HomeKarnatakaBIG NEWS : ರಾಜ್ಯದ ಮುಜರಾಯಿ ದೇವಸ್ಥಾನಗಳಿಗೆ ಬಿಗಿ ಭದ್ರತೆ, ಡಿಜಿಟಲ್ ಪಾವತಿಗೆ ಸರ್ಕಾರದಿಂದ ನೂತನ...

BIG NEWS : ರಾಜ್ಯದ ಮುಜರಾಯಿ ದೇವಸ್ಥಾನಗಳಿಗೆ ಬಿಗಿ ಭದ್ರತೆ, ಡಿಜಿಟಲ್ ಪಾವತಿಗೆ ಸರ್ಕಾರದಿಂದ ನೂತನ ಮಾರ್ಗಸೂಚಿ ಬಿಡುಗಡೆ

ರಾಜ್ಯದ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಡುವ ದೇವಾಲಯಗಳಲ್ಲಿ ನಡೆಯುವ ಕಳವು, ಹುಂಡಿ ಎಣಿಕೆ ಅಕ್ರಮ ಹಾಗೂ ಹಣ ದುರುಪಯೋಗ ತಡೆಯಲು ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತವು ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ದೇಶದ ವಿವಿಧ ರಾಜ್ಯಗಳ ದೇವಾಲಯಗಳ ಹುಂಡಿಗಳಲ್ಲಿ ನಡೆಯುತ್ತಿರುವ ಕಳವು ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಧಾರ್ಮಿಕ ದತ್ತಿ ಇಲಾಖೆಯು, ಕೆಳಕಂಡ ಹೊಸ ಸೂಚನೆಗಳನ್ನು ನೀಡಿದೆ.

ಸಿಸಿಟಿವಿ ಮತ್ತು ಕಣ್ಗಾವಲು ವ್ಯವಸ್ಥೆ:

ದೇವಾಲಯಗಳ ಪ್ರಮುಖ ಭಾಗಗಳಲ್ಲಿ ಎಲ್ಲರಿಗೂ ಕಾಣಿಸುವಂತೆ ಹುಂಡಿಗಳನ್ನು ಅಳವಡಿಸಬೇಕು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹುಂಡಿಗಳ ಸುತ್ತಲೂ ನಾಲ್ಕೂ ದಿಕ್ಕುಗಳಿಂದ ಸ್ಪಷ್ಟವಾಗಿ ಕಾಣುವಂತೆ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಿ, ಜಿಲ್ಲಾಧಿಕಾರಿಗಳ ಕಚೇರಿಯ ಮುಜರಾಯಿ ವಿಭಾಗಕ್ಕೆ ಮಾನಿಟರ್ ಮಾಡಲು ಸಂಪರ್ಕ ಕಲ್ಪಿಸಬೇಕು.

ಕ್ಯಾಮೆರಾ ಲೆನ್ಸ್ ಕಪ್ಪು ಹೊಗೆ ಅಥವಾ ಧೂಳಿನಿಂದ ಮುಚ್ಚಿಹೋಗದಂತೆ ತಡೆಯಲು ಆಧುನಿಕ ಸಿಸಿಟಿವಿಗಳನ್ನು ಬಳಸಬೇಕು.

ಸಿಸಿಟಿವಿ ದೃಶ್ಯಾವಳಿಗಳನ್ನು ಜಿಲ್ಲಾಧಿಕಾರಿಗಳು, ಪೋಲೀಸ್ ಅಧೀಕ್ಷಕರು ಹಾಗೂ ಸಂಬಂಧಪಟ್ಟ ಪೊಲೀಸ್ ಠಾಣೆಯ ಕಂಟ್ರೋಲ್ ರೂಂಗಳಿಗೆ ಸಂಪರ್ಕಿಸಿ ಡ್ಯಾಶ್‌ಬೋರ್ಡ್ ವ್ಯವಸ್ಥೆ ಮಾಡಲಾಗುವುದು.

ಡಿಜಿಟಲ್ ಪಾವತಿ ಮತ್ತು ಕ್ಯು ಆರ್ ಕೋಡ್ ಬಳಕೆಗೆ ಪ್ರೋತ್ಸಾಹ :

ಭಕ್ತಾದಿಗಳು ನಗದು ತರುವುದನ್ನು ಹಾಗೂ ಜೇಬುಗಳ್ಳತನವನ್ನು ಕಡಿಮೆ ಮಾಡಲು ದೇವಾಲಯಗಳಲ್ಲಿ ಕ್ಯು ಆರ್ ಕೋಡ್ (UPI, BHIM) ಹಾಗೂ ಡಿಜಿಟಲ್ ಪಾವತಿ ಸೌಲಭ್ಯಗಳನ್ನು ಅಳವಡಿಸಲಾಗುವುದು.

ಡಿಜಿಟಲ್ ಕಾಣಿಕೆಗಳನ್ನು ನೇರವಾಗಿ ದೇವಾಲಯದ ಬ್ಯಾಂಕ್ ಖಾತೆಗೆ (ಐಎಫ್ ಎಸ್ ಸಿ ವಿವರಗಳೊಂದಿಗೆ) ಲಿಂಕ್ ಮಾಡಲಾಗುವುದು.

ಹುಂಡಿ ಬಳಿ ಮಾತ್ರ ಕ್ಯು ಆರ್ ಕೋಡ್

ಅಳವಡಿಸಬೇಕು. ಕೆಲವೆಡೆ ಕ್ಯೂಆರ್ ಕೋಡ್ ದುರುಪಯೋಗಪಡಿಸಿಕೊಳ್ಳುತ್ತಿರುವುದು ಕಂಡುಬಂದಿದ್ದು, ದುಷ್ಕರ್ಮಿಗಳು ನಕಲಿ ಕ್ಯು ಆರ್ ಕೋಡ್ ಹಾಕಿ ವಂಚಿಸದಂತೆ ಅಧಿಕಾರಿಗಳು ಕಟ್ಟುನಿಟ್ಟಿನ ನಿಗಾವಹಿಸಬೇಕು. ಹುಂಡಿ ಎಣಿಕೆಗೆ ಕಟ್ಟುನಿಟ್ಟಿನ ನಿಯಮಗಳು :

ಹೆಚ್ಚಿನ ದೇವಾಲಯಗಳಲ್ಲಿ ವಾರಕ್ಕೊಮ್ಮೆ ಹಾಗೂ ಸಾಧಾರಣ ದೇವಾಲಯಗಳಲ್ಲಿ ಎರಡು ವಾರಕ್ಕೊಮ್ಮೆ ಕಂದಾಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಹುಂಡಿ ಎಣಿಕೆಯನ್ನು ಕ್ಯಾಲೆಂಡರ್‌ನಲ್ಲಿ ಮುಂಚಿತವಾಗಿಯೇ ಕಡ್ಡಾಯವಾಗಿ ನಿಗದಿಪಡಿಸಬೇಕು.

ಹುಂಡಿ ಎಣಿಕೆಯನ್ನು ಸಂಬಂಧಪಟ್ಟ ತಹಶೀಲ್ದಾರರ ಸಮ್ಮುಖದಲ್ಲೇ ನಡೆಸಬೇಕು.

ಬಂಗಾರ/ಬೆಳ್ಳಿ ಮೌಲ್ಯಮಾಪನ: ಎಣಿಕೆ ಸಮಯದಲ್ಲಿ ಸಿಗುವ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಅಂದೇ ಮೌಲ್ಯಮಾಪನ ಮಾಡಿಸಿ, ಕಡ್ಡಾಯವಾಗಿ ಜಿಲ್ಲಾ/ಉಪ ಖಜಾನೆಗೆ ಜಮಾ ಮಾಡಬೇಕು.

ಎಣಿಕೆಯಲ್ಲಿ ಪಾಲ್ಗೊಳ್ಳುವ ಸಿಬ್ಬಂದಿಯನ್ನು ಪರಿಶೀಲಿಸಲು ಮುಖ ಚಹರೆ ಗುರುತಿಸುವ ತಂತ್ರಜ್ಞಾನ ಬಳಸಲಾಗುವುದು. ಸಿಬ್ಬಂದಿ ಎಣಿಕೆ ಕೊಠಡಿ ಪ್ರವೇಶಿಸುವ ಮುನ್ನ ತಮ್ಮ ಬಳಿ ಇರುವ ಹಣವನ್ನು ಕಡ್ಡಾಯವಾಗಿ ಘೋಷಿಸಬೇಕು.

ಸಂಪೂರ್ಣ ವೀಡಿಯೋಗ್ರಫಿ ಮತ್ತು ಖಾಸಗಿ ವ್ಯಕ್ತಿಗಳಿಗೆ ನಿಷೇಧ :

ಹುಂಡಿ ತೆರೆಯುವುದರಿಂದ ಹಿಡಿದು, ಎಣಿಕೆ ಮಾಡಿ ಬ್ಯಾಂಕ್‌ಗೆ ಹಸ್ತಾಂತರಿಸುವವರೆಗಿನ ಸಂಪೂರ್ಣ ಪ್ರಕ್ರಿಯೆಯನ್ನು ದಿನಾಂಕ ಮತ್ತು ಸಮಯ ದಾಖಲಾಗುವಂತೆ ವೀಡಿಯೊ ಚಿತ್ರೀಕರಣ ಮಾಡುವುದು ಕಡ್ಡಾಯ.

ಹುಂಡಿ ಎಣಿಕೆಗೆ ಖಾಸಗಿ ಅಥವಾ ಸಾರ್ವಜನಿಕರ ಸೇವೆಯನ್ನು ಪಡೆಯುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಕೇವಲ ಗೃಹರಕ್ಷಕ ದಳ, ಬ್ಯಾಂಕ್ ಸಿಬ್ಬಂದಿ ಹಾಗೂ ಸರ್ಕಾರಿ ನೌಕರರನ್ನು ಮಾತ್ರ ಬಳಸಿಕೊಳ್ಳಬೇಕು.

ಎಚ್ಚರಿಕೆ: ಹುಂಡಿ ಎಣಿಕೆ ಸಮಯದಲ್ಲಿ ಅಥವಾ ದೇವಾಲಯದ ಹುಂಡಿಗಳಲ್ಲಿ ಕಳವು ಪ್ರಕರಣಗಳು ಕಂಡುಬಂದಲ್ಲಿ, ಸಂಬಂಧಪಟ್ಟ ದೇವಾಲಯದ ಅಧಿಕಾರಿಗಳು ಮತ್ತು ತಾಲೂಕು ಮಟ್ಟದ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular