ಪತಿಯಿಂದ ವಿಚ್ಛೇದನ ಪಡೆದ ಬಳಿಕ ತೀವ್ರ ಮಾನಸಿಕ ಒತ್ತಡ ಹಾಗೂ ಖಿನ್ನತೆಗೆ ಒಳಗಾಗಿದ್ದ 40 ವರ್ಷದ ಮಹಿಳಾ ಮನೋವೈದ್ಯೆಯೊಬ್ಬರು ಅಪಾರ್ಟ್‌ಮೆಂಟ್‌ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಧೋಖಾದಾಯಕ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ.
ಡಾ. ಹೆಮಿಕಾ ಅಗರ್ವಾಲ್ ಮೃತಪಟ್ಟ ದುರ್ದೈವಿ. ಭಾನುವಾರ ಸಂಜೆ ಸುಮಾರು 7.30ರ ವೇಳೆಗೆ ರಾಜ್ ನಗರ ಎಕ್ಸ್‌ಟೆನ್ಷನ್‌ನಲ್ಲಿರುವ ‘ಆಫೀಸರ್ಸ್ ಸಿಟಿ-2’ ಅಪಾರ್ಟ್‌ಮೆಂಟ್‌ನ 5ನೇ ಮಹಡಿಯಿಂದ ಜಿಗಿದು ಅವರು ಪ್ರಾಣ ಕಳೆದುಕೊಂಡಿದ್ದಾರೆ.
https://x.com/Zuber_Akhtar1/status/2083968914590171615
ಘಟನೆಯ ಹಿನ್ನೆಲೆ:
ಸುಮಾರು ಒಂದೂವರೆ ವರ್ಷದ (18 ತಿಂಗಳು) ಹಿಂದೆ ಡಾ. ಹೆಮಿಕಾ ಅವರಿಗೆ ವಿಚ್ಛೇದನವಾಗಿತ್ತು. ಅಂದಿನಿಂದ ಅವರು ತೀವ್ರ ಭಾವನಾತ್ಮಕ ನೋವು ಹಾಗೂ ಮಾನಸಿಕ ಒತ್ತಡದಿಂದ ಬಳಲುತ್ತಿದ್ದರು. ಭಾನುವಾರ ಅಪಾರ್ಟ್‌ಮೆಂಟ್‌ನಿಂದ ಕೆಳಗೆ ಬಿದ್ದ ತಕ್ಷಣವೇ ಸ್ಥಳೀಯರು ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಅವರು ಈಗಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದರು.
ಮೃತರ ತಂದೆ ಹಾಗೂ ನಗರದ ಖ್ಯಾತ ಮನೋವೈದ್ಯರಾದ ಡಾ. ಆರ್. ಚಂದ್ರ ಮಾತನಾಡಿ, “ವಿಚ್ಛೇದನದ ಬಳಿಕ ಮಗಳು ಕಳೆದ 18 ತಿಂಗಳುಗಳಿಂದ ತೀವ್ರ ಮಾನಸಿಕ ಒತ್ತಡ ಮತ್ತು ಖಿನ್ನತೆಯಿಂದ ಹೋರಾಡುತ್ತಿದ್ದಳು. ದಾಂಪತ್ಯ ಜೀವನ ಅಂತ್ಯಗೊಂಡಿದ್ದಕ್ಕೆ ಆಕೆ ತೀವ್ರವಾಗಿ ಮನನೊಂದಿದ್ದಳು” ಎಂದು ಹೇಳಿದ್ದಾರೆ.
ಪೊಲೀಸ್ ತನಿಖೆ ಚುರುಕು:
ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಫೋರೆನ್ಸಿಕ್ ತಂಡವು ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ತನಿಖಾಧಿಕಾರಿಗಳು ಘಟನೆಯ ಸಂಪೂರ್ಣ ಸರಣಿಯನ್ನು ತಿಳಿದುಕೊಳ್ಳಲು ಕುಟುಂಬಸ್ಥರು ಹಾಗೂ ಸಂಬಂಧಪಟ್ಟವರ ಹೇಳಿಕೆಗಳನ್ನು ದಾಖಲಿಸಿಕೊಳ್ಳುತ್ತಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯಕ್ಕೆ ಯಾವುದೇ ಆತ್ಮಹತ್ಯೆ ಪತ್ರ (ಡೆತ್ ನೋಟ್) ಅಧಿಕೃತವಾಗಿ ಪತ್ತೆಯಾಗಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಹಾಗೂ ತನಿಖೆಯ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

