ಬೆಂಗಳೂರು : 2025-26ನೇ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪ್ರೌಢ ಶಾಲೆಗಳಲ್ಲಿನ ಖಾಲಿ ಇರುವ ವಿಷಯ ಶಿಕ್ಷಕರ ಹುದ್ದೆಗಳಿಗೆದುರಾಗಿ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳುವ ಕುರಿತು ಸರ್ಕಾರ ಆದೇಶ ಹೊರಡಿಸಿದೆ.
ಮೇಲ್ಕಂಡ ವಿಷಯ ಹಾಗೂ ಉಲ್ಲೇಖ (1) ರನ್ವಯ 2025-26ನೇ ಸಾಲಿನಲ್ಲಿ ಸರ್ಕಾರಿ ಪ್ರೌಢಶಾಲೆಗಳಲ್ಲಿನ ಖಾಲಿ ಇರುವ ವಿಷಯ ಶಿಕ್ಷಕರ ಹುದ್ದೆಗಳಿಗೆದುರಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ನೇರ ನೇಮಕಾತಿ/ಬಡ್ತಿ/ವರ್ಗಾವಣೆ ಮೂಲಕ ಭರ್ತಿ ಮಾಡುವವರೆಗೆ ಅಥವಾ ಪ್ರಸಕ್ತ ಶೈಕ್ಷಣಿಕ ಸಾಲಿನ ಮಾರ್ಚ್-2026 ರ ಅಂತ್ಯದವರೆಗೆ, ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಒಟ್ಟು 11000 ಅತಿಥಿ ಶಿಕ್ಷಕರನ್ನು ತಾತ್ಕಾಲಿಕವಾಗಿ ಗೌರವಧನದ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಸೂಚಿಸಿರುತ್ತಾರೆ.
ಅದರಂತೆ 2025-26ನೇ ಸಾಲಿನಲ್ಲಿ ಮೊದಲ ಹಂತದಲ್ಲಿ ಸರ್ಕಾರಿ ಪ್ರೌಢಶಾಲೆಗಳಲ್ಲಿನ ಪ್ರಸ್ತುತ ಖಾಲಿ ಇರುವ 9499 ವಿಷಯ ಶಿಕ್ಷಕರ ಹುದ್ದೆಗಳಿಗೆದುರಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ನೇರ ನೇಮಕಾತಿ/ಬಡ್ತಿ/ವರ್ಗಾವಣೆ ಮೂಲಕ ಭರ್ತಿ ಮಾಡುವವರೆಗೆ ಅಥವಾ ಪ್ರಸಕ್ತ ಶೈಕ್ಷಣಿಕ ಸಾಲಿನ ಮಾರ್ಚ್-2026 ರ ಅಂತ್ಯದವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಒಟ್ಟು 9499 ಅತಿಥಿ ಶಿಕ್ಷಕರನ್ನು ತಾತ್ಕಾಲಿಕವಾಗಿ ಗೌರವಧನದ ಆಧಾರದ ಮೇಲೆ ಈ ಕೂಡಲೇ ನೇಮಕ ಮಾಡಿಕೊಳ್ಳಲು ಉಲ್ಲೇಖ (3) ಮತ್ತು (4) ರಲ್ಲಿರುವಂತೆ ಈ ಕೆಳಕಂಡ ಷರತ್ತುಗಳಿಗೊಳಪಟ್ಟು ಅನುಮತಿ ನೀಡಿದೆ. ಸದರಿ ಅತಿಥಿ ಶಿಕ್ಷಕರನ್ನು ದಿನಾಂಕ:01.06.2025 ರಿಂದ ನೇಮಕಾತಿ ಮಾಡಿಕೊಳ್ಳಲು ತಿಳಿಸಿದೆ.
ಷರತ್ತುಗಳು:-
- ಸರ್ಕಾರಿ ಪ್ರೌಢ ಶಾಲೆಗಳಿಗೆ ಶಾಲಾವಾರು/ತಾಲ್ಲೂಕುವಾರು ಖಾಲಿ ಇರುವ ಅಗತ್ಯ ಹುದ್ದೆಗಳಿಗೆ ಮಾತ್ರ ಅತಿಥಿ ಶಿಕ್ಷಕರನ್ನು ತ್ವರಿತವಾಗಿ ನೇಮಕಾತಿ ಮಾಡಲು ತಾಲ್ಲೂಕುವಾರು ಅತಿಥಿ ಶಿಕ್ಷಕರ ಹುದ್ದೆಗಳನ್ನು ಹಂಚಿಕೆ ಮಾಡಲಾಗಿರುತ್ತದೆ.
- ಅತಿಥಿ ಶಿಕ್ಷಕರ ಆಯ್ಕೆ ಜವಾಬ್ದಾರಿಯನ್ನು ಸಂಬಂಧಿಸಿದ ಸರ್ಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕರುಗಳ ಮೂಲಕವೇ ನೇಮಕ ಮಾಡುವುದು.
- ಶಾಲಾ ಶಿಕ್ಷಣ ಇಲಾಖೆಯ ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆಗಳು/ಬೆಂಗಳೂರು ಪಬ್ಲಿಕ್ ಶಾಲೆಗಳು ಹಾಗೂ ಆದರ್ಶ ವಿದ್ಯಾಲಯಗಳಲ್ಲಿ ಖಾಲಿ ಇರುವ ಸಹ ಶಿಕ್ಷಕರ ಹುದ್ದೆಗಳ ಶೇಕಡ 100 ರಷ್ಟು ಅತಿಥಿ ಶಿಕ್ಷಕರನ್ನು ಮೊದಲ ಆದ್ಯತೆ ನೀಡಿ ನೇಮಕ ಮಾಡಿಕೊಳ್ಳಲು ಕ್ರಮವಹಿಸುವುದು.
- ಸರ್ಕಾರಿ ಪ್ರೌಢ ಶಾಲಾ ಅತಿಥಿ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಕಠಿಣ ವಿಷಯಗಳಾದ ಗಣಿತ, ವಿಜ್ಞಾನ, ಆಂಗ್ಲ ವಿಷಯದ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲು ಆದ್ಯತೆ ನೀಡಲು ತಿಳಿಸಿದೆ. ನಂತರ ಇತರ ವಿಷಯಗಳಿಗೆ ಆದ್ಯತೆ ನೀಡುವುದು.
- ಸದರಿ ವಿಷಯಗಳಿಗೆ ಹೆಚ್ಚುವರಿ ಶಿಕ್ಷಕರು ಇರುವ ಶಾಲೆಗಳಿಗೆ ಅತಿಥಿ ಶಿಕ್ಷಕರ ಹುದ್ದೆಗಳನ್ನು ಮಂಜೂರು ಮಾಡುವಂತಿಲ್ಲ.
- ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡ ಹುದ್ದೆಗೆ ವರ್ಗಾವಣೆ/ನೇಮಕಾತಿ ಮುಖಾಂತರ ಖಾಯಂ ಶಿಕ್ಷಕರು ಸ್ಥಳನಿಯುಕ್ತಿಗೊಂಡಲ್ಲಿ ಸದರಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅತಿಥಿ ಶಿಕ್ಷಕರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ, ಅದೇ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿಯೇ ವರ್ಗಾವಣೆಯಿಂದ ತೆರವಾದ ಹುದ್ದೆಗೆ ಅತಿಥಿ ಶಿಕ್ಷಕರನ್ನು ಹಂಚಿಕೆ ಮಾಡುವುದು.
- ಅತಿಥಿ ಶಿಕ್ಷಕರನ್ನು ಅತೀ ಹೆಚ್ಚು ಮಕ್ಕಳಿರುವ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರ ಹುದ್ದೆಗಳು ಖಾಲಿ ಇರುವ ಪ್ರೌಢ ಶಾಲೆಗಳಿಗೆ ಆದ್ಯತೆ ಮೇರೆಗೆ ಒದಗಿಸುವುದು.
- ಅತಿಥಿ ಶಿಕ್ಷಕರನ್ನು ಆಯಾ ಹುದ್ದೆಗೆ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ನಿಗಧಿಪಡಿಸಿದ ಕನಿಷ್ಠ ವಿದ್ಯಾರ್ಹತೆಯನ್ನು ಪರಿಗಣಿಸುವುದು ಹಾಗೂ ಅತಿಥಿ ಶಿಕ್ಷಕರ ನೇಮಕಾತಿಗೆ ಸ್ವೀಕೃತವಾದ ಅರ್ಜಿಗಳಲ್ಲಿ ಹೆಚ್ಚು ಮೆರಿಟ್ ಹೊಂದಿರುವ ಅಭ್ಯರ್ಥಿಯನ್ನು ಆಯ್ಕೆ ಮಾಡತಕ್ಕದ್ದು.


