ಬೆಂಗಳೂರು: ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿ -3 ಹುದ್ದೆಗೆ ನೇಮಕವಾಗಿದ್ದ ರಾಘವೇಂದ್ರ ಭಟ್ ಅವರ ನೇಮಕಾತಿ ಆದೇಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತಿನಲ್ಲಿರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿ -3 ಹುದ್ದೆ ನೇಮಕಾತಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ತಿನಲ್ಲಿರಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ನೂತನ ಅಧಿಸೂಚನೆ ಹೊರಡಿಸಿದೆ.
ರಾಜ್ಯ ಸರ್ಕಾರದಿಂದ ಮುಖ್ಯಮಂತ್ರಿಗಳ ಸಚಿವಾಲಯಕ್ಕೆ ಮೂವರು ಮಾಧ್ಯಮ ಕಾರ್ಯದರ್ಶಿಗಳನ್ನು ಜುಲೈ 8ರಂದು ನೇಮಕ ಮಾಡಲಾಗಿತ್ತು. ಮಾಧ್ಯಮ ಕಾರ್ಯದರ್ಶಿ -1 ಹುದ್ದೆಗೆ ಟಿ. ತ್ಯಾಗರಾಜ್, ಮಾಧ್ಯಮ ಕಾರ್ಯದರ್ಶಿ -2 ಹುದ್ದೆಗೆ ಆರ್. ಜಯಪ್ರಕಾಶ್ ಮತ್ತು ಮಾಧ್ಯಮ ಕಾರ್ಯದರ್ಶಿ -3 ಹುದ್ದೆಗೆ ರಾಘವೇಂದ್ರ ಭಟ್ ಅವರನ್ನು ನೇಮಕ ಮಾಡಲಾಗಿತ್ತು.
ಇವರಲ್ಲಿ ರಾಘವೇಂದ್ರ ಭಟ್ ಅವರ ನೇಮಕಾತಿ ತೀವ್ರ ಚರ್ಚೆಗೆ ಕಾರಣವಾಗಿತ್ತು. ರಾಘವೇಂದ್ರ ಭಟ್ ಅವರು ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿ ವಿರುದ್ಧ ಟೀಕಿಸಿದ್ದರು ಎನ್ನಲಾದ ಪೋಸ್ಟ್ ಇತ್ತೀಚೆಗೆ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಸರ್ಕಾರ ಅವರ ನೇಮಕಾತಿಯನ್ನು ಅಮಾನತಿನಲ್ಲಿ ಇರಿಸಿ ಆದೇಶ ಹೊರಡಿಸಿದೆ ಎನ್ನಲಾಗಿದೆ.

