ನವದೆಹಲಿ: ಭಾರತೀಯ ಜೀವ ವಿಮಾ ನಿಗಮ(ಎಲ್ಐಸಿ) ವತಿಯಿಂದ ಮಹಿಳೆಯರಿಗೆ ಮಾತ್ರ ಮೀಸಲಾಗಿರುವ ವಿಮೆ ಮತ್ತು ಉಳಿತಾಯ ಸಂಯೋಜಿತ ಹೊಸ ‘ಬಿಮಾ ಲಕ್ಷ್ಮಿ’ ಪಾಲಿಸಿ ಪರಿಚಯಿಸಲಾಗಿದೆ.
ಈ ಬಿಮಾ ಲಕ್ಷ್ಮಿ ಪಾಲಿಸಿಯು ಮಾರುಕಟ್ಟೆಯ ಏರಿಳಿತದೊಂದಿಗೆ ನಂಟು ಹೊಂದಿರುವುದಿಲ್ಲ. ಹೆಚ್ಚುವರಿ ಬೋನಸ್ ಪಾವತಿಗಳು ಇರುವುದಿಲ್ಲ. ಪಾಲಿಸಿಯ ಅವಧಿ 25 ವರ್ಷವಾಗಿದ್ದು, ಪ್ರೀಮಿಯಂ ಪಾವತಿ ಅವಧಿಯನ್ನು 7ರಿಂದ 15 ವರ್ಷಗಳವರೆಗೆ ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ಕನಿಷ್ಠ 18 ವರ್ಷ ಗರಿಷ್ಠ 50 ವರ್ಷ ವಯೋಮಿತಿಯವರು ಬಿಮಾ ಲಕ್ಷ್ಮಿ ಪಾಲಿಸಿ ಮಾಡಿಸಬಹುದು. ಕನಿಷ್ಠ ವಿಮಾ ಮೊತ್ತ ಎರಡು ಲಕ್ಷ ರೂಪಾಯಿ ಆಗಿದ್ದು, ಗರಿಷ್ಠ ಮೊತ್ತಕ್ಕೆ ಯಾವುದೇ ಮಿತಿ ಇರುವುದಿಲ್ಲ. ವಿಮೆ ಮೊತ್ತದ ಶೇಕಡ 7.5 ರಷ್ಟನ್ನು ಪ್ರತಿ ಎರಡು ವರ್ಷಗಳಿಗೊಮ್ಮೆ ಒಟ್ಟು 12 ಬಾರಿ ಪಾವತಿಸಲಾಗುವುದು. ಪಾಲಿಸಿ ಅವಧಿ ಮುಗಿದ ಬಳಿಕ ಮೊತ್ತದ ಶೇಕಡ 50ರಷ್ಟು ಹಣ ಮರಳಿ ಪಡೆಯಬಹುದು. ಪ್ರೀಮಿಯಂ ಪಾವತಿಯ ಮೇಲೆ ವಾರ್ಷಿಕ ಶೇಕಡ 7ರಷ್ಟು ಬಡ್ಡಿ ಸೇರಿಸಲಾಗುವುದು. ಇದನ್ನು ಮುಕ್ತಾಯದ ಸಮಯದಲ್ಲಿ ಮೊತ್ತದಲ್ಲೇ ಸೇರಿಸಿ ನೀಡಲಾಗುವುದು. ಪಾಲಿಸಿ ಜಾರಿಯಲ್ಲಿ ಇರುವಾಗ ಪಾಲಿಸಿದಾರರು ಮೃತಪಟ್ಟಲ್ಲಿ ವಾರ್ಷಿಕ ಪ್ರೀಮಿಯಂ ಅಥವಾ ವಿಮಾ ಮೊತ್ತದ 10 ಪಟ್ಟು ಈ ಎರಡರಲ್ಲಿ ಯಾವುದು ಹೆಚ್ಚೋ ಅದನ್ನು ಪಾವತಿಸಲಾಗುವುದು. ಮಾಸಿಕ, ತ್ರೈಮಾಸಿಕ, ಆರು ತಿಂಗಳು, ವಾರ್ಷಿಕ ಹೀಗೆ ಅನುಕೂಲಕ್ಕೆ ಅನುಕೂಲವಾಗಿ ಬಿಮಾ ಲಕ್ಷ್ಮಿ ಪಾಲಿಸಿ ಪ್ರೀಮಿಯಂ ಆಯ್ಕೆ ಮಾಡಿಕೊಳ್ಳಬಹುದಾಗಿದೆ.