ಕಾರವಾರ: ಗೋಕರ್ಣ ಬಳಿಯ ದುಬ್ಬನಸಶಿ ಗ್ರಾಮದಲ್ಲಿ ಕರಾವಳಿ ನಿಯಂತ್ರಣ ವಲಯ (CRZ) ನಿಯಮ ಉಲ್ಲಂಘಿಸಿದ 44 ಅನಧಿಕೃತ ರೆಸಾರ್ಟ್‌ಗಳನ್ನು ತೆರವುಗೊಳಿಸಲು ಕುಮಟಾ ತಹಶೀಲ್ದಾರ್ ಆದೇಶಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಬಳಿಯ ದುಬ್ಬನಸಶಿ ಗ್ರಾಮದಲ್ಲಿ ಕರಾವಳಿ ನಿಯಂತ್ರಣ ವಲಯ ನಿಯಮ ಉಲ್ಲಂಘಿಸಿ ಅನಧಿಕೃತವಾಗಿ ನಿರ್ಮಿಸಲಾದ ರೆಸಾರ್ಟ್‌ಗಳ ವಿರುದ್ಧ ತಾಲೂಕು ಆಡಳಿತ ಕಠಿಣ ಕ್ರಮ ಕೈಗೊಂಡಿದೆ. ಕುಮಟಾ ತಹಶೀಲ್ದಾರ್ ಶ್ರೀಕೃಷ್ಣ ಅವರು ಒಟ್ಟು 44 ಅನಧಿಕೃತ ರೆಸಾರ್ಟ್‌ಗಳನ್ನು ತೆರವುಗೊಳಿಸಲು ಆದೇಶ ಹೊರಡಿಸಿದ್ದಾರೆ.
ಈ ರೆಸಾರ್ಟ್‌ಗಳು ದುಬ್ಬನಸಶಿ, ನಡುಮಸ್ಕೇರಿ ಸೇರಿದಂತೆ ಅರಬ್ಬಿ ಸಮುದ್ರ ತೀರದ ಭಾಗಗಳಲ್ಲಿ ಅನಧಿಕೃತವಾಗಿ ನಿರ್ಮಾಣಗೊಂಡಿವೆ. 44 ರೆಸಾರ್ಟ್‌ಗಳ ಪೈಕಿ 16 ರೆಸಾರ್ಟ್ ಮಾಲೀಕರು ಹೈಕೋರ್ಟ್‌ನಿಂದ ತಡೆಯಾಜ್ಞೆ ಪಡೆದಿದ್ದಾರೆ. ಈ ಕಾರಣದಿಂದಾಗಿ ಆ ರೆಸಾರ್ಟ್‌ಗಳನ್ನು ಈಗಿನ ಪರಿಸ್ಥಿತಿಯಲ್ಲಿ ತೆರವುಗೊಳಿಸಲಾಗುವುದಿಲ್ಲ ಎಂದು ತಿಳಿದುಬಂದಿದೆ.
ಇನ್ನುಳಿದ 28 ರೆಸಾರ್ಟ್‌ಗಳ ಪೈಕಿ 7 ರೆಸಾರ್ಟ್‌ಗಳನ್ನು ಮಾಲೀಕರು ಸ್ವಯಂ ಪ್ರೇರಿತವಾಗಿ ತೆರವು ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಉಳಿದ 21 ರೆಸಾರ್ಟ್‌ಗಳನ್ನು ತಾಲೂಕು ಆಡಳಿತ ಸೀಜ್ ಮಾಡಿ, ನಿಯಮಾನುಸಾರವಾಗಿ ತೆರವುಗೊಳಿಸುವ ಕ್ರಮ ಕೈಗೊಳ್ಳಲಿದೆ ಎಂದು ಕುಮಟಾ ತಹಶೀಲ್ದಾರ್ ಶ್ರೀಕೃಷ್ಣ ತಿಳಿಸಿದ್ದಾರೆ.
ಇದೇ ವೇಳೆ ಅನಧಿಕೃತ ರೆಸಾರ್ಟ್ ತೆರವು ಕಾರ್ಯಾಚರಣೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಎನ್ ಎಸ್ 163ರ ಅನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ದುಬ್ಬನಸಶಿ, ಗಂಗೆಕೊಳ್ಳ ಹಾಗೂ ಭಾವಿಕೊಡ್ಲ ಗ್ರಾಮಗಳಲ್ಲಿ ಇಂದು ಬೆಳಗ್ಗೆ 10 ರಿದ 10ರ ಬೆಳಗ್ಗೆ 10 ಗಂಟೆ ವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಕುಮಟಾ ಸಹಾಯಕ ಆಯುಕ್ತ ಶ್ರವಣಕುಮಾರ ಈ ಆದೇಶ ಹೊರಡಿಸಿದ್ದಾರೆ.
ಪ್ರತಿಭಟನೆ:
ಇನ್ನೊಂದೆಡೆ ರೆಸಾರ್ಟ್ ತೆರವು ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿ ರೆಸಾರ್ಟ್ ಮಾಲೀಕರು ಮತ್ತು ಕಾರ್ಮಿಕರು ದುಬ್ಬನಸಶಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ದಿನಕರ ಶೆಟ್ಟಿ, ರೆಸಾರ್ಟ್ ತೆರವು ಮಾಡಲು ಬಿಡುವುದಿಲ್ಲ, ನಿಮ್ಮ ಜೊತೆ ನಾನು ಇದ್ದೇನೆ. ನ್ಯಾಯ ಸಿಗಬೇಕು ಎಂದು ಘೋಷಣೆ ಕೂಗಿ ಬೆಂಬಲ ವ್ಯಕ್ತಪಡಿಸಿದರು.
ಇದರಿಂದಾಗಿ ಗೋಕರ್ಣ ಸಮೀಪದ ಕರಾವಳಿ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ತಾಲೂಕು ಆಡಳಿತ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಂಡಿದೆ.

