ಬೆಂಗಳೂರು: ರಾಜ್ಯದಲ್ಲಿ ಮೃತಪಟ್ಟವರ ಹೆಸರಿನಲ್ಲಿರುವ 51.13 ಲಕ್ಷ ಜಮೀನುಗಳ ಪಹಣಿಗಳನ್ನು ವಾರಸುದಾರರಿಗೆ ನೋಂದಣಿ ಮಾಡಿಕೊಡಲು ಕಂದಾಯ ಇಲಾಖೆ ಮುಂದಾಗಿದ್ದು, ಇ- ಪೌತಿ ಆಂದೋಲನ ಕೈಗೊಂಡಿದೆ.
ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಅಭಿವೃದ್ಧಿ ಅಧಿಕಾರಿಗಳು ರೈತರ ಮನೆ ಬಾಗಿಲಿಗೆ ತೆರಳಿ ಪೌತಿ ಖಾತೆ ಮಾಡಿಕೊಡಲಿದ್ದಾರೆ. ರೈತರ ಭೂಹಿಡುವಳಿ ಬಗ್ಗೆ ಸ್ವಷ್ಟತೆ ಪಡೆಯಲು ಸರ್ಕಾರ ಆಧಾರ್ ಸೀಡಿಂಗ್ ಕಾರ್ಯಕ್ಕೆ ಪೌತಿ ಖಾತೆ ಆಂದೋಲನ ಕೈಗೊಂಡಿದೆ. ಇ-ಪೌತಿ ಆಂದೋಲನಕ್ಕೆ ಪ್ರತ್ಯೇಕ ಸಾಫ್ಟ್ವೇರ್ ಸಿದ್ದಪಡಿಸಲಾಗಿದೆ.
ಮನೆ ಮನೆಗೆ ತೆರಳಿ ಅಧಿಕಾರಿಗಳು ವಾರಸುದಾರರ ನಿಖರ ಮಾಹಿತಿ ಪಡೆಯಲಿದ್ದು, ವಂಶವೃಕ್ಷವನ್ನು ಆಧಾರವಾಗಿ ಬಳಸಿಕೊಂಡು ಆಧಾರ್ ಸಂಖ್ಯೆ ಮೂಲಕ ಒಟಿಪಿ ಪಡೆದು ದಾಖಲು ಮಾಡುವ ಪ್ರಕ್ರಿಯೆ ಕೈಗೊಳ್ಳಲಾಗಿದೆ.
ರಾಜ್ಯದಲ್ಲಿ ಬಹಳ ಜಮೀನಿನ ಪಹಣಿಗಳು ಮೃತರ ಹೆಸರಿನಲ್ಲಿ ಇರುವುದು ಕಂಡು ಬಂದಿದೆ. 51.13 ಲಕ್ಷ ಜಮೀನುಗಳ ಮಾಲೀಕರು ನಿಧನರಾಗಿದ್ದಾರೆ. 70 ಲಕ್ಷ ಜಮೀನುಗಳು ಕೃಷಿಯೇತರ ಉದ್ದೇಶಕ್ಕೆ ಬಳಕೆಯಾಗಿದೆ. ಪಹಣಿಗಳಿಗೆ ಆಧಾರ್ ಜೋಡಣೆಯಿಂದ ಎಷ್ಟು ಕೃಷಿ ಭೂಮಿ ಇದೆ. ರೈತರ ಭೂ ಹಿಡುವಳಿ ಎಷ್ಟು? ಸಣ್ಣ ಮತ್ತು ಅತಿ ಸಣ್ಣ ರೈತರ ನಿಖರ ಅಂಕಿ ಸಂಖ್ಯೆ ಸಿಗುತ್ತದೆ.
ಪೌತಿ ಖಾತೆ ಮಾಡಿಸಲು ರೈತರು ಕಚೇರಿಗಳಿಗೆ ಅಲೆದಾಡುವುದು ತಪ್ಪುತ್ತದೆ. ಪೌತಿ ಖಾತೆ ಮಾಡುವುದರಲ್ಲಿ ಅಕ್ರಮ ಭ್ರಷ್ಟಾಚಾರಕ್ಕೆ ಬ್ರೇಕ್ ಬೀಳಲಿದೆ. ಮರಣ ಹೊಂದಿದ ವ್ಯಕ್ತಿಯ ಹೆಸರಿನಲ್ಲಿರುವ ಆಸ್ತಿಯನ್ನು ವಾರಸುದಾರ ಅಥವಾ ಕುಟುಂಬದ ಯಾವುದೇ ವ್ಯಕ್ತಿ ಹೆಸರಿಗೆ ಜಮೀನಿನ ಖಾತೆಯನ್ನು ವರ್ಗಾವಣೆ ಮಾಡುವುದನ್ನು ಪೌತಿ ಖಾತೆ ಎನ್ನಲಾಗುತ್ತದೆ.
ಮೃತರ ಹೆಸರಿನಲ್ಲಿ ಜಮೀನು ಇದ್ದರೆ ಕೃಷಿ ಸಾಲ ಸಿಗುವುದಿಲ್ಲ. ಬೀಜ, ಗೊಬ್ಬರ, ಕೃಷಿ ಯಂತ್ರೋಪಕರಣ ಖರೀದಿಗೆ ಸಬ್ಸಿಡಿ ಸಿಗುವುದಿಲ್ಲ. ಬೆಳೆ ನಷ್ಟಕ್ಕೆ ಪರಿಹಾರ ಸಿಗುವುದಿಲ್ಲ. ಇತರೆ ಇಲಾಖೆಗಳ ಸೌಲಭ್ಯಗಳು ಕೂಡ ಸಿಗುವುದಿಲ್ಲ. ಬೆಳೆ ವಿಮೆ ಮಾಡಿಸಲು ಕೂಡ ಜಮೀನಿನ ಖಾತೆ ಬದುಕಿರುವವರ ಹೆಸರಿನಲ್ಲಿ ಇರಬೇಕು.