ಬೆಂಗಳೂರು: ಬೆಂಗಳೂರು ಜಲ ಮಂಡಳಿ ಅಪಾರ್ಟ್ಮೆಂಟ್, ಪಿಜಿಗಳ ನೀರಿನ ದರ ಇಳಿಕೆ ಮಾಡಿದೆ. ಕಳೆದ ಏಪ್ರಿಲ್ ನಲ್ಲಿ ಕಾವೇರಿ ನೀರು ಹಾಗೂ ಚರಂಡಿ ಸ್ವಚ್ಛತೆಯ ದರ ಏರಿಕೆ ಮಾಡಿದ್ದು, ಅಪಾರ್ಟ್ಮೆಂಟ್ ಮತ್ತು ಪೇಯಿಂಗ್ ಗೆಸ್ಟ್(ಪಿಜಿ) ಗಳಿಗೆ ವಿಧಿಸಲಾಗಿದ್ದ ದರವನ್ನು ಪರಿಷ್ಕರಿಸಲಾಗಿದೆ.
ಈ ಹಿಂದೆ ಎಲ್ಲಾ ಅಪಾರ್ಟ್ಮೆಂಟ್ ಗಳಿಗೆ ಒಂದೇ ದರ ನಿಗದಿಪಡಿಸಲಾಗಿತ್ತು. ಇದರಿಂದ ಸಣ್ಣ ಅಪಾರ್ಟ್ಮೆಂಟ್ ನಿವಾಸಿಗಳು ಹೆಚ್ಚಿನ ದರ ಪಾವತಿಸಬೇಕಿತ್ತು. ಪಿಜಿ ಮತ್ತು ಹಾಸ್ಟೆಲ್ ಗಳನ್ನು ವಾಣಿಜ್ಯ ಉದ್ದಿಮೆ ಎಂದು ಪರಿಗಣಿಸಿ ಹೆಚ್ಚು ದರ ವಿಧಿಸಿದ್ದಕ್ಕೆ ವಿರೋಧ ವ್ಯಕ್ತವಾಗಿತ್ತು.
ಈ ಹಿನ್ನೆಲೆಯಲ್ಲಿ ಜಲಮಂಡಳಿ ಸಭೆಯಲ್ಲಿ ಚರ್ಚಿಸಿ ದರ ಇಳಿಕೆಗೆ ಕ್ರಮ ಕೈಗೊಳ್ಳಲಾಗಿದೆ. 2 ಸಾವಿರ ಫ್ಲ್ಯಾಟ್ ವರೆಗೆ ಇರುವ ಅಪಾರ್ಟ್ಮೆಂಟ್ ಪ್ರತಿಮನೆಗೆ ದಿನಕ್ಕೆ 200 ಲೀಟರ್ ಬಳಕೆ ಮಾಡುವವರಿಗೆ ಹೊಸ ಆದೇಶದಂತೆ ಪ್ರತಿ ಸಾವಿರ ಲೀಟರ್ಗೆ 32 ರೂಪಾಯಿ ದರ ನಿಗದಿಪಡಿಸಲಾಗಿದೆ. ದಿನಕ್ಕೆ 200 ಲೀಟರ್ ಗಿಂತ ಹೆಚ್ಚಿನ ನೀರು ಬಳಕೆ ಮಾಡುವವರು ಪ್ರತಿ ಕಿಲೋಲೀಟರಿಗೆ 55 ರೂ. ಪಾವತಿಸಬೇಕು.
2000ಕ್ಕಿಂತ ಹೆಚ್ಚು ಫ್ಲ್ಯಾಟ್ ಇರುವ ಅಪಾರ್ಟ್ಮೆಂಟ್ ಗೆ ನಿಗದಿಪಡಿಸಿದ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಕಿಲೋ ಲೀಟರ್ ಗೆ 55 ರೂ. ಪಾವತಿಸಬೇಕಿದೆ. ಪಿಜಿಗಳಿಗೆ ಏಪ್ರಿಲ್ ವರೆಗೆ ಸ್ಯಾನಿಟರಿ ನೀರಿನ ಶುಲ್ಕವಾಗಿ ಮಾಸಿಕ 1000 ರೂ. ಹೆಚ್ಚುವರಿ ಆಗಿ ವಿಧಿಸಲಾಗುತ್ತಿತ್ತು.
ಮೇ ನಿಂದ 20 ಕೊಠಡಿಗಿಂತ ಕಡಿಮೆ ಇರುವ ಪಿಜಿ ಗಳಿಗೆ 5000 ರೂ., 20ಕ್ಕಿಂತ ಹೆಚ್ಚಿನ ಕೊಠಡಿಗಳು ಇದ್ದರೆ 7,500 ರೂ. ದರ ವಿಧಿಸಲಾಗುತ್ತಿತ್ತು. ಅದನ್ನು ಪರಿಷ್ಕರಿಣೆ ಮಾಡಲಾಗಿದ್ದು, 20 ಕೊಠಡಿಗಿಂತ ಕಡಿಮೆ ಇರುವ ಪಿಜಿಗಳಿಗೆ ಎರಡು ಸಾವಿರ ರೂಪಾಯಿ, 20ಕ್ಕಿಂತ ಹೆಚ್ಚು ಕೊಠಡಿ ಇರುವ ಪಿಜಿಗಳಿಗೆ 3000 ರೂ. ನಿಗದಿ ಮಾಡಲಾಗಿದೆ. ಹಾಸ್ಟೆಲ್ ಕಡೆಗೆ 5000 ರೂ.ನಿಂದ 3000 ರೂ.ಗೆ ಇಳಿಕೆ ಮಾಡಲಾಗಿದೆ.