ಬೆಂಗಳೂರು: ಹೊಸ ಪಿಂಚಣಿ ಯೋಜನೆ(ಎನ್‌ಪಿಎಸ್) ನಿಂದ ಹಳೆ ಪಿಂಚಣಿ ಯೋಜನೆ(ಒಪಿಎಸ್) ಜಾರಿ ಮಾಡುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ.
ಶನಿವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘ ಹಮ್ಮಿಕೊಂಡಿದ್ದ ನಮ್ಮಭಿಮಾನದ ಅಭಿನಂದನೆ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಸಿಎಂ ಮಾತನಾಡಿದರು.
ನನ್ನ ಹಾಗೂ ಡಿಸಿಎಂ ಜಿ. ಪರಮೇಶ್ವರ್ ಅವರ ಮುಂದೆ ಬೇಡಿಕೆಗಳನ್ನು ಇಟ್ಟಿದ್ದೀರಿ. ಅದರ ಬಗ್ಗೆ ನಾವು ಆಲೋಚಿಸುತ್ತೇವೆ. ಹಳೆ ಪಿಂಚಣಿ ಯೋಜನೆ ಮರು ಜಾರಿ ಮಾಡುವ ಬಗ್ಗೆ ಅಧ್ಯಯನ ನಡೆಸಲು ಸರ್ಕಾರದಿಂದ ಉನ್ನತ ಮಟ್ಟದ ಸಮಿತಿ ರಚಿಸಿದ್ದು, ಆ ಸಮಿತಿಯ ವರದಿ ಬಂದಮೇಲೆ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ನಿಮ್ಮ ಜೊತೆಗೂ ಚರ್ಚೆ ನಡೆಸಿ ನಮ್ಮ ಕೈಯಲ್ಲಿ ಏನು ಸಹಾಯ ಆಗುವುದೋ ಅದನ್ನು ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಆಡಳಿತ ಯಂತ್ರದ ರಥ ನೌಕರರು, ನೀವು ಚೆನ್ನಾಗಿದ್ದರೆ ಇಡೀ ಆಡಳಿತ ಯಂತ್ರ ಚೆನ್ನಾಗಿ ನಡೆಯುತ್ತದೆ. ಕುಟುಂಬದ ರೀತಿ ನಾವು ಕೆಲಸ ಮಾಡುತ್ತೇವೆ. ನೀವು ನಮ್ಮ ಜೊತೆಯಲ್ಲೇ ಇರುತ್ತೇವೆ ಎಂದಿದ್ದೀರಿ. ನಾವು ಕೂಡ ನಿಮ್ಮ ಜೊತೆಯಲ್ಲಿ ಇರುತ್ತೇವೆ. ಮುಂದಿನ ಬಾರಿಗೆ ನಿಮ್ಮ ನಮ್ಮ ಸರ್ಕಾರ ಒಟ್ಟಿಗೆ ಕೆಲಸ ಮಾಡಬೇಕು ಯಾವುದು ಹೆಚ್ಚು ಕಡಿಮೆ ಆಗುವುದಿಲ್ಲ ತಾನೆ ಎಂದು ಹೇಳಿದ್ದಾರೆ.

