ಬೆಂಗಳೂರು ನಗರದ ಆಡಳಿತ ಎನ್‌ಡಿಎ ಕೈಗೆ ಬರಬೇಕು ಎಂದು ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಪಕ್ಷದ ನೂತನ ಪದಾಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ ಅವರು, ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ಚುನಾವಣೆ ಕುರಿತು ಮಹತ್ವದ ಟಾಸ್ಕ್‌ಗಳನ್ನು ನೀಡಿದ್ದಾರೆ.
ಗ್ರೇಟರ್ ಬೆಂಗಳೂರು ಜೆಡಿಎಸ್ ಸಂಘಟನೆಗೆ ಸಂಬಂಧಿಸಿದಂತೆ ಎಲ್ಲಾ 28 ವಿಧಾನಸಭೆ ಕ್ಷೇತ್ರಗಳ ಪ್ರಮುಖರ ಜತೆ ಮಹತ್ವದ ಸಭೆ ನಡೆಸಿದ ಹೆಚ್.ಡಿ. ಕುಮಾರಸ್ವಾಮಿ ಒಟ್ಟು 369 ವಾರ್ಡ್‌ಗಳಲ್ಲಿ ಪಕ್ಷ ಸಂಘಟನೆ ಸೂಚನೆಗಳನ್ನು ಕೊಟ್ಟಿದ್ದಾರೆ.
ಪಕ್ಷದ ರಾಜ್ಯ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷ ಹೆಚ್.ಎಂ. ರಮೇಶ್ ಗೌಡ ಸೇರಿದಂತೆ 5 ವಿಭಾಗಗಳ ನೂತನ ಅಧ್ಯಕ್ಷರು, ಎಲ್ಲಾ ವಿಧಾನಸಭೆ ಕ್ಷೇತ್ರಗಳ ನೂತನ ಅಧ್ಯಕ್ಷರು ಪಾಲ್ಗೊಂಡಿದ್ದರು.
ಸಭೆಯಲ್ಲಿ ಚರ್ಚೆ ನಡೆಸಿದ ಅಂಶಗಳು: ಜಿಬಿಎ ಚುನಾವಣೆಯನ್ನು ಮುಂದಿಟ್ಟುಕೊಂಡು ಜೆಡಿಎಸ್ ಪಕ್ಷ ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಪಕ್ಷದ ಘಟಕವನ್ನು ಪುನಃ ರಚನೆ ಮಾಡಿದೆ. ಎಲ್ಲಾ ಹೊಸ ಪದಾಧಿಕಾರಿಗಳ ನೇಮಕವಾದ ಬಳಿಕ ನಡೆದ ಮೊದಲ ಮಹತ್ವದ ಸಭೆ ಇದಾಗಿತ್ತು.
ಸಭೆಯಲ್ಲಿ ಹೆಚ್.ಡಿ.ಕುಮಾರಸ್ವಾಮಿ ವಾರ್ಡ್‌ವಾರು, ಮತಗಟ್ಟೆವಾರು ಪಕ್ಷ ಸಂಘಟನೆ ಮಾಡುವ ಕುರಿತು ಕೆಲವು ಮಹತ್ವದ ಸೂಚನೆಗಳನ್ನು ಕೊಟ್ಟರು. ನಗರದ ಎಲ್ಲಾ ಭಾಗಗಳಲ್ಲಿ ಪಕ್ಷದ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕು ಎಂದರು.
ಎಲ್ಲಾ ಮುಖಂಡರು ಸಕ್ರಿಯವಾಗಿ ಕೆಲಸ ಮಾಡಬೇಕು. ಕೇಂದ್ರ ಕಚೇರಿ ನೀಡುವ ಸೂಚನೆಗಳ ಪ್ರಕಾರ ಎಲ್ಲಾ ವಿಭಾಗಗಳ ಅಧ್ಯಕ್ಷರು, ವಿಧಾನಸಭೆ ಕ್ಷೇತ್ರಗಳ ಅಧ್ಯಕ್ಷರುಗಳು ಕ್ರಿಯಾಶೀಲವಾಗಿ ಕೆಲಸ ಮಾಡಬೇಕು ಎಂದು ಸೂಚಿಸಿದರು.
ಬೆಂಗಳೂರು ನಗರದಲ್ಲಿ ಎನ್‌ಡಿಎ ಅಧಿಕಾರಕ್ಕೆ ಬರಬೇಕು. ಈ ಸರ್ಕಾರದ ಬಗ್ಗೆ ಜನರು ರೋಸಿ ಹೋಗಿದ್ದಾರೆ. ತೆರಿಗೆ, ದರ ಏರಿಕೆಯಿಂದ ಬಸವಳಿದಿದ್ದಾರೆ. ಹೀಗಾಗಿ ಜೆಡಿಎಸ್ ಮತ್ತು ಬಿಜೆಪಿ ಜನತೆಯ ಸಹಜ ಆಯ್ಕೆಯಾಗಿದೆ. ಹೀಗಾಗಿ ಎಲ್ಲರೂ ಒಮ್ಮತವಾಗಿ ಪಕ್ಷ ಸಂಘಟಿಸಬೇಕು ಎಂದು ನಿರ್ದೇಶನ ಕೊಟ್ಟರು.
ನೂತನವಾಗಿ ವಿಭಾಗವಾರು ನೇಮಕಗೊಂಡಿರುವ ಪದಾಧಿಕಾರಿಗಳಿಂದ ಪಕ್ಷ ಸಂಘಟನೆ ಬಗ್ಗೆ ಮಾಹಿತಿ ಪಡೆದುಕೊಂಡ ಸಚಿವರು, ಯಾರು ಮೈತ್ರಿ ಬಗ್ಗೆ ಮಾತನಾಡಬೇಡಿ. ಆ ಬಗ್ಗೆ ಪಕ್ಷದ ವರಿಷ್ಠರು ಚರ್ಚಿಸುತ್ತಾರೆ. ನಿಮ್ಮದೇನಿದ್ದರೂ ಸಂಘಟನೆ ಕೆಲಸ ಎಂದು ಸ್ಪಷ್ಟಪಡಿಸಿದರು.
ಪಕ್ಷದ ಮುಖಂಡರು ಕಾರ್ಯಕರ್ತರು ಮತ್ತು ಸ್ಥಳೀಯ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದೆ ಸಾಗಿ, ಚುನಾವಣೆಗೆ ಕೆಲವೇ ದಿನಗಳು ಇದ್ದು, ಎಲ್ಲರೂ ಸಕ್ರಿಯವಾಗಿ ಕೆಲಸ ಮಾಡಬೇಕು ಎಂದು ಕುಮಾರಸ್ವಾಮಿ ಹೇಳಿದರು.
ಸಭೆಯಲ್ಲಿ ಪಕ್ಷದ ಕೋರ್ ಕಮಿಟಿ ಅಧ್ಯಕ್ಷ ಎಂ.ಕೃಷ್ಣಾರೆಡ್ಡಿ, ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ, ಜವರಾಯಿ ಗೌಡ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ರಾಮೇಗೌಡ ಮುಂತಾದವರು ಇದ್ದರು.
ಮೇ ಅಥವ ಜೂನ್ ತಿಂಗಳಿನಲ್ಲಿ ಜಿಬಿಎ ಚುನಾವಣೆ ನಡೆಯಲಿದೆ. ಬಿಬಿಎಂಪಿಯನ್ನು ಜಿಬಿಎಯಾಗಿ ಬದಲಾವಣೆ ಮಾಡಿ, 369 ವಾರ್ಡ್‌ಗಳನ್ನು ಮಾಡಿದ ಬಳಿಕ ಮೊದಲ ಬಾರಿಗೆ ಚುನಾವಣೆ ನಡೆಯುತ್ತಿದೆ. ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಕುರಿತು ಇನ್ನೂ ಸಹ ಅಂತಿಮ ತೀರ್ಮಾನವಾಗಿಲ್ಲ.

