ಸರ್ಕಾರಿ ಜಮೀನುಗಳಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಗುಡ್ ನ್ಯೂಸ್ : ಶೀಘ್ರವೇ ಹೆಸರಿಗೆ ಖಾತಾ!

ಧಾರವಾಡ : ಧಾರವಾಡ, ಅಳ್ನಾವರ ಮತ್ತು ಕಲಘಟಗಿ ತಾಲೂಕಿನಲ್ಲಿ ಸರ್ಕಾರಿ ಜಮೀನನ್ನು ನಿರ್ಧಿಷ್ಟ ಅವಧಿಗೆ ಗುತ್ತಿಗೆ ಪಡೆದು ರೈತರಿಗೆ ಉಳುಮೆ ಮಾಡಲು ಫಾರ್ಮಿಂಗ್ ಸೊಸೈಟಿಗಳು ನೀಡಿದ್ದ ಭೂಮಿಯನ್ನು ಸಾಗುವಳಿ ಮಾಡುವ ರೈತರ ಹೆಸರಿಗೆ ಖಾತಾ ಮಾಡಲು ನಿಯಮಾವಳಿ ಪ್ರಕಾರ ಕ್ರಮ ವಹಿಸಲಾಗುವುದು ಎಂದು ರಾಜ್ಯ ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಅವರು ಹೇಳಿದರು.

ಅವರು ಶನಿವಾರ ಸಂಜೆ ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ಧಾರವಾಡ, ಅಳ್ನಾವರ ಹಾಗೂ ಕಲಘಟಗಿ ತಾಲೂಕಿನ ಫಾರ್ಮಿಂಗ್ ಸೊಸೈಟಿ ಜಮೀನನ್ನು ಸಾಗುವಳಿದಾರರಿಗೆ ಮಂಜೂರಾತಿ ಕುರಿತು ಸಂಬಂಧಿಸಿದ ರೈತರು ಹಾಗೂ ಅಧಿಕಾರಿಗಳೊಂದಿಗೆ ಜರುಗಿದ ಸಭೆಯ  ಅಧ್ಯಕ್ಷತೆ ವಹಿಸಿ ಮಾತನಾಡಿದರು.

 ಧಾರವಾಡ, ಅಳ್ನಾವರ ಹಾಗೂ ಕಲಘಟಗಿ ತಾಲೂಕಿನಲ್ಲಿ ಫಾರ್ಮಿಂಗ್ ಸೊಸೈಟಿಗಳಿಗೆ ಸರ್ಕಾರಿ ಜಮೀನನ್ನು ಗುತ್ತಿಗೆ ಆಧಾರದ ಮೇಲೆ ಕೃಷಿ ಕಾರ್ಯಗಳಿಗೆ ಬಳಸಲು ಸರ್ಕಾರವು ಜಮೀನು ಮಂಜೂರು ಮಾಡಿತ್ತು. ಈಗ ಸೊಸೈಟಿಗಳು ಅಸ್ಥಿತ್ವ ಕಳೆದುಕೊಂಡಿದ್ದು, ಸಾಗುವಳಿ ಮಾಡುತ್ತಿದ್ದ ರೈತರೆ ಆ ಭೂಮಿಯಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಈಗಾಗಲೇ ವ್ಯವಸಾಯ ಮಾಡುತ್ತಿರುವ ರೈತರ ಹೆಸರಿಗೆ ಜಮೀನಿನ ಮಾಲೀಕತ್ವ ನೀಡಲು ತಿರ್ಮಾನಿಸಲಾಗಿದೆ ಎಂದು ಸಚಿವರು ತಿಳಿಸಿದರು.

 ಸಂಬಂದಿಸಿದ ತಾಲೂಕಿನ ತಹಶೀಲ್ದಾರ ಹಾಗೂ ಅವರ ಅಧಿಕಾರಿಗಳ ಮೂಲಕ ಸೊಸೈಟಿ ಜಮೀನು ಸಾಗುವಳಿ ಮಾಡುತ್ತಿರುವ ರೈತರಿಗೆ ನಮೂನೆ 57ರಲ್ಲಿ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಈಗಾಗಲೇ ಬಹಳಷ್ಟು ರೈತರು ನಿಗಧಿತ ಅರ್ಜಿ ನಮೂನೆಯನ್ನು ಸಲ್ಲಿಸಿದ್ದು, ಸಲ್ಲಿಸಿರುವ ಅರ್ಜಿಗಳು ಪರಿಶೀಲನೆ ಹಂತದಲ್ಲಿವೆ. ಕೆಲವು ರೈತರು ಭೂಮಿಯನ್ನು ಸಾಗುವಳಿ ಮಾಡುತ್ತಿದ್ದರೂ ನಮೂನೆ 57ರಲ್ಲಿ ಅರ್ಜಿ ಸಲ್ಲಿಸಿರುವುದಿಲ್ಲ. ಇಂತಹ ರೈತರಿಗೆ ಅರ್ಜಿ ಸಲ್ಲಿಸಲು ಮತ್ತೊಮ್ಮೆ ಅವಕಾಶ ಮಾಡಿಕೊಡಲು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು ಎಂದು ಸಚಿವರು ಹೇಳಿದರು.

 ಫಾರ್ಮಿಂಗ್ ಸೊಸೈಟಿಯ ಜಮೀನುಗಳಲ್ಲಿ ಸಾಗುವಳಿ ಮಾಡುತ್ತಿರುವ ರೈತರು, ತಮ್ಮ ಸಾಗುವಳಿ ಜಮೀನನ್ನು ತಮಗೆ ಮಂಜೂರಾತಿ ಮಾಡಿಕೊಡಲು ಬಹುದಿನಗಳಿಂದ ಮನವಿ ಮಾಡುತ್ತಿದ್ದಾರೆ. ಸಾಗುವಳಿದಾರ ರೈತರಿಗೆ ಅನ್ಯಾಯವಾಗದಂತೆ ಕ್ರಮವಹಿಸಿ, ಸರ್ಕಾರದ ನಿಯಮಾವಳಿ ಅನುಸಾರ ಗರಿಷ್ಠ ಮಂಜೂರಾತಿ ಮಾಡಬಹುದಾದ ಮತ್ತು ಈಗಾಗಲೇ ಸಾಗುವಳಿ ಮಾಡುತ್ತಿರುವ ರೈತರಿಗೆ ಆ ಜಮೀನು ಮಂಜೂರಾತಿ ಮಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಮತ್ತು ರೈತರಿಗೆ ನ್ಯಾಯ ಒದಗಿಸುತ್ತೇನೆ ಎಂದು ಸಚಿವರು ತಿಳಿಸಿದರು.

 ಉಪ ವಿಭಾಗಾಧಿಕಾರಿ ಅಶೋಕ ತೆಲಿ ಅವರು ಮಾತನಾಡಿ, ಮೂರು ತಾಲೂಕಿನ ಫಾರ್ಮಿಂಗ್ ಸೊಸೈಟಿ ಜಮೀನುಗಳಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಯಾವುದೇ ತೊಂದರೆ ಇಲ್ಲ. ಸಚಿವರು ರೈತರ ಈ ಸಮಸ್ಯೆ ಬಗೆಹರಿಸುವ ಕುರಿತು ಆಸಕ್ತಿ ವಹಿದ್ದು, ಆದಷ್ಟು ಬೇಗ ರೈತರ ಈ ಸಮಸ್ಯೆ ಮುಕ್ತಾಯವಾಗಲಿದೆ ಎಂದು ರೈತರಿಗೆ ತಿಳಿಸಿದರು.

 ಸಭೆಯಲ್ಲಿ ಸಹಕಾರ ಸಂಘಗಳ ಧಾರವಾಡ ಜಿಲ್ಲಾ ಉಪನಿಬಂಧಕರು, ಅಳ್ನಾವರ ತಹಶೀಲ್ದಾರ ಬಸವರಾಜ ಬೆಣ್ಣೆಶಿರೂರ, ಕಲಘಟಗಿ ತಹಶೀಲ್ದಾರ ಯಲ್ಲಪ್ಪ ಗೋಣೆಣ್ಣನವರ, ಧಾರವಾಡ ತಹಶೀಲ್ದಾರ ಕಚೇರಿಯ ಗ್ರೇಡ್-2 ತಹಶೀಲ್ದಾರ ಹಣಮಂತ ಕೊಚ್ಚರಗಿ, ಶೀರಸ್ತೆದಾರ ಮಂಜುನಾಥ ಗುಳಪ್ಪನ್ನವರ, ಧಾರವಾಡ ವೃತ್ತದ ಕಂದಾಯ ನಿರೀಕ್ಷಕ ಗುರು ಸುಣಗಾರ, ಪ್ರಕರಣಗಳ ನಿರ್ವಾಹಕಿ ರಂಜಿತಾ ಹಿರೇಮಠ, ಭೂದಾಖಲೆಗಳ ಇಲಾಖೆಯ ಧಾರವಾಡ ಮತ್ತು ಅಳ್ನಾವರ ತಾಲೂಕಾ ಸಹಾಯಕ ನಿರ್ದೇಶಕ ರಾಜಶೇಖರ ಹಳ್ಳೂರ, ಕಲಘಟಗಿ ತಾಲೂಕಾ ಸಹಾಯಕ ನಿರ್ದೇಶಕ ಎಸ್.ಸಿ.ಕುಲರ್ಕಣಿ ಮತ್ತು ಧಾರವಾಡ, ಅಳ್ನಾವರ, ಕಲಘಟಗಿ ತಾಲೂಕುಗಳ ಫಾರ್ಮಿಂಗ್ ಸೊಸೈಟಿಯ ಅಧ್ಯಕ್ಷರು, ಕಾರ್ಯದರ್ಶಿಗಳು, ಸಂಬಂಧಪಟ್ಟ ಜಮೀನುಗಳ ರೈತರು, ಸಾಗುವಳಿದಾರರು, ಸಂಬಂಧಪಟ್ಟ ಗ್ರಾಮಗಳ ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತಾಧಿಕಾರಿಗಳು, ಸಾರ್ವಜನಿಕರು ಭಾಗವಹಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read