ಬೆಂಗಳೂರು: ರಜಾ ದಿನಗಳಲ್ಲಿಯೂ ಸಬ್ ರಿಜಿಸ್ಟರ್ ಕಚೇರಿಗಳನ್ನು ತೆರೆಯಲು ನಿರ್ಧರಿಸಿದ್ದ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಜೂನ್ 1ರಿಂದಲೇ ಈ ಸೇವೆಯನ್ನು ಆರಂಭಿಸಲಿದೆ.
ರಾಜ್ಯದ ಎಲ್ಲಾ ಉಪ ನೋಂದಣಿ ಕಚೇರಿಗಳು ಜೂನ್ 1ರಿಂದ ಡಿಸೆಂಬರ್ 28ರ ನಡುವೆ ಬರುವ ಎರಡನೇ, ನಾಲ್ಕನೇ ಶನಿವಾರ ಮತ್ತು ಭಾನುವಾರದ ರಜಾ ದಿನ ಕಾರ್ಯನಿರ್ವಹಿಸಲಿವೆ.
ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತರಾದ ಕೆ.ಎ. ದಯಾನಂದ ಅವರು ವೇಳಾಪಟ್ಟಿ ಬಿಡುಗಡೆ ಮಾಡಿದ್ದಾರೆ.
ರಾಜ್ಯದ ಜಿಲ್ಲಾ ನೋಂದಣಿ ಕಚೇರಿ ವ್ಯಾಪ್ತಿಯಲ್ಲಿ ಬರುವ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಒಂದು ಕಚೇರಿ ಮಾತ್ರ ಕಾರ್ಯನಿರ್ವಹಿಸಲಿದೆ. ಪ್ರತಿ ಸಬ್ ರಿಜಿಸ್ಟ್ರಾರ್ ಕಚೇರಿಗಳು ಸರದಿ ಆಧಾರದ ಮೇಲೆ ಎರಡನೇ ಮತ್ತು ನಾಲ್ಕನೇ ಶನಿವಾರ ಹಾಗೂ ಭಾನುವಾರ ರಜಾ ದಿನದಂದು ಕಾರ್ಯ ನಿರ್ವಹಿಸಬೇಕು.
ರಜಾ ದಿನ ಕಾರ್ಯನಿರ್ವಹಿಸಿದ ಸಬ್ ರಿಜಿಸ್ಟ್ರಾರ್ ಕಚೇರಿ ಅಧಿಕಾರಿ, ಸಿಬ್ಬಂದಿಗೆ ಮಂಗಳವಾರ ರಜಾ ದಿನವೆಂದು ಘೋಷಣೆ ಮಾಡಲಾಗಿದೆ. ಇಡೀ ರಾಜ್ಯದಲ್ಲಿರುವ ಎಲ್ಲಾ ಸಬ್ ರಿಜಿಸ್ಟ್ರಾರ್ ಕಚೇರಿಗಳ ರಜಾ ದಿನ ಕರ್ತವ್ಯ ನಿರ್ವಹಿಸುವ ವೇಳಾಪಟ್ಟಿಯನ್ನು ಕಾವೇರಿ 2.0 ತಂತ್ರಾಂಶದಲ್ಲಿ ಪ್ರಕಟಿಸಲಾಗಿದೆ.
ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಏನಾದರೂ ಕೆಲಸಗಳಿದ್ದಲ್ಲಿ ಸರ್ಕಾರಿ ಅಥವಾ ಖಾಸಗಿ ಕಂಪನಿ ನೌಕರರು ರಜೆ ಪಡೆದು ಬರಬೇಕಿತ್ತು. ಕೆಲವು ಸಮಯದಲ್ಲಿ ಕುಟುಂಬದ ಎಲ್ಲಾ ಸದಸ್ಯರು ನೋಂದಣಿಗೆ ಬರಬೇಕಿರುತ್ತದೆ. ಇಂಥ ಸಂದರ್ಭದಲ್ಲಿ ರಜೆ ಸಿಗುತ್ತಿರಲಿಲ್ಲ, ಇಂತಹ ಸಮಸ್ಯೆ ಪರಿಹರಿಸಲು ರಜೆ ದಿನಗಳಲ್ಲಿ ಜಿಲ್ಲೆಗೊಂದು ಸಬ್ ರಿಜಿಸ್ಟ್ರಾರ್ ಕಚೇರಿ ತೆರೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ.