ಪ್ರಮುಖ ಐಟಿ ದೈತ್ಯ ಸಂಸ್ಥೆಯಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS), ಜಾಗತಿಕ ಮಾರುಕಟ್ಟೆಯ ಸವಾಲುಗಳ ನಡುವೆಯೂ ತನ್ನ ಉದ್ಯೋಗಿಗಳಿಗೆ ವೇತನ ಏರಿಕೆಯ ಸಿಹಿ ಸುದ್ದಿ ನೀಡಿದೆ. 2026ರ ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ಎಲ್ಲಾ ದರ್ಜೆಯ ಉದ್ಯೋಗಿಗಳಿಗೆ ವಾರ್ಷಿಕ ಇಂಕ್ರಿಮೆಂಟ್ ಘೋಷಿಸಿರುವ ಕಂಪನಿಯು, ಈ ಮೂಲಕ ತನ್ನ ಉದ್ಯೋಗಿಗಳಿಗೆ ಆರ್ಥಿಕ ಭರವಸೆಯನ್ನು ನೀಡಿದೆ. ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಅಳವಡಿಕೆ ಮತ್ತು ಬಲವಾದ ಆರ್ಥಿಕ ಲಾಭದ ಹಿನ್ನೆಲೆಯಲ್ಲಿ ಟಿಸಿಎಸ್ ಈ ನಿರ್ಧಾರ ಕೈಗೊಂಡಿದೆ.
ಪ್ರಮುಖ ಐಟಿ ದೈತ್ಯ ಸಂಸ್ಥೆಯಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ತನ್ನ ಉದ್ಯೋಗಿಗಳಿಗೆ ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದೆ. ತನ್ನ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಗಳಿಗೆ ವಾರ್ಷಿಕ ವೇತನ ಹೆಚ್ಚಳ (Increment) ಮಾಡುವುದಾಗಿ ಘೋಷಿಸಿದೆ. ಈ ಸಂಬಳದ ಏರಿಕೆಯು ಎಲ್ಲಾ ದರ್ಜೆಯ (Grades) ಉದ್ಯೋಗಿಗಳಿಗೆ ಏಪ್ರಿಲ್ 1, 2026 ರಿಂದಲೇ ಅನ್ವಯವಾಗಲಿದೆ ಎಂದು ಕಂಪನಿ ಅಧಿಕೃತವಾಗಿ ತಿಳಿಸಿದೆ.
ಉದ್ಯೋಗಿಗಳಿಗೆ ಟಿಸಿಎಸ್ ನೀಡಿದ ಭರವಸೆ
ಒಂದೆಡೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಆಗಮನದಿಂದ ಆರ್ಥಿಕ ಹೊರೆ ತಗ್ಗಿಸಲು ಅನೇಕ ಟೆಕ್ ಕಂಪನಿಗಳು ಉದ್ಯೋಗಿಗಳನ್ನು ವಜಾಗೊಳಿಸುತ್ತಿದ್ದರೆ, ಟಿಸಿಎಸ್ ಮಾತ್ರ ಇದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. 2026ರ ಏಪ್ರಿಲ್ 1 ರಿಂದ ಎಲ್ಲಾ ಗ್ರೆಡ್‌ಗಳ ಉದ್ಯೋಗಿಗಳಿಗೆ ವೇತನ ಹೆಚ್ಚಳ ಅನ್ವಯವಾಗಲಿದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ. ಆದರೆ, ಎಷ್ಟು ಶೇಕಡಾವಾರು ವೇತನ ಹೆಚ್ಚಳ ಮಾಡಲಾಗುವುದು ಎಂಬುದನ್ನು ಕಂಪನಿ ಇನ್ನು ಅಧಿಕೃತವಾಗಿ ಬಹಿರಂಗಪಡಿಸಿಲ್ಲ.
ಜಾಗತಿಕ ಐಟಿ ವಲಯದಲ್ಲಿ ಸವಾಲುಗಳಿದ್ದರೂ ಸಹ, ಟಾಟಾ ಗ್ರೂಪ್ ತನ್ನ ಉದ್ಯೋಗಿಗಳ ಶ್ರಮಕ್ಕೆ ತಕ್ಕ ಪ್ರತಿಫಲ ನೀಡಲು ಮುಂದಾಗಿದೆ. ಕೇವಲ ಸಂಬಳ ಹೆಚ್ಚಳ ಮಾತ್ರವಲ್ಲದೆ, ಭವಿಷ್ಯದ ಅಗತ್ಯಗಳಿಗೆ ಅನುಗುಣವಾಗಿ ‘AI-ಫಸ್ಟ್’ ವಿಧಾನವನ್ನು ಜಾರಿಗೆ ತಂದಿದೆ. ತನ್ನ ಉದ್ಯೋಗಿಗಳಿಗೆ ಕೃತಕ ಬುದ್ಧಿಮತ್ತೆ (AI) ಕೌಶಲ್ಯಗಳಲ್ಲಿ ತರಬೇತಿ ನೀಡುವತ್ತ ಕಂಪನಿ ಗಮನ ಹರಿಸಿದೆ. 2026ರ ಆರ್ಥಿಕ ವರ್ಷದಲ್ಲಿ ಹೊಸದಾಗಿ ಸುಮಾರು 2,300 ಅನುಭವಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಾಗಿದೆ ಎಂದು ಕಂಪನಿ ತಿಳಿಸಿದೆ.
ಕಂಪನಿಯ ಆರ್ಥಿಕ ಫಲಿತಾಂಶಗಳು
ಟಿಸಿಎಸ್ ಆರ್ಥಿಕವಾಗಿಯೂ ಬಲವಾದ ಬೆಳವಣಿಗೆಯನ್ನು ಕಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ತ್ರೈಮಾಸಿಕದಲ್ಲಿ ಕಂಪನಿಯು 12 ಪ್ರತಿಶತ ಬೆಳವಣಿಗೆ ದಾಖಲಿಸಿದ್ದು, 13,718 ಕೋಟಿ ರೂಪಾಯಿಗಳ ನಿವ್ವಳ ಲಾಭ ಗಳಿಸಿದೆ. ಆದಾಯದ ವಿಷಯಕ್ಕೆ ಬಂದರೆ, ಕಂಪನಿಯು ಶೇ. 9.6 ರಷ್ಟು ಪ್ರಗತಿಯೊಂದಿಗೆ 70,698 ಕೋಟಿ ರೂಪಾಯಿಗಳ ವ್ಯವಹಾರ ನಡೆಸಿದೆ.

