ಬೆಂಗಳೂರು: ನಿಗದಿತ ಸಮಯಕ್ಕೆ ವೇತನವಾಗುತ್ತಿಲ್ಲವೆಂದು ಗ್ರಾಮ ಪಂಚಾಯಿತಿಯ ನೀರುಗಂಟಿ, ಗ್ರಂಥಪಾಲಕಿ ಆತ್ಮಹತ್ಯೆ ಮಾಡಿಕೊಂಡ ಬಳಿಕ ಎಚ್ಚೆತ್ತ ಸರ್ಕಾರ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ನೌಕರರಿಗೂ ಪ್ರತಿ ತಿಂಗಳು ಐದನೇ ತಾರೀಕಿನೊಳಗೆ ವೇತನ ನೀಡುವಂತೆ ಆದೇಶಿಸಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯವು ಗ್ರಾಪಂಗಳಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ನೌಕರರಿಗೂ ಪ್ರತಿ ತಿಂಗಳು ಐದನೇ ತಾರೀಖಿನೊಳಗೆ ವೇತನ ಪಾವತಿಸುವಂತೆ ಆದೇಶಿಸಿದೆ.
ಚಾಮರಾಜನಗರ ತಾಲೂಕಿನ ಹೊಂಗನೂರು ಗ್ರಾಮ ಪಂಚಾಯಿತಿಯ ನೀರುಗಂಟಿ ಚಿಕ್ಯೂಸನಾಯಕ 27 ತಿಂಗಳ ವೇತನ ಸಿಕ್ಕಿಲ್ಲವೆಂದು ಕಚೇರಿ ಗೋಡೆಗೆ ಡೆತ್ ನೋಟ್ ಅಂಟಿಸಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಅಕ್ಟೋಬರ್ 13ರಂದು ಕಲಬುರಗಿ ಜಿಲ್ಲೆ ಮಳಖೇಡಾದಲ್ಲಿ ಮೂರು ತಿಂಗಳಿಂದ ವೇತನ ನೀಡದ ಕಾರಣ ಗ್ರಂಥಪಾಲಕಿ ಭಾಗ್ಯವತಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಇದರ ಬೆನ್ನಲ್ಲೇ ಎಚ್ಚೆತ್ತ ಪಂಚಾಯತ್ ರಾಜ್ ಇಲಾಖೆ ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯ ಅಕ್ಟೋಬರ್ 18ರಂದು ಆದೇಶ ಹೊರಡಿಸಿದೆ. ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ನಿಯಮಿತವಾಗಿ ವೇತನ ಪಾವತಿಸುವುದು ಆದ್ಯತೆಯ ವಿಷಯವಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ. 2018ರ ಮಾರ್ಚ್ 1ರಿಂದ ಜಾರಿಗೆ ಬರುವಂತೆ ರಾಜ್ಯದ ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಸರ್ಕಾರದ ನಿಧಿಯಿಂದಲೇ ವೇತನ ಪಾವತಿಸಲು ಕ್ರಮ ವಹಿಸಲಾಗಿದೆ. ಅಗತ್ಯವಿರುವ ಅನುದಾನವನ್ನು ಗ್ರಾಮ ಪಂಚಾಯಿತಿಗಳ ಖಾತೆಗಳಿಗೆ ಸರ್ಕಾರದಿಂದಲೇ ಬಿಡುಗಡೆಗೊಳಿಸಲಾಗುತ್ತದೆ. ಆದರೂ ಗ್ರಾಪಂ ನೌಕರರಿಗೆ ವೇತನ ಪಾವತಿ ವಿಳಂಬ ಮಾಡುತ್ತಿರುವ ಮತ್ತು ವೇತನ ಪಾವತಿಸದಿರುವ ಕುರಿತು ಸರ್ಕಾರದಲ್ಲಿ ಹಲವು ದೂರು ಸ್ವೀಕೃತವಾಗುತ್ತಿವೆ. ಗ್ರಾಪಂಗಳಲ್ಲಿ ಅನುದಾನ ಲಭ್ಯವಿದ್ದರೂ ನಿಯಮಿತವಾಗಿ ಮತ್ತು ಸಮಯಕ್ಕೆ ಸರಿಯಾಗಿ ವೇತನ ಪಾವತಿಸದಿರುವುದು ಗಮನಕ್ಕೆ ಬಂದಿದ್ದು, ಇದನ್ನು ಗಂಭೀರವಾಗಿ ಪರಿಗಣಿಸುವುದಾಗಿ ಎಚ್ಚರಿಸಲಾಗಿದೆ.
ಸರಿಯಾದ ಸಮಯಕ್ಕೆ ವೇತನ ನೀಡದಿದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಲಾಗಿದೆ.