ಬೆಂಗಳೂರು: ಮಹತ್ವದ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಚಿವ ಸಂಪುಟಕ್ಕೆ ಅಚ್ಚರಿ ಹೆಸರು ಸೇರ್ಪಡೆಯಾಗಿದೆ. ಚಿಕ್ಕಮಗಳೂರಿನ ನೂತನ ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಅವರಿಗೆ ಸಚಿವ ಸ್ಥಾನ ಲಭ್ಯವಾಗಿದೆ. ಈ ಬಗ್ಗೆ ಸ್ವತಃ ಗಾಯತ್ರಿ ಶಾಂತೇಗೌಡ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗಾಯತ್ರಿ ಶಾಂತೇಗೌಡ, ನನಗೆ ಸಚಿವ ಸ್ಥಾನ ಸಿಕ್ಕಿರುವುದು ಆಶ್ಚರ್ಯದ ಜೊತೆಗೆ ಸಂತೋಷವೂ ಆಗುತ್ತಿದೆ. ಮೊನ್ನೆಯಷ್ಟೇ ನನಗೆ ಎಂಎಲ್ ಸಿ ಸ್ಥಾನ ಸಿಕ್ಕಿದೆ. ಈಗ ಏಕಾಏಕಿ ಸಚಿವ ಸ್ಥಾನ ಸಿಕ್ಕಿರುವುದು ನಿಜಕ್ಕೂ ನನ್ನ ಅದೃಷ್ಟ. ಸಂತೋಷ ವಾಗುತ್ತಿದೆ ಎಂದು ತಿಳಿಸಿದ್ದಾರೆ.
ನಾನು ಮಂತ್ರಿ ಸ್ಥಾನಕ್ಕಾಗಿ ದೆಹಲಿಗೆ ಹೋಗಿಲ್ಲ, ಯಾವುದೇ ಲಾಭಿ ಮಾಡಿಲ್ಲ. ಆದರೆ ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಅರ್ಯಕರ್ತರಿಗಾಗಿ ಹಗಲಿರುಳು ದುಡುದಿದ್ದೇನೆ. ನನ್ನ ಕ್ಷೇತ್ರದ ಜನರಿಗೆ, ಕಾರ್ಯಕರ್ತರಿಗೆ ಯಾವುದೇ ಸಮಸ್ಯೆಯಾದರೂ ಮಧ್ಯರಾತ್ರಿ ನನಗೆ ಕರೆ ಮಾಡಿದರೂ ನಾನು ಅವರ್ ಜೊತೆ ಹೊಗಿ ನಿಂತಿದ್ದೇನೆ. ನನ್ನ ಕೆಲಸವನ್ನು ಸಿದ್ದರಾಮಯ್ಯನವರು, ಡಿ.ಕೆ.ಶಿವಕುಮಾರ್ ಅವರು ಹಗೂ ಕೆ.ಸಿ ವೇಣು ಗೋಪಾಲ್ ಅವರು ಕೂಡ ನೋಡಿದ್ದಾರೆ. ಬವರೆಲ್ಲರ ಆಶಿರ್ವಾದದಿಂದ ಇಂದು ನನಗೆ ಸಚಿವ ಸ್ಥಾನ ಸಿಕ್ಕಿದೆ ಎಂದರು.
ಇನ್ನು ಗಾಯತ್ರಿ ಶಾಂತೇಗೌಡ ಅವರು 2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಕೇಳಿದ್ದರು. ಆದರೆ ಕಾರಣಾಂತರಗಳಿಂದ ಅವರಿಗೆ ಟಿಕೆಟ್ ಸಿಕ್ಕಿರಲಿಲ್ಲ. ಆ ಸಮಯದಲ್ಲಿ ಸಿದ್ದರಾಮಯ್ಯ ಅವರು, ಮುಂದೆ ಪರಿಷತ್ ಸದಸ್ಯೆಯಾಗು, ನಿನ್ನನ್ನು ಮಂತ್ರಿ ಮಾಡುತ್ತೇನೆ ಎಂದು ಭರವಸೆ ನೀಡಿದ್ದರು. ಇದೀಗ ಗಾಯತ್ರಿ ಅವರನ್ನು ಮಂತ್ರಿ ಮಾಡುವ ಮೂಲಕ ಸಿದ್ದರಾಮಯ್ಯ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ.
ಗಾಯತ್ರಿ ಶಾಂತೇಗೌಡ ಅವರು ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಅಂದು ಮೇಲ್ಮನೆ ಉಪಸಭಾಪತಿ ಎಂ.ಕೆ. ಪ್ರಾಣೇಶ್ ವಿರುದ್ಧ ಕೇವಲ 9 ಮತಗಳ ಅಂತರದಿಂದ ಜಯಗಳಿಸಿದ್ದರು. ಈ ಫಲಿತಾಂಶದ ಬಗ್ಗೆ ಕಾನೂನು ಸಮರ ನಡೆದಿತ್ತು. ನಾಲ್ಕು ದಿನಗಳ ಹಿಂದಷ್ಟೇ ಹೈಕೋರ್ಟ್ ಆದೇಶದಂತೆ ಅವರು ಅಧಿಕೃತವಾಗಿ ಪರಿಷತ್ ಸದಸ್ಯೆಯಾಗಿ ಆಯ್ಕೆಯಾಗಿದ್ದರು. ವಿಶೇಷವೆಂದರೆ, ಇನ್ನು ಪರಿಷತ್ ಸದಸ್ಯೆಯಾಗಿ ಪ್ರಮಾಣವಚನ ಸ್ವೀಕರಿಸುವ ಮೊದಲೇ ಅವರಿಗೆ ಸಚಿವ ಸ್ಥಾನ ಒಲಿದುಬಂದಿದೆ.

