ಬೆಂಗಳೂರು: ಹಾವು ಕಡಿತ ಪ್ರಕರಣಗಳಲ್ಲಿ ಆಯುಷ್ಮಾನ್ ಭಾರತ್ ಯೋಜನೆಯಡಿ(ABARK) ನಗದು ರಹಿತ ಚಿಕಿತ್ಸೆ ನೀಡುವಂತೆ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಈ ಸಂಬಂಧ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ದರ ನಿಗದಿ ಮಾಡಿದೆ. ಸಾಮಾನ್ಯ ವಾರ್ಡ್ ಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ದಿನಕ್ಕೆ 1350 ರೂ.,ಖಾಸಗಿ ಆಸ್ಪತ್ರೆಯಲ್ಲಿ 2300 ರೂ., ಸರ್ಕಾರಿ ಆಸ್ಪತ್ರೆಯಲ್ಲಿ ಹೆಚ್.ಡಿ.ಯು ವಾರ್ಡ್ ಗೆ ದಿನಕ್ಕೆ 2025 ರೂ., ಖಾಸಗಿ ಆಸ್ಪತ್ರೆಯಲ್ಲಿ 3800 ರೂ. ನಿಗದಿಪಡಿಸಲಾಗಿದೆ,
ವೆಂಟಿಲೇಟರ್ ಇಲ್ಲದೆ ಸರ್ಕಾರಿ ಆಸ್ಪತ್ರೆಯ ಐಸಿಯು ವಾರ್ಡ್ ಗೆ ದಿನಕ್ಕೆ 2,700 ರೂ., ಖಾಸಗಿ ಆಸ್ಪತ್ರೆಯಲ್ಲಿ 8,800 ರೂ. ಹಾಗೂ ವೆಂಟಿಲೇಟರ್ ಸಹಿತ ಐಸಿಯು ವಾರ್ಡ್ ಗೆ ಸರ್ಕಾರಿ ಆಸ್ಪತ್ರೆಯಲ್ಲಿ 3375 ರೂ., ಖಾಸಗಿ ಆಸ್ಪತ್ರೆಯಲ್ಲಿ 10,350 ರೂ. ದರ ನಿಗದಿಪಡಿಸಲಾಗಿದೆ.
ನಗದು ರಹಿತ ಚಿಕಿತ್ಸೆಗೆ ಹೆಚ್ಚುವರಿಯಾಗಿ 2.69 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದ್ದು, ಇದನ್ನು ಆಯುಷ್ಮಾನ್ ಭಾರತ್ ಯೋಜನೆಯಡಿ ಭರಿಸಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ. ಈ ವರ್ಷ ರಾಜ್ಯದಲ್ಲಿ ಇದುವರೆಗೆ 18,611 ಜನರಿಗೆ ಹಾವು ಕಡಿದಿದ್ದು 131 ಜನ ಸಾವನ್ನಪ್ಪಿದ್ದಾರೆ.
