ಬೆಂಗಳೂರು: ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಗೃಹಲಕ್ಷ್ಮಿ ಯೋಜನೆಯ 30ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ತಿಳಿಸಿದ್ದಾರೆ.
ಈ ಮೂಲಕ ರಾಜ್ಯದ 1,24,10,668 ಮಹಿಳೆಯರಿಗೆ ಇದುವರೆಗೆ ತಲಾ 60 ಸಾವಿರ ರೂ.ಗಳನ್ನು ನೇರವಾಗಿ ಬ್ಯಾಂಕ್ ಖಾತೆಗೆ ಹಾಕುವ ಮೂಲಕ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಯಾವುದೇ ಭ್ರಷ್ಟಾಚಾರ, ಕಮಿಷನ್ ಇಲ್ಲದೆ ಡಿಬಿಟಿ ಮೂಲಕ ನೇರವಾಗಿ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಖಾತೆಗೆ ಹಣ ತಲುಪುತ್ತಿದೆ. ಗೃಹಲಕ್ಷ್ಮಿ ಹಣ ಮಹಿಳೆಯರ ಆರ್ಥಿಕ ಸ್ವಾವಲಂಬನೆ ಹೆಚ್ಚಳಕ್ಕೆ ಸಹಕಾರಿಯಾಗಿದೆ. ಕುಟುಂಬದ ದಿನನಿತ್ಯದ ಖರ್ಚು, ಮಕ್ಕಳ ಶಿಕ್ಷಣ, ಆಹಾರ, ಆರೋಗ್ಯ ವೆಚ್ಚಗಳಿಗೆ ನೆರವಾಗುತ್ತಿದ್ದು, ಗ್ರಾಮೀಣ ಮತ್ತು ಬಡ ಕುಟುಂಬಗಳ ಜೀವನ ಮಟ್ಟ ಸುಧಾರಣೆಗೆ ಸಹಾಯವಾಗುತ್ತಿದೆ, ಹೀಗಾಗಿ ರಾಜ್ಯ ಗೃಹಲಕ್ಷ್ಮಿಯರ ಪರವಾಗಿ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದ್ದಾರೆ.

