ಆಗಸ್ಟ್ 15 ರಿಂದ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಸರಣಿಯೊಂದಿಗೆ ಭಾರತೀಯ ಕ್ರಿಕೆಟ್ ತಂಡ ಮತ್ತೆ ಟೆಸ್ಟ್ ಅಖಾಡಕ್ಕೆ ಇಳಿಯಲಿದೆ. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ತಲುಪುವ ಭಾರತದ ಕನಸು ಜೀವಂತವಾಗಿರಬೇಕಾದರೆ ಈ ಸರಣಿ ಅತ್ಯಂತ ನಿರ್ಣಾಯಕ ಎನಿಸಿದೆ.
ಸದ್ಯ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿರುವ ಭಾರತ ತಂಡಕ್ಕೆ ಇನ್ನು ಒಟ್ಟು ಒಂಬತ್ತು ಟೆಸ್ಟ್ ಪಂದ್ಯಗಳು ಬಾಕಿ ಇವೆ. ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ಪ್ರವಾಸದಲ್ಲಿ ತಲಾ ಎರಡು ಪಂದ್ಯಗಳು ಹಾಗೂ ತವರು ನೆಲದಲ್ಲಿ ಆಸ್ಟ್ರೇಲಿಯಾ ವಿರುದ್ಧ ಐದು ಪಂದ್ಯಗಳ ಸರಣಿ ನಡೆಯಲಿದೆ. ಫೈನಲ್ ಗೆ ಅರ್ಹತೆ ಪಡೆಯಲು ಭಾರತ ಈ ಒಂಬತ್ತು ಪಂದ್ಯಗಳಲ್ಲಿ ಕನಿಷ್ಠ ಏಳರಿಂದ ಎಂಟು ಪಂದ್ಯಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಪ್ರಸ್ತುತ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಅಂಕಪಟ್ಟಿಯಲ್ಲಿ ಮುಂಚೂಣಿಯಲ್ಲಿವೆ.
ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ಭಾರತ ತಂಡ ನ್ಯೂಜಿಲೆಂಡ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಸೋಲು ಕಂಡಿದ್ದು, ಗಂಭೀರ್ ಅವರ ಕೋಚಿಂಗ್ ವೈಖರಿಯ ಬಗ್ಗೆ ಹಲವು ಪ್ರಶ್ನೆಗಳು ಏಳತೊಡಗಿವೆ. ಈ ಕುರಿತು ಮಾಜಿ ಕ್ರಿಕೆಟಿಗ ದೀಪ್ ದಾಸ್ ಗುಪ್ತಾ ಪ್ರತಿಕ್ರಿಯಿಸಿದ್ದು, ಗಂಭೀರ್ ಅವರಿಗೆ ಇದು ನಿಜಕ್ಕೂ ಸವಾಲಿನ ಸಮಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ತಂಡ ಸಾಲು ಸಾಲು ಹಿನ್ನಡೆ ಅನುಭವಿಸಿದಾಗ ತರಬೇತುದಾರರು ಮತ್ತು ನಾಯಕ ಪ್ರಶ್ನೆಗಳನ್ನು ಎದುರಿಸುವುದು ಸಹಜ. ತವರಿನಲ್ಲಿ ಸೋಲು ಕಂಡಿರುವುದು ಮತ್ತು ವಿದೇಶಿ ನೆಲದಲ್ಲೂ ಹಿನ್ನಡೆ ಅನುಭವಿಸುತ್ತಿರುವುದು ತಂಡದ ಮೇಲೆ ಒತ್ತಡ ಹೆಚ್ಚಿಸಿದೆ. ತಂಡದಲ್ಲಿ ಸದ್ಯ ಬದಲಾವಣೆಯ ಪರ್ವ ನಡೆಯುತ್ತಿದ್ದು, ತಂಡ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದರ ಕುರಿತು ಸ್ಪಷ್ಟತೆಯ ಅಗತ್ಯವಿದೆ ಎಂದು ದೀಪ್ ದಾಸ್ ಗುಪ್ತಾ ಹೇಳಿದ್ದಾರೆ.
ಇನ್ನು ಮುಂಬರುವ ಸರಣಿಗಳ ಬಗ್ಗೆ ಎಚ್ಚರಿಸಿದ ಅವರು, ಪ್ರಸ್ತುತ ಸನ್ನಿವೇಶದಲ್ಲಿ ಯಾವುದೇ ಟೆಸ್ಟ್ ಪಂದ್ಯ ಅಥವಾ ಎದುರಾಳಿ ತಂಡವನ್ನು ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ. ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ಪ್ರವಾಸಗಳು ಯಾವಾಗಲೂ ಕಠಿಣ ಸವಾಲಾಗಿರುತ್ತವೆ. ಕಳೆದ ಮೂರು ಸರಣಿಗಳಲ್ಲಿ ಎರಡರಲ್ಲಿ ಸೋತಿರುವ ಭಾರತಕ್ಕೆ ಫೈನಲ್ ತಲುಪಲು ಬಹುತೇಕ ಪಂದ್ಯಗಳನ್ನು ಗೆಲ್ಲುವುದು ದೊಡ್ಡ ಸವಾಲಾಗಿದೆ ಎಂದು ವಿಶ್ಲೇಷಿಸಿದ್ದಾರೆ.

