ಕೊಲೆಯಾದ 18 ವರ್ಷದ ನಂತರ ಬಾಲಕಿ ಅಸ್ಥಿಪಂಜರದ ಅಂತ್ಯಕ್ರಿಯೆ

ಮಡಿಕೇರಿ: ಕೊಲೆಯಾಗಿದ್ದ ಬಾಲಕಿಯ ಅಸ್ಥಿಪಂಜರದ ಅಂತ್ಯಸಂಸ್ಕಾರ 18 ವರ್ಷದ ನಂತರ ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಅಯ್ಯಂಗೇರಿ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಅಯ್ಯಂಗೇರಿಯ 13 ವರ್ಷದ ಬಾಲಕಿ ಸಫಿಯಾಳನ್ನು 2006ರಲ್ಲಿ ಕಾಸರಗೋಡು ಮೂಲದ ಕೆ.ಸಿ. ಹಂಜ ಎಂಬಾತ ಮನೆ ಕೆಲಸಕ್ಕಾಗಿ ಗೋವಾಕ್ಕೆ ಕರೆದುಕೊಂಡು ಹೋಗಿದ್ದ. ಈ ಸಂದರ್ಭದಲ್ಲಿ ಬಿಸಿ ಗಂಜಿ ಬಾಲಕಿಯ ಮೈಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಳು. ಬಾಲಕಾರ್ಮಿಕ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಾಗುವ ಭಯದಿಂದ ಆಕೆಯನ್ನು ಕೊಲೆ ಮಾಡಿ ಮೃತದೇಹವನ್ನು ಮೂರು ತುಂಡುಗಳಾಗಿ ಕತ್ತರಿಸಿ ಗೋವಾದಲ್ಲಿ ಹಂಜ ಹೂತು ಹಾಕಿದ್ದ.

ನಂತರ ಬಾಲಕಿ ಕಾಣೆಯಾಗಿರುವುದಾಗಿ ಪೋಷಕರಿಗೆ ಮಾಹಿತಿ ನೀಡಿದ್ದ. ಪುತ್ರಿ ನಾಪತ್ತೆಯಾಗಿರುವ ಬಗ್ಗೆ ಅನುಮಾನಗೊಂಡ ಪೋಷಕರು ಹಂಜ ವಿರುದ್ಧ ದೂರು ದಾಖಲಿಸಿದ್ದರು. ಕಾಸರಗೋಡಿನಲ್ಲಿ ಸಂಘಟನೆಗಳು ಸತತ 90 ದಿನ ಹೋರಾಟ, ಪ್ರತಿಭಟನೆ ನಡೆಸಿ ಪ್ರಕರಣದ ತನಿಖೆಗೆ ಒತ್ತಾಯಿಸಿದ್ದವು.

ನಂತರ ಅಪರಾಧ ವಿಭಾಗಕ್ಕೆ ಕೇರಳ ಸರ್ಕಾರ ಪ್ರಕರಣದ ತನಿಖೆಯನ್ನು ವರ್ಗಾವಣೆ ಮಾಡಿದ್ದು, ತನಿಖೆ ನಡೆದಾಗ ಹತ್ಯೆ ಪ್ರಕರಣ ಬೆಳಕಿಗೆ ಬಂದು 2008ರಲ್ಲಿ ಬಾಲಕಿಯ ಅಸ್ಥಿಪಂಜರ ಗೋವಾದಲ್ಲಿ ಪತ್ತೆಯಾಗಿತ್ತು. ಹಂಜನನ್ನು ಬಂಧಿಸಿದ್ದು, ಕಾಸರಗೋಡು ಸೆಷನ್ಸ್ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿತ್ತು. 2019 ರಲ್ಲಿ ಕೇರಳ ಹೈಕೋರ್ಟ್ ಆತನ ಶಿಕ್ಷೆಯನ್ನು ಜೀವಾವಧಿಗೆ ಇಳಿಕೆ ಮಾಡಿತ್ತು. ಕೊಲೆಯಾದ ಸಫಿಯಾಳ ಅಸ್ಥಿಪಂಜರ ಕಾಸರಗೋಡು ನ್ಯಾಯಾಲಯದಲ್ಲಿಯೇ ಉಳಿದಿತ್ತು. ಪೋಷಕರು ನ್ಯಾಯಾಲಯಕ್ಕೆ ಮನವಿ ಮಾಡಿ ದೇಹದ ಅವಶೇಷ ಹಸ್ತಾಂತರ ಮಾಡುವಂತೆ ಕೋರಿದ್ದರು. ನವೆಂಬರ್ 6ರಂದು ಕಾಸರಗೋಡು ಜಿಲ್ಲಾ ಪ್ರಧಾನ ಮತ್ತು ನ್ಯಾಯಾಲಯ ಅಸ್ಥಿಪಂಜರದ ಅವಶೇಷಗಳನ್ನು ಬಾಲಕಿಯ ಪೋಷಕರಿಗೆ ನೀಡಲು ಆದೇಶಿಸಿತ್ತು. ಅವುಗಳನ್ನು ಪಡೆದುಕೊಂಡ ಕುಟುಂಬದವರು ಸೋಮವಾರ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read