ಬೆಂಗಳೂರು: ಬೆಂಗಳೂರಿನ ಕುಂಬಳಗೋಡು ಬಳಿಯ ಕನ್ನಿಕಾ ನಗರದಲ್ಲಿ ಕೆಲ ದಿನಗಳ ಹಿಂದೆ 7 ವರ್ಷದ ಬಾಲಕಿ ಸಾವನ್ನಪ್ಪಿದ್ದ ಘಟನೆ ನಡೆದಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಬಾಲಕಿಯ ಮಲತಂದೆಯನ್ನು ಬಂಧಿಸಿದ್ದು, ಆಘಾತಕಾರಿ ಮಾಹಿತಿಯನ್ನು ಆರೋಪಿ ಬಾಯ್ಬಿಟ್ಟಿದ್ದಾನೆ.
7 ವರ್ಷದ ಸಿರಿ ಮೃತ ಬಾಲಕಿ. ಮಲತಂದೆ ದರ್ಶನ್, ಬಾಲಕಿಗೆ ಚಿತ್ರಹಿಂಸೆ ನೀಡಿ ಕೊಲೆಗೈದು ಬಳಿಕ ಪರಾರುಯಾಗಿದ್ದಾನೆ ಎಂಬುದು ತನಿಖೆಯಿಂದ ಬಯಲಾಗಿದೆ. ಬಾಲಕಿ ಸಿರಿ ತಾಯಿ ಶಿಲ್ಪಾ ತನ್ನ ಪತಿ ಸಾವಿನ ಬಳಿಕ ದರ್ಶನ್ ಎಂಬಾತನನ್ನು ಎರಡನೇ ವಿವಾಹವಾಗಿದ್ದಳು. ದರ್ಶನ್ ಗೆ ಬಾಲಕಿ ಸಿರಿ ಕಂಡರೆ ಆಗುತ್ತಿರಲಿಲ್ಲ. ಆದರೆ ಎಲ್ಲರ ಮುಂದೆ ನಾಟಕವಾಡುತ್ತಿದ್ದ, ಹಿಂದಿನಿಂದ ಬಾಲಕಿಗೆ ಹಿಂಸಿಸುತ್ತಿದ್ದ. ಸಿರಿಯ ಅಜ್ಜಿ ಅಂದರೆ ಶಿಲ್ಪಾಳ ತಾಯಿಇರುವವರೆಗೂ ಹಾಗೂಹೀಗೂ ಸಿರಿಯನ್ನು ಚನ್ನಾಗಿ ನೋಡಿಕೊಳ್ಳುತ್ತಿರುವಂತೆ ಡ್ರಾಮ ಮಾಡಿದ್ದ ದರ್ಶನ್ ಸಿರಿ ಅಜ್ಜಿ ಸಾವಿನ ಬಳಿಕ ತನ್ನ ಅಸಲಿ ಮುಖ ತೋರಿಸಲಾರಂಭಿಸಿದ್ದ.
ಬಾಲಕಿಗೆ ಚಿತ್ರಹಿಂಸೆ ನೀಡುತ್ತಿದ್ದ. ಮಲತಂದೆಯ ಹಿಂಸೆಗೆ ನಲುಗಿದ್ದ ಸಿರಿ ದರ್ಶನ್ ನನ್ನು ಕಂಡರೆ ಭಯಪಡುತ್ತಿದ್ದಳು, ತಾಯಿ ಕೆಲಸದಿಂದ ವಾಪಸ್ ಆಗಿವವರೆಗೂ ಮನೆಗೆ ಹೋಗುವುದನ್ನು ಅವಾಯ್ಡ್ ಮಾಡುತ್ತಿದ್ದಳು. ಅದೇ ರೀತಿ ಕಳೆದ ಶುಕ್ರವಾರ ಶಾಲೆಯಿಂದ ವಾಪಸ್ ಆದ ಬಾಲಕಿ ಸಿರಿ, ಮನೆಗೆ ಹೋಗದೇ ಮನೆ ಬಳಿ ಇದ್ದ ಅಂಗಡಿಯಲ್ಲಿ ಕುಳಿತಿದ್ದಳು. ತಾಯಿ ಕೆಲಸದಿಂದ ಬರಲಿ ಎಂದು ಕಾಯುತ್ತಿದ್ದಳು. ಸಿರಿ ಅಂಗಡಿ ಬಳಿ ಇರುವುದು ಕಂಡ ಮಲತಂದೆ ದರ್ಶನ್ ಅಲ್ಲಿಗೆ ಬಂದು ಮನೆಗೆ ಬರುವಂತೆ ಹೇಳಿದ್ದಾನೆ. ಸಿರಿ ಅಮ್ಮ ಬರುವರೆಗೂ ಮನೆಗೆ ಬರುವುದುಲ್ಲ ಎಂದು ಹಠ ಹಿಡಿದಿದ್ದಾಳೆ. ಆದರೂ ಬೈದು ಆಕೆಯನ್ನು ಕರೆದೊಯ್ದ ದರ್ಶನ್, ಮನೆಗೆ ಹೋದ ಬಳಿಕ ಸಿರಿಗೆ ಮನ ಬಂದಂತೆ ಹೊಡೆದಿದ್ದಾನೆ. ಸಾಲದ್ದಕ್ಕೆ ಆಕೆಯ ಕತ್ತು ಹಿಸುಕಿ ಉಸಿರುಗಟ್ಟುವಂತೆ ಮಾಡಿದ್ದಾನೆ. ಮಲತಂದೆಯ ಚಿತ್ರಹಿಂಸೆಗೆ ಸಿರಿ ಮೂಗಿನಿಂದ ರಕ್ತಚಿಮ್ಮಿದೆ. ಬಾಯಿಯಲ್ಲಿಯೂ ರಕ್ತ ಬಂದಿದೆ. ತೀವ್ರ ಗಂಭೀರ ಸ್ಥಿತಿ ತಲುಪಿದ್ದ ಸಿರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಮೂಗಿನಿಂದ ರಕ್ತ ಸೋರಿದ್ದರಿಂದ ಸಾಕ್ಷ್ಯ ನಾಶಕ್ಕಾಗಿ ದರ್ಶನ್ ಸ್ಥಳವನ್ನು ಕ್ಲೀನ್ ಮಾಡಿದ್ದಾನೆ. ಬಾಲಕಿ ಸಿರಿಯನ್ನು ಕೊಲೆಗೈದಿದ್ದರೂ ತನಗೇನೂ ಗೊತ್ತೇ ಇಲ್ಲದಂತೆ ಪತ್ನಿ ಶಿಲ್ಪಾ ಮನೆಗೆ ಬಂದ ಬಳಿಕ ನಾಟಕವಾಡಿದ್ದಾನೆ. ಸಿರ್ ಮಾತನಾಡುತ್ತಿಲ್ಲ. ಯಾಕೆಂದು ತಿಳಿಯುತ್ತಿಲ್ಲ ಎಂದಿದ್ದಾನೆ. ಮಗಳ ಬಳಿ ಹೋಗಿ ನೋಡಿದ ಶಿಲ್ಪಾ ಬೆಚ್ಚಿಬಿದ್ದಿದ್ದಾಳೆ. ಮಗಳ ಸ್ಥಿತಿ ಕಂಡು ಶಿಲ್ಪಾ ಕಿರುಚುತ್ತಿದ್ದಂತೆ ಇಬ್ಬರನ್ನೂ ರೂಮಿನಲ್ಲಿ ಕೂಡಿ ಹಾಕಿ ಬೈಕ್ ಹತ್ತಿ ದರ್ಶನ್ ಪರಾರುಯಾಗಿದ್ದಾನೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ನಾಪತ್ತೆಯಾಗಿದ್ದ ಆರೋಪಿ ದರ್ಶನ್ ನನ್ನು ಬಂಧಿಸಿ ತನಿಖೆ ನಡೆಸಿದ್ದಾರೆ. ಖಾಸಗಿತನಕ್ಕೆ ಅಡ್ಡಿಯಾಗಬಹುದು ಎಂಬ ಕಾರಣಕ್ಕೆ ಸಿರಿಯನ್ನು ಕೊಲೆಗೈದಿರುವುದಾಗಿ ದರ್ಶನ್ ಬಾಯ್ಬಿಟ್ಟಿದ್ದಾನೆ. ತನಿಖೆ ಮುಂದುವರೆದಿದೆ.
