ಹರಿದ್ವಾರಕ್ಕೆ ಮಗುವಿನ ಮುಂಡನ ಕಾರ್ಯಕ್ರಮಕ್ಕಾಗಿ ತೆರಳುತ್ತಿದ್ದ ಕುಟುಂಬವೊಂದು ರೈಲಿನಲ್ಲಿ ನಡೆದ ಸೀಟು ವಿವಾದದಿಂದಾಗಿ ಭಾರಿ ಸಂಕಷ್ಟಕ್ಕೆ ಸಿಲುಕಿದೆ. ತಾಯಿ ಮತ್ತು ಮಗಳ ಅಟ್ಟಹಾಸದಿಂದಾಗಿ 12 ಸದಸ್ಯರಿದ್ದ ಈ ಕುಟುಂಬವು ರೈಲಿನಿಂದ ಅರ್ಧಹಾದಿಯಲ್ಲೇ ಇಳಿಯಬೇಕಾದ ಅನಿವಾರ್ಯತೆ ಎದುರಾಯಿತು. ಈ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಏನಿದು ಘಟನೆ?
ಮಗುವಿನ ಮುಂಡನಕ್ಕಾಗಿ ಕುಟುಂಬವೊಂದು ಹರಿದ್ವಾರಕ್ಕೆ ರೈಲಿನಲ್ಲಿ ಪ್ರಯಾಣಿಸುತ್ತಿತ್ತು. ಇವರ ಪಕ್ಕದ ಮಿಡಲ್ ಬರ್ತ್ (Middle Berth) ಸೀಟನ್ನು ತಾಯಿ ಮತ್ತು ಮಗಳು ಅಕ್ರಮವಾಗಿ ಆಕ್ರಮಿಸಿಕೊಂಡಿದ್ದರು. ಆ ಸೀಟು ಮಗುವಿಗಾಗಿ ಕಾಯ್ದಿರಿಸಲ್ಪಟ್ಟಿತ್ತು. ಮಗುವಿನ ತಂದೆ ಸೀಟು ಬಿಟ್ಟುಕೊಡುವಂತೆ ವಿನಂತಿಸಿದಾಗ, ಆ ಮಹಿಳೆಯರು ಜಗಳಕ್ಕೆ ಇಳಿದಿದ್ದಾರೆ.
ಟಿಕೆಟ್ ಕಲೆಕ್ಟರ್ ಎದುರೇ ಹಲ್ಲೆ
ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಟಿಕೆಟ್ ಕಲೆಕ್ಟರ್ (TC) ಮಧ್ಯಪ್ರವೇಶಿಸಿ, ಆ ಮಹಿಳೆಗೆ ಬೇರೆ ಸೀಟು ನೀಡುವುದಾಗಿ ಹೇಳಿದರು. ಆದರೆ, ಅದನ್ನು ಒಪ್ಪದ ಯುವತಿ ತನ್ನ ಸೀಟು ಬದಲಿಸುವ ಬದಲು 12 ಜನರಿದ್ದ ಆ ಕುಟುಂಬವನ್ನೇ ಬೇರೆಡೆ ಹೋಗುವಂತೆ ಗದರಿಸಿದ್ದಾಳೆ. ವಾಗ್ವಾದದ ನಡುವೆ ಆ ಯುವತಿ ಸೀಟಿನ ಹಕ್ಕುದಾರ ಪ್ರಯಾಣಿಕನಿಗೆ ಕಪಾಳಮೋಕ್ಷ ಮಾಡಿದ್ದಾಳೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, ತಮ್ಮ ಕುಟುಂಬದ ವಕೀಲರ ಮೂಲಕ ನೋಡುವುದಾಗಿ ಬೆದರಿಕೆಯನ್ನೂ ಹಾಕಿದ್ದಾರೆ.
ಅರ್ಧಹಾದಿಯಲ್ಲೇ ರೈಲಿನಿಂದ ಇಳಿದ ಕುಟುಂಬ
ಸಹ ಪ್ರಯಾಣಿಕರು ಮತ್ತು ಟಿಟಿ ಅವರು ಎಫ್ಐಆರ್ ದಾಖಲಿಸಲು ಬೆಂಬಲ ನೀಡುವುದಾಗಿ ಹೇಳಿದರೂ, ಕುಟುಂಬವು ಗಾಬರಿಗೊಂಡಿತ್ತು. ಈ ಗಲಾಟೆಯಿಂದಾಗಿ ಅವರು ಶಹರಾನ್ ಪುರ ರೈಲ್ವೆ ನಿಲ್ದಾಣದಲ್ಲಿ ಇಳಿಯಬೇಕಾಯಿತು. ಅಲ್ಲಿಗೆ ಆ ತಾಯಿ-ಮಗಳು ಸುಮಾರು 18-19 ಜನರನ್ನು ಕರೆದುಕೊಂಡು ಬಂದು ಮತ್ತೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಕೊನೆಗೆ ಈ ಕುಟುಂಬವು ಯಮುನಾನಗರದಲ್ಲಿ ಎಫ್ಐಆರ್ ದಾಖಲಿಸಿದೆ.

