ನಮ್ಮ ದೇಶದಲ್ಲಿ ಮೂಕಪ್ರಾಣಿಗಳನ್ನು ಸಾಕುವುದು ಮತ್ತು ಅವುಗಳಿಗೆ ಆಹಾರ ನೀಡುವುದು ಪುಣ್ಯದ ಕೆಲಸ ಎಂದು ಪರಿಗಣಿಸಲಾಗಿದೆ. ಅದರಲ್ಲೂ ಶ್ವಾನಗಳನ್ನು ಅತ್ಯಂತ ನಿಷ್ಠಾವಂತ ಪ್ರಾಣಿ ಎಂದು ಕರೆಯಲಾಗುತ್ತದೆ. ನಾಯಿಗಳನ್ನು ಸಾ ಸಾಕುವ ವಿಷಯಕ್ಕೆ ಬಂದಾಗ ಪ್ರತಿಯೊಬ್ಬರಿಗೂ ಅವರದ್ದೇ ಆದ ಬಣ್ಣದ ಆದ್ಯತೆ ಇರುತ್ತದೆ. ಆದರೆ ಹಿಂದೂ ಧರ್ಮ, ಜ್ಯೋತಿಷ್ಯ ಶಾಸ್ತ್ರ ಮತ್ತು ಆಧ್ಯಾತ್ಮದಲ್ಲಿ ಕಪ್ಪು ಬಣ್ಣದ ನಾಯಿಯನ್ನು ಸಾಕುವುದು ಅತ್ಯಂತ ಮಂಗಳಕರ ಮತ್ತು ವಿಶೇಷ ಪ್ರಯೋಜನಗಳನ್ನು ನೀಡುತ್ತದೆ ಎಂದು ನಂಬಲಾಗಿದೆ.
ಶನಿದೋಷ ಮತ್ತು ರಾಹು ಕೇತು ದೋಷಗಳಿಗೆ ಮುಕ್ತಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶ್ವಾನವನ್ನು ಶನಿದೇವ ಮತ್ತು ಭೈರವನಾಥನ ವಾಹನ ಎಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ಕಪ್ಪು ನಾಯಿಯನ್ನು ಸಾಕಿ, ಅದಕ್ಕೆ ಪ್ರತಿದಿನ ಗೌರವದಿಂದ ಆಹಾರ ನೀಡುವುದರಿಂದ ಜಾತಕದಲ್ಲಿರುವ ಶನಿದೋಷ, ಸಾಡೇಸಾತಿ ಪ್ರಭಾವ ಮತ್ತು ರಾಹು ಕೇತುಗಳ ನೆಗೆಟಿವ್ ಎಫೆಕ್ಟ್ ಕಡಿಮೆ ಆಗುತ್ತದೆ ಎಂದು ನಂಬಲಾಗಿದೆ. ಯಾರ ಜಾತಕದಲ್ಲಿ ಶನಿ ದೆಸೆ ದುರ್ಬಲವಾಗಿದೆಯೋ ಅವರು ಕಪ್ಪು ನಾಯಿಯ ಸೇವೆ ಮಾಡುವುದರಿಂದ ಜೀವನದ ಕಷ್ಟಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ.
ನಕಾರಾತ್ಮಕ ಶಕ್ತಿಗಳಿಂದ ರಕ್ಷಣೆ: ಕಪ್ಪು ನಾಯಿಗಳಿಗೆ ಪ್ರಕೃತಿಯಲ್ಲಿರುವ ಕೆಲವು ನಿಗೂಢ ಮತ್ತು ಸೂಕ್ಷ್ಮ ಶಕ್ತಿಗಳನ್ನು ಗುರುತಿಸುವ ಅದ್ಭುತ ಸಾಮರ್ಥ್ಯ ಇರುತ್ತದೆ ಎಂದು ಹೇಳಲಾಗುತ್ತದೆ. ಮನೆಯಲ್ಲಿ ಕಪ್ಪು ಶ್ವಾನ ಇರುವುದರಿಂದ ಯಾವುದೇ ರೀತಿಯ ಕೆಟ್ಟ ದೃಷ್ಟಿ, ನಕಾರಾತ್ಮಕ ಶಕ್ತಿಗಳು ಅಥವಾ ತಾಂತ್ರಿಕ ದೋಷಗಳು ಮನೆಗೆ ಪ್ರವೇಶಿಸುವುದಿಲ್ಲ. ಇದು ಇಡೀ ಕುಟುಂಬಕ್ಕೆ ಒಂದು ರಕ್ಷಣಾ ಕವಚದಂತೆ ಕೆಲಸ ಮಾಡುತ್ತದೆ ಮತ್ತು ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುವಂತೆ ನೋಡಿಕೊಳ್ಳುತ್ತದೆ.
ಆರ್ಥಿಕ ಪ್ರಗತಿ ಮತ್ತು ಸಂತಾನ ಸುಖ: ಮನೆಯಲ್ಲಿ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವವರು ಅಥವಾ ಸಾಲದ ಬಾಧೆಯಿಂದ ಬಳಲುತ್ತಿರುವವರು ಕಪ್ಪು ನಾಯಿಯನ್ನು ಸಾಕಿ ಅದಕ್ಕೆ ಹಾಲನ್ನು ನೀಡುವುದರಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಎಂದು ಜ್ಯೋತಿಷ್ಯ ತಜ್ಞರು ಹೇಳುತ್ತಾರೆ. ಇಷ್ಟೇ ಅಲ್ಲದೆ ಸಂತಾನ ಭಾಗ್ಯಕ್ಕಾಗಿ ಕಾಯುತ್ತಿರುವ ದಂಪತಿಗಳು ಕಪ್ಪು ನಾಯಿಯನ್ನು ಪ್ರೀತಿಯಿಂದ ಸಾಕುವುದರಿಂದ ಮನೆಯಲ್ಲಿ ಮಕ್ಕಳ ಕಿಲಕಿಲ ಧ್ವನಿ ಕೇಳಲು ಸಾಧ್ಯವಾಗುತ್ತದೆ ಎಂಬ ಧಾರ್ಮಿಕ ನಂಬಿಕೆಯೂ ಚಾಲ್ತಿಯಲ್ಲಿದೆ.
ಮಾನಸಿಕ ಒತ್ತಡ ನಿವಾರಣೆ: ಇನ್ನು ಕೇವಲ ಆಧ್ಯಾತ್ಮಿಕ ಮಾತ್ರವಲ್ಲದೆ ವೈಜ್ಞಾನಿಕವಾಗಿಯೂ ಶ್ವಾನಗಳನ್ನು ಸಾಕುವುದು ಮನುಷ್ಯನ ಆರೋಗ್ಯಕ್ಕೆ ಒಳ್ಳೆಯದು. ದಿನವಿಡೀ ಕೆಲಸದ ಒತ್ತಡದಿಂದ ಸುಸ್ತಾಗಿ ಮನೆಗೆ ಬಂದಾಗ ಕಪ್ಪು ನಾಯಿಯೊಂದಿಗೆ ಸ್ವಲ್ಪ ಸಮಯ ಕಳೆದರೆ ಮೆದುಳಿನಲ್ಲಿರುವ ಒತ್ತಡದ ಹಾರ್ಮೋನ್‌ಗಳು ಕಡಿಮೆಯಾಗಿ ಮನಸ್ಸು ಪ್ರಶಾಂತವಾಗುತ್ತದೆ. ಕಪ್ಪು ಶ್ವಾನಗಳು ಅತ್ಯಂತ ಆಕರ್ಷಕ ಮತ್ತು ಬೇಗನೆ ಮನುಷ್ಯರೊಂದಿಗೆ ಬೆರೆಯುವ ಸ್ವಭಾವವನ್ನು ಹೊಂದಿರುವುದರಿಂದ ಮನೆಯ ವಾತಾವರಣ ಸದಾ ಸಂತೋಷದಿಂದ ಕೂಡಿರುವಂತೆ ಮಾಡುತ್ತವೆ.

