ನವದೆಹಲಿ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಕರ್ನಾಟಕದಲ್ಲಿ ತೊಗರಿ ಖರೀದಿಗೆ ನಿಗದಿ ಮಾಡಿದ ಗಡುವನ್ನು ಕೇಂದ್ರ ಸರ್ಕಾರ ಮತ್ತೆ ಒಂದು ತಿಂಗಳು ವಿಸ್ತರಣೆ ಮಾಡಿದೆ.
ಏಪ್ರಿಲ್ 15ಕ್ಕೆ ಮುಕ್ತಾಯವಾಗಬೇಕಿದ್ದ ತೊಗರಿ ಖರೀದಿ ಗಡುವನ್ನು ಮೇ 15ರವರೆಗೆ ವಿಸ್ತರಣೆ ಮಾಡಲಾಗಿದೆ. ರೈತರಿಗೆ ನಷ್ಟ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಿದೆ. ಹೆಚ್ಚಿನ ಬೆಲೆಯಲ್ಲಿ ಖರೀದಿಯ ಮೂಲಕ ರೈತರಿಗೆ ನೆರವಾಗುವ ಪ್ರಯತ್ನ ಮಾಡಿದೆ.
ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತಾಗಿ ನಿರ್ಧಾರ ಕೈಗೊಳ್ಳಲಾಗಿದೆ. ಈ ಕ್ರಮದಿಂದಾಗಿ ಮಾರುಕಟ್ಟೆಯಲ್ಲಿ ಬೆಲೆ ಸ್ಥಿರೀಕರಣ ಭರವಸೆಯನ್ನು ಕೇಂದ್ರ ಸರ್ಕಾರ ಹೊಂದಿದೆ. ಕರ್ನಾಟಕದಲ್ಲಿ ತೊಗರಿ ಖರೀದಿಯ ಗಡುವು ವಿಸ್ತರಿಸಿದ ರೀತಿಯಲ್ಲಿ ಆಂಧ್ರಪ್ರದೇಶದಲ್ಲಿ ಕಡಲೆ ಖರೀದಿ, ಉತ್ತರ ಪ್ರದೇಶದಲ್ಲಿ ಆಲೂಗಡ್ಡೆ ಖರೀದಿಗೆ ಅನುಮೋದನೆ ನೀಡಲಾಗಿದೆ.

