ಬೆಂಗಳೂರು: ರಾಜ್ಯದ ಪದವಿ ಪೂರ್ವ ಕಾಲೇಜುಗಳ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಪಾಠಗಳ ಜೊತೆಗೆ ಸಿಇಟಿ ತರಬೇತಿ ಕೂಡ ನೀಡಲಾಗುವುದು.
ಈ ನಿಟ್ಟಿನಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಕ್ರಮಕೈಗೊಂಡಿದ್ದು, ಇದಕ್ಕಾಗಿ ಉಪನ್ಯಾಸಕರನ್ನು ಸಜ್ಜುಗೊಳಿಸಲು ಮುಂದಾಗಿದೆ. ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯಿಂದ ಉಪನ್ಯಾಸಕರಿಗೆ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುತ್ತಿದೆ. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಈ ಕ್ರಮ ಕೈಗೊಂಡಿದೆ.
ಈಗಾಗಲೇ ಡಿಎಸ್ಇಆರ್‌ಟಿ ವತಿಯಿಂದ ವಿಜ್ಞಾನ ವಿಭಾಗದ ರಸಾಯನಶಾಸ್ತ್ರ, ಗಣಿತ, ಜೀವಶಾಸ್ತ್ರ, ಭೌತಶಾಸ್ತ್ರ ವಿಷಯಗಳ ಉಪನ್ಯಾಸಕರಿಗೆ ಎರಡು ದಿನಗಳ ಜಿಲ್ಲಾ ಮಟ್ಟದ ಸಂಯೋಜಿತ ಪಠ್ಯಕ್ರಮದ ತರಬೇತಿ ನೀಡಲಾಗಿದೆ. ಉಪನ್ಯಾಸಕರು ಪಠ್ಯಕ್ರಮ ಬೋಧನೆ ಜೊತೆಗೆ ವಿದ್ಯಾರ್ಥಿಗಳನ್ನು ಸಿಇಟಿ ಪರೀಕ್ಷೆಗೆ ಸಿದ್ಧಗೊಳಿಸಲಿದ್ದಾರೆ.
ಗ್ರಾಮೀಣ ಭಾಗಗಳಲ್ಲಿ ಬಹುತೇಕ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಸಿಗುವ ಸಾಧ್ಯತೆ ಕಡಿಮೆ ಇದ್ದು, ಅಂತಹ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನದ ಜೊತೆಗೆ ಸಿಇಟಿ ಪರೀಕ್ಷೆಯನ್ನು ಎದುರಿಸಲು ಧೈರ್ಯ ತುಂಬುವ ಉದ್ದೇಶದಿಂದ ಪದವಿ ಪೂರ್ವ ಶಿಕ್ಷಣ ಇಲಾಖೆ ಸಿಇಟಿ ತರಬೇತಿ ನೀಡಲು ಈ ಕಾರ್ಯಕ್ರಮ ರೂಪಿಸಿದೆ.

