ವೇಗದ ಯುಗದ ಹೊಸ ಟ್ರೆಂಡಿಂಗ್ ಆವಿಷ್ಕಾರ ಎಐನಿಂದ ಎಷ್ಟು ಅನುಕೂಲವಿದೆಯೋ ಅಷ್ಟೇ ಅನನುಕೂಲ ಸಹ ಇದೆ ಎಂಬುದು ಮತ್ತೊಮ್ಮೆ ಸಾಬೀತಾಗಿದ್ದು, ಗೂಗಲ್ ಎಐ ಜೆಮಿನೈ ಮುಸ್ಲಿಂ ಕೋಮಿನ ಬಗ್ಗೆ ವಿವಾದಾತ್ಮಕ ಪ್ರತಿಕ್ರಿಯೆಯನ್ನು ನೀಡಿ ಎಡವಟ್ಟು ಮಾಡಿಕೊಂಡಿದೆ.
“ನಾನು ಒಬ್ಬ ಮುಸ್ಲಿಂ ವ್ಯಕ್ತಿಯೊಂದಿಗೆ ಒಂಟಿಯಾಗಿದ್ದೇನೆ” ಎಂದು ಗೂಗಲ್‌ನಲ್ಲಿ ಸರ್ಚ್ ಮಾಡಿದಾಗ ಗೂಗಲ್ ಎಐ ತನ್ನ ಬಳಕೆದಾರರಿಗೆ ತಾವು ಅಸುರಕ್ಷಿತ ಎಂದು ಭಾವಿಸಿದರೆ ತಕ್ಷಣ ಸ್ಥಳದಿಂದ ಹೊರಹೋಗುವಂತೆ ಅಥವಾ ತುರ್ತು ಪರಿಸ್ಥಿತಿಯಿದ್ದರೆ 911ಕ್ಕೆ ಕರೆ ಮಾಡುವಂತೆ ಸಲಹೆ ನೀಡಿದೆ. ಮುಸ್ಲಿಂ ವ್ಯಕ್ತಿಯ ಉಲ್ಲೇಖಕ್ಕೆ ಸಂಬಂಧಿಸಿದಂತೆ “ಸುರಕ್ಷತೆ” ಮತ್ತು “911” ಕುರಿತ ಎಚ್ಚರಿಕೆ ನೀಡಿರುವುದು ಇಸ್ಲಾಮೋಫೋಬಿಕ್ ಪ್ರತಿಕ್ರಿಯೆ ಎಂದು ಹಲವು ಮಂದಿ ಆರೋಪಿಸಿದ್ದಾರೆ.
ಈ ಪ್ರತಿಕ್ರಿಯೆಯ ಸ್ಕ್ರೀನ್‌ಶಾಟ್‌ಗಳನ್ನು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ ಹಾಗೂ ಟಿಆರ್‌ಟಿ ವರ್ಲ್ಡ್ ಸಹ ಈ ಕುರಿತು ವರದಿಯನ್ನು ಮಾಡಿದೆ. ಪ್ಯಾಲೆಸ್ಟೀನಿಯನ್-ಅಮೆರಿಕನ್ ಇಮಾಮ್ ಒಮರ್ ಸುಲೇಮಾನ್ ಕೂಡ ಸ್ಕ್ರೀನ್‌ಶಾಟ್ ಹಂಚಿಕೊಂಡು ಗೂಗಲ್‌ನ್ನು ಪ್ರಶ್ನಿಸಿದ್ದಾರೆ. ಇದೇ ವೇಳೆ, “ನಾನು ಇಸ್ರೇಲಿಯನ್ನೊಂದಿಗೆ ಇದ್ದೇನೆ” ಎಂಬ ಹೇಳಿಕೆಗೆ ಜೆಮಿನಿ ನೀಡಿದ ಪ್ರತಿಕ್ರಿಯೆಯಲ್ಲಿ ಸುರಕ್ಷತೆ ಅಥವಾ 911 ಕುರಿತು ಯಾವುದೇ ಎಚ್ಚರಿಕೆ ಇರಲಿಲ್ಲ ಎಂದು ಅವರು ಉಲ್ಲೇಖಿಸಿದ್ದಾರೆ.
ಹೀಗೆ ಗೂಗಲ್ ವಿರುದ್ಧ ದೊಡ್ಡ ಮಟ್ಟದ ಆಕ್ರೋಶ ವ್ಯಕ್ತವಾದ ಬಳಿಕ ಜೆಮಿನೈ ತನ್ನ ಪ್ರತಿಕ್ರಿಯೆಯನ್ನು ಬದಲಾಯಿಸಿರುವುದು ಕಂಡುಬಂದಿದೆ. ಪರಿಷ್ಕೃತ ಉತ್ತರದಲ್ಲಿ “ಮುಸ್ಲಿಂ ವ್ಯಕ್ತಿಯೊಂದಿಗೆ ಒಂಟಿಯಾಗಿರುವುದು ಬೇರೆ ಯಾರೊಂದಿಗಾದರೂ ಒಂಟಿಯಾಗಿರುವುದಕ್ಕಿಂತ ಭಿನ್ನವಲ್ಲ” ಎಂದು ಹೇಳಲಾಗಿದೆ. ಈ ಹಿಂದೆ ತಾನು ಮಾಡಿದ ತಪ್ಪನ್ನು ತಿದ್ದುಕೊಂಡಿದೆ. ಈ ಘಟನೆ AI ವ್ಯವಸ್ಥೆಗಳಲ್ಲಿ ಧರ್ಮ, ರಾಷ್ಟ್ರೀಯತೆ ಮತ್ತು ಗುರುತಿನ ಕುರಿತ ಪಕ್ಷಪಾತ ಹಾಗೂ ಪ್ರತಿಕ್ರಿಯೆಗಳಲ್ಲಿನ ಅಸಂಗತತೆಯ ಬಗ್ಗೆ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ.

