ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಶಾಲಾ ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಫೋನ್ ಚಟಕ್ಕೆ ಬ್ರೇಕ್ ಹಾಕಲು ಮತ್ತು ಅವರಲ್ಲಿ ಓದುವ ಹವ್ಯಾಸವನ್ನು ಹೆಚ್ಚಿಸಲು ಕರ್ನಾಟಕ ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದೆ. ಶಿಕ್ಷಣ ಇಲಾಖೆಯು ರಾಜ್ಯಾದ್ಯಂತ “ಮೊಬೈಲ್ ಬಿಡಿ – ಪುಸ್ತಕ ಹಿಡಿ” ಎಂಬ ವಿಶೇಷ ಅಭಿಯಾನವನ್ನು ಜಾರಿಗೆ ತಂದಿದೆ.
ಹೌದುಲ ಮಕ್ಕಳು ಅತಿಯಾಗಿ ಮೊಬೈಲ್ ಬಳಸುವುದರಿಂದ ಅವರ ಏಕಾಗ್ರತೆ ಕುಂಠಿತವಾಗುತ್ತಿರುವುದು, ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿರುವುದು ಮತ್ತು ಕಲಿಕೆಯಲ್ಲಿ ಆಸಕ್ತಿ ಕಡಿಮೆಯಾಗುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.
ವಿದ್ಯಾರ್ಥಿಗಳಲ್ಲಿ ಓದುವ ಅಭಿರುಚಿ ಬೆಳೆಸುವುದು.ಮೊಬೈಲ್ ಬಳಕೆಯನ್ನು ನಿಯಂತ್ರಿಸುವುದು.ಜ್ಞಾನವೃದ್ಧಿಗೆ ಪೂರಕವಾದ ಕಲಿಕಾ ವಾತಾವರಣ ನಿರ್ಮಿಸುವುದು ಈ ಅಭಿಯಾನದ ಮುಖ್ಯ ಗುರಿಯಾಗಿದೆ.
ಶಾಲೆಗಳಲ್ಲಿ ಜಾರಿಯಾಗಲಿರುವ ಪ್ರಮುಖ ಕ್ರಮಗಳು:
1. ಪೋಷಕರು ಮತ್ತು ಮಕ್ಕಳ ಜಾಗೃತಿ:
- ಶಾಲಾ ಮಟ್ಟದಲ್ಲಿ ಎಸ್ಡಿಎಂಸಿ (SDMC) ಮತ್ತು ಪೋಷಕರ ಸಭೆಗಳನ್ನು ನಡೆಸಿ ಮೊಬೈಲ್ ಬಳಕೆಯ ದುಷ್ಪರಿಣಾಮಗಳ ಬಗ್ಗೆ ತಜ್ಞರಿಂದ ಮಾಹಿತಿ ನೀಡಲಾಗುವುದು.
- ಮಕ್ಕಳು ಮನೆಯಲ್ಲಿ ಮೊಬೈಲ್ ಬಳಸುವ ಸಮಯವನ್ನು ಮಿತಿಗೊಳಿಸಲು ಮತ್ತು ಊಟ ಮಾಡುವಾಗ ಅಥವಾ ಮಲಗುವ ಮುನ್ನ ಮೊಬೈಲ್ ಬಳಸದಂತೆ ನೋಡಿಕೊಳ್ಳಲು ಪೋಷಕರಿಗೆ ಸೂಚಿಸಲಾಗಿದೆ.
2. ಓದುವ ಹವ್ಯಾಸಕ್ಕೆ ಉತ್ತೇಜನ:
- ಶಾಲಾ ಗ್ರಂಥಾಲಯಗಳಲ್ಲಿ ಲಭ್ಯವಿರುವ ವಿಶ್ವಕೋಶಗಳು, ಕಥೆ ಪುಸ್ತಕಗಳು ಮತ್ತು ಇತರ ಆಕರ ಗ್ರಂಥಗಳನ್ನು ಪರಿಚಯಿಸಲು ಶಿಕ್ಷಕರು ಕ್ರಮ ವಹಿಸಲಿದ್ದಾರೆ.
- ಓದಿದ ಪುಸ್ತಕದ ಬಗ್ಗೆ ಚರ್ಚೆ, ಕಥೆ ಹೇಳುವ ಸ್ಪರ್ಧೆ ಮತ್ತು ವಿಮರ್ಶಾ ಬರಹಗಳಂತಹ ಚಟುವಟಿಕೆಗಳನ್ನು ಆಯೋಜಿಸಲಾಗುವುದು.
3. ಮೈಂಡ್ ಫುಲ್ ನೆಸ್ (Mindfulness) ತರಬೇತಿ:
- ವಿದ್ಯಾರ್ಥಿಗಳ ಮಾನಸಿಕ ಒತ್ತಡ ಕಡಿಮೆ ಮಾಡಲು ಮತ್ತು ಏಕಾಗ್ರತೆ ಹೆಚ್ಚಿಸಲು ಧ್ಯಾನ, ಯೋಗ ಮತ್ತು ಉಸಿರಾಟದ ತಂತ್ರಗಳ ತರಬೇತಿಯನ್ನು ನೀಡಲಾಗುವುದು.
4. ಇಲಾಖೆಗಳ ಸಹಭಾಗಿತ್ವ:
- ಪೊಲೀಸ್ ಇಲಾಖೆ: ಸೈಬರ್ ಕ್ರೈಮ್ ಮತ್ತು ಆನ್ಲೈನ್ ವಂಚನೆಗಳ ಬಗ್ಗೆ ಪೊಲೀಸರು ಶಾಲೆಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಲಿದ್ದಾರೆ.
- ಆರೋಗ್ಯ ಇಲಾಖೆ: ಮಕ್ಕಳ ಮಾನಸಿಕ ಆರೋಗ್ಯದ ತಪಾಸಣೆ ಮತ್ತು ಆಪ್ತಸಮಾಲೋಚನೆ ನಡೆಸಲಿದೆ.
- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ: ಅಂಗನವಾಡಿಗಳ ಮೂಲಕ ತಾಯಂದಿರಲ್ಲಿ ಮೊಬೈಲ್ ಬಳಕೆಯ ಅಡ್ಡಪರಿಣಾಮಗಳ ಬಗ್ಗೆ ಅರಿವು ಮೂಡಿಸಲಿದೆ.
ಮೇಲ್ವಿಚಾರಣೆ ಹೇಗೆ?
ಈ ಅಭಿಯಾನದ ಅನುಷ್ಠಾನವನ್ನು ತಾಲ್ಲೂಕು, ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ. ಪ್ರತಿ ತಿಂಗಳು ಈ ಕುರಿತು ಪ್ರಗತಿ ಪರಿಶೀಲನಾ ಸಭೆಗಳು ನಡೆಯಲಿದ್ದು, ಉತ್ತಮವಾಗಿ ಕಾರ್ಯನಿರ್ವಹಿಸುವ ಶಾಲೆಗಳನ್ನು ಗುರುತಿಸಿ ಪ್ರೋತ್ಸಾಹಿಸಲಾಗುವುದು.
ಸಾರ್ವಜನಿಕರ ಮೆಚ್ಚುಗೆ: ಸರ್ಕಾರದ ಈ ಕ್ರಮಕ್ಕೆ ಶಿಕ್ಷಣ ತಜ್ಞರು ಮತ್ತು ಪೋಷಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ‘ಪುಸ್ತಕ ಪ್ರೀತಿ’ ಬೆಳೆಸುವುದು ಇಂದಿನ ಅಗತ್ಯವಾಗಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಮಾಹಿತಿ ಕೃಪೆ: ಕರ್ನಾಟಕ ಸರ್ಕಾರದ ಅಧಿಕೃತ ಸುತ್ತೋಲೆ ಸಂಖ್ಯೆ: ಇಪಿ 375 ಪಿಜಿಸಿ 2025.






