಲಿ ಶಾಲಾ ಶಿಕ್ಷಣ ಇಲಾಖೆ, ಪ್ರಾದೇಶಿಕ ಸಾರಿಗೆ ಇಲಾಖೆ ಮತ್ತು ಸಂಚಾರ ಪೊಲೀಸ್‌ಇವರುಗಳ ಸಂಯುಕ್ತಾಶ್ರಯದಲ್ಲಿ ಶಿವಮೊಗ್ಗ ತಾಲೂಕಿನ ಎಲ್ಲಾ ಅನುದಾನ ರಹಿತ ಶಾಲೆಗಳ ಮುಖ್ಯಸ್ಥರು ಮತ್ತು ಪ್ರಾಂಶುಪಾಲರಿಗಾಗಿ ಏರ್ಪಡಿಸಲಾಗಿದ್ದ ಶಾಲಾ ಶುಲ್ಕ ಪಾರದರ್ಶಕತೆ ಮತ್ತು ನಿಯಮ ಪಾಲನೆ, ರಸ್ತೆ ಸುರಕ್ಷತೆ, ಸಂಚಾರ ನಿಯಮಗಳ ಕುರಿತ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಶಾಲೆಗಳಲ್ಲಿ ಮಕ್ಕಳ ದಾಖಲಾತಿಗಾಗಿ ವಿಧಿಸಲಾಗುತ್ತಿರುವ ಶುಲ್ಕ ಸರ್ಕಾರ ನಿಗಧಿಪಡಿಸಿದ್ದಕ್ಕಿಂತ ಅತೀ ಹೆಚ್ಚಾಗಿದ್ದು, ಜನಸಾಮಾನ್ಯರು ಮಕ್ಕಳನ್ನು ಖಾಸಗಿ ಶಾಲೆಗಳಿಗೆ ದಾಖಲಿಸುವುದು ಕಷ್ಟಸಾಧ್ಯವಾಗುತ್ತಿದೆ. ಇಂತಹ ಶಾಲೆಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕ ವಲಯದಿಂದ, ಸಂಘ-ಸಂಸ್ಥೆಗಳಿಂದ ದೂರುಗಳು ಬರುತ್ತಿರುವುದನ್ನು ಶಿಕ್ಷಣ ಇಲಾಖೆಯು ಗಂಭೀರವಾಗಿ ಪರಿಗಣಿಸಿದೆ. ಅಲ್ಲದೇ ಸಮವಸ್ತ್ರ, ವಾಹನ ಶುಲ್ಕಗಳೂ ಸಹ ಅತೀವವಾಗಿರುವ ಬಗ್ಗೆ ದೂರುಗಳು ಬಂದಿವೆ. ಆಡಳಿತ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಆಯಾ ಶಾಲೆಗಳ ಮುಖ್ಯೋಪಾಧ್ಯಾಯರು ಈ ಎಲ್ಲಾ ನ್ಯೂನತೆಗಳನ್ನು ಸರಿಪಡಿಸಿಕೊಂಡು ಸರ್ಕಾರ ನಿಗಧಿಪಡಿಸಿದ ಶುಲ್ಕ ಹಾಗೂ ತಮ್ಮ ಶಾಲೆಯ ಪ್ರವೇಶ ಶುಲ್ಕದ ವಿವರಗಳನ್ನು ತಮ್ಮ ಶಾಲೆಯ ಸೂಚನಾಫಲಕದಲ್ಲಿ ಕಡ್ಡಾಯವಾಗಿ ಪ್ರದರ್ಶಿಸುವಂತೆ ಅವರು ಸೂಚಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸರ್ಕಾರದ ಮಾರ್ಗಸೂಚಿ ಹಾಗೂ ಇಲಾಖೆಯ ನಿಯಮಗಳನ್ನು ಅನುಸರಿಸದ ಶಾಲೆಗಳಿಗೆ ನೀಡಲಾಗಿದ್ದ ಮಾನ್ಯತೆಯನ್ನು ಹಿಂಪಡೆದುಕೊಳ್ಳಲಾಗುವುದು ಎಂದ ಅವರು, ತಮ್ಮ ಶಾಲಾ ಶುಲ್ಕ ಪಾವತಿಸಲಾಗದ ಮಕ್ಕಳ ವರ್ಗಾವಣೆ ಪತ್ರ ನೀಡದಿರುವುದು, ಮಕ್ಕಳನ್ನು ಶಾಲೆಯಿಂದ ಹೊರಗೆ ನಿಲ್ಲಿಸುವುದು, ಅಂಕಪಟ್ಟಿ ನೀಡದಿರುವುದು ಸರಿಯಲ್ಲ. ಅಂತಹ ವಿಷಯಗಳ ಕುರಿತು ದೂರು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ರಾಜ್ಯ ಮಕ್ಕಳ ರಕ್ಷಣಾ ಆಯೋಗದಲ್ಲಿ ದೂರು ದಾಖಲಿಸಲಾಗುವುದಲ್ಲದೇ ಕಾನೂನು ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದವರು ನುಡಿದರು.

ಖಾಸಗಿ ಶಾಲೆಗಳ ಆಡಳಿತ ಮಂಡಳಿಯವರು ಬಡಮಕ್ಕಳ ಶೈಕ್ಷಣಿಕ ಚಟುವಟಿಕೆಗಳನ್ನು ಉತ್ತೇಜಿಸಲು ಅವರ ಶಿಕ್ಷಣಕ್ಕೆ ಪ್ರೋತ್ಸಾಹಿಸಲು ಅವರ ದಾಖಲಾತಿಯಲ್ಲಿ ಮಾನವೀಯತೆ ಮೆರೆಯಬೇಕು ಎಂದ ಅವರು ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಇರುವಂತೆ ನೋಡಿಕೊಳ್ಳಲು ಅವರು ಸೂಚಿಸಿದರು.

* ಜಿಲ್ಲೆಯ ಕೆಲವು ಆಯ್ದ ಖಾಸಗಿ ಶಾಲೆಗಳಲ್ಲಿ ಬಡಮಕ್ಕಳನ್ನು ಶುಲ್ಕವಿಲ್ಲದೆ ದಾಖಲಿಸಿಕೊಂಡು ಉದಾರವಾಗಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು, ಆಡಳಿತ ಮಂಡಳಿಯವರು ಅಭಿನಂದನಾರ್ಹರು. -ರಮೇಶ್‌ನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿವಮೊಗ್ಗ.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಪ್ರಾದೇಶಿಕ ಸಾರಿಗೆ ಅಧಿಕಾರಿ ಮರುಗೇಂದ್ರಯ್ಯ ಶಿರೋಳ್ಕರ್‌ಅವರು ಮಾತನಾಢಿ, ಜಿಲ್ಲೆಯಲ್ಲಿನ ಖಾಸಗಿ ಶಾಲೆಗಳಲ್ಲಿ 710ಕ್ಕೂ ಹೆಚ್ಚಿನ ಬಸ್ಸುಗಳಿದ್ದು, ಅವುಗಳಲ್ಲಿ ಸುಮಾರು 80ಕ್ಕೂ ಹೆಚ್ಚಿನ ಬಸ್ಸುಗಳ ಪರವಾನಿಗಿ ನವೀಕರಿಸಿಕೊಳ್ಳದಿರುವುದು, ಕ್ಷಮತಾ ಪ್ರಮಾಣಪತ್ರ ಪಡೆಯದಿರುವುದು ಕಂಡುಬಂದಿದೆ. ಅಂತಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ತಮ್ಮ ಬಸ್ಸುಗಳು ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳುವುದಲ್ಲದೇ ಮುಂದಿನ ದಿನಗಳಲ್ಲಿ ಆಕಸ್ಮಿಕ ಅಪಘಾತಗಳುಂಟಾಗಿ ಆಗಬಹುದಾದ ಅನಾಹುತಗಳಿಂದ ಮಕ್ಕಳ ಸುರಕ್ಷತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಸಲಹೆ ನೀಡಿದರು.

ಶಾಲಾ ಬಸ್ಸುಗಳಿಗೆ ನುರಿತ ಮತ್ತು ಅನುಭವಿ ವಾಹನ ಚಾಲಕರನ್ನು ನೇಮಿಸಿಕೊಳ್ಳಬೇಕು. ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಾಗಿದ್ದಲ್ಲಿ ಮಹಿಳಾ ನಿರ್ವಾಹಕರನ್ನು ನೇಮಿಸಿಕೊಳ್ಳಬೇಕು. ವಾಹನಕ್ಕೆ ಜಿ.ಪಿ.ಎಸ್.ಮತ್ತು ಸಿ.ಸಿ.ಟಿವಿ ಕಣ್ಗಾವಲು ಇರುವಂತೆ ನೋಡಿಕೊಳ್ಳಬೇಕು.ವಾಹನಗಳ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸಿಟ್ಟುಕೊಳ್ಳುವಲ್ಲಿ ಶಾಲಾ ಆಡಳಿತ ಮಂಡಳಿಯವರು ವಿಶೇಷ ಗಮನಹರಿಸುವಂತೆ ಅವರು ಸೂಚಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಟ್ರಾಫಿಕ್‌ಇನ್ಸ್‌ಫೆಕ್ಟರ್‌ಕೆ.ವಿ.ದೇವರಾಜ್‌ಅವರು ಮಾತನಾಡಿ, ಪ್ರತಿಯೊಂದು ಜೀವವೂ ಅಮೂಲ್ಯ. ವಿಶೇಷವಾಗಿ ಶಾಲಾ ಮಕ್ಕಳನ್ನು ಹೊತ್ತು ಸಾಗಿಸುವ ವಾಹನಗಳ ಚಾಲಕರು ತಮ್ಮ ಜವಾಬ್ದಾರಿಯರಿತು ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕು. ಆಡಳಿತ ಮಂಡಳಿಯವರು ಸಮರ್ಥ ವಾಹನ ಚಾಲಕರನ್ನು ಸೇವೆಗೆ ನೇಮಿಸಿಕೊಳ್ಳುವಂತೆ ಸೂಚಿಸಿದ ಅವರು, ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದ 4ವಾಹನಗಳ ಚಾಲಕರನ್ನು ಗುರುತಿಸಿ, ಅವರ ಪರವಾನಿಗೆ ರದ್ದುಪಡಿಸಲು ಶಿಫಾರಸ್ಸು ಮಾಡಿರುವುದಲ್ಲದೇ ಕಾನೂನು ಕ್ರಮಕೈಗೊಳ್ಳಲಾಗುತ್ತಿದೆ ಎಂದರು.

ಶಾಲಾ ವಾಹನಗಳಿಗೆ ಸರ್ಕಾರದ ಮಾರ್ಗಸೂಚಿಯಂತೆ ಹಳದಿ ಬಣ್ಣವನ್ನು ಲೇಪಿಸಿ. ವಾಹನಕ್ಕೆ ವೇಗಮಿತಿ ಅಳವಡಿಸಿ, ಶಾಲಾ ವಾಹನ ಎಂದು ಬರೆಯಿಸಿ, ವಾಹನದ ಬಾಗಿಲುಗಳು ಭದ್ರವಾಗಿರುವ ಬಗ್ಗೆ ಗಮನಹರಿಸಿ. ವಾಹನದ ಇನ್ಶೂರೆನ್ಸ್‌ಮಾಡಿಸಿ. ವಾಹನದಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇರುವಂತೆ ನೋಡಿಕೊಳ್ಳಬೇಕು ಎಂದವರು ಸಲಹೆ ನೀಡಿದರು.ಸಭೆಯಲ್ಲಿ ಅನುದಾನಿತ ಶಾಲೆಗಳ ಒಕ್ಕೂಟದ ಅ‍ಧ್ಯಕ್ಷ ಗಿರೀಶ್‌, ಕ್ಷೇತ್ರ ಸಮನ್ವಯಾಧಿಕಾರಿ ಶಿವಪ್ಪ ಸಂಗಣ್ಣನವರ್‌ಸಂಚಾರಿ ನಿರೀಕ್ಷಕ ಮಲ್ಲೇಶಪ್ಪ, ಶಾಲಾ ಆಡಳಿತ ಮಂಡಳಿ ಮುಖ್ಯಸ್ಥರು ಹಾಗೂ ಮುಖ್ಯೋಪಾಧ್ಯಾಯರು, ಶಿಕ್ಷಣ ಇಲಾಖೆಯ ಅಧಿಕಾರಿ-ಸಿಬ್ಬಂಧಿಗಳು ಉಪಸ್ಥಿತರಿದ್ದರು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular