ಗ್ರೇಟರ್ ನೋಯ್ಡಾ: 16 ವರ್ಷದ ಬಾಲಕಿಯ ಮೇಲೆ ಸ್ಲೀಪರ್ ಬಸ್‌ನೊಳಗೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಸ್ ಚಾಲಕ ಮತ್ತು ನಿರ್ವಾಹಕನನ್ನು ಪೊಲೀಸರು ಬಂಧಿಸಿದ್ದಾರೆ. ಆಗಸ್ಟ್ 4ರಂದು ಪಾರಿ ಚೌಕ್ ಬಳಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರನ್ನು ಚಾಲಕ ಕುಲದೀಪ್ ಮತ್ತು ನಿರ್ವಾಹಕ ಸಂದೀಪ್ ಎಂದು ಗುರುತಿಸಲಾಗಿದೆ. ಘಟನೆ ನಡೆದ ದಿನವೇ ದೆಹಲಿಯ ತಿಮಾರ್‌ಪುರದ ಪಾರ್ಕಿಂಗ್ ಪ್ರದೇಶದಿಂದ ಇಬ್ಬರನ್ನೂ ಬಂಧಿಸಲಾಗಿದೆ ಎಂದು ದೆಹಲಿ ಉತ್ತರ ಜಿಲ್ಲೆಯ ಉಪ ಪೊಲೀಸ್ ಆಯುಕ್ತೆ ನಿಹಾರಿಕಾ ಭಟ್ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಸಂತ್ರಸ್ತ ಬಾಲಕಿ ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯ ನಿವಾಸಿ. ಓದಿನ ವಿಚಾರವಾಗಿ ತಾಯಿ ಗದರಿಸಿದ್ದರಿಂದ ಕುಟುಂಬಕ್ಕೆ ತಿಳಿಸದೆ ಮನೆಯಿಂದ ಹೊರಟಿದ್ದಳು. ನೋಯ್ಡಾ ಸೆಕ್ಟರ್ 63ರಲ್ಲಿ ವಾಸಿಸುವ ತನ್ನ ಸಂಬಂಧಿಕರ ಮನೆಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಭಾರಿ ಮಳೆಯಲ್ಲಿ ದಾರಿ ತಪ್ಪಿದ ಬಾಲಕಿ
ಭಾರಿ ಮಳೆ ಹಾಗೂ ಕತ್ತಲಿನ ನಡುವೆ ಬಾಲಕಿ ತಪ್ಪಾಗಿ ಪಾರಿ ಚೌಕ್‌ನಲ್ಲಿ ಇಳಿದಿದ್ದಳು. ತಾನು ತಪ್ಪು ಸ್ಥಳದಲ್ಲಿರುವುದನ್ನು ಅರಿತುಕೊಂಡ ಬಳಿಕ, ಅಲ್ಲಿಗೆ ಬಂದ ಸ್ಲೀಪರ್ ಬಸ್ ಅನ್ನು ಅಡ್ಡ ಹಾಕಿ ನಿಲ್ಲಿಸಿದ್ದಳು. ಬಸ್‌ನಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ.
ಬಸ್ ನೋಯ್ಡಾ ಸೆಕ್ಟರ್ 63ಕ್ಕೆ ತೆರಳುತ್ತಿದೆ ಎಂದು ನಿರ್ವಾಹಕ ಹೇಳಿದ್ದರಿಂದ ಬಾಲಕಿ ಬಸ್ ಹತ್ತಿದ್ದಳು. ಈ ಬಸ್ ಸೂರಜ್‌ಪುರದ ವರ್ಕ್‌ಶಾಪ್‌ನಲ್ಲಿ ದುರಸ್ತಿ ಮಾಡಿಸಿಕೊಂಡು ಖಾಲಿಯಾಗಿ ವಾಪಸ್ ಬರುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಬಸ್ ಚಲಿಸಲು ಆರಂಭಿಸಿದ ಕೆಲವೇ ಸಮಯದಲ್ಲಿ ನಿರ್ವಾಹಕ ಅಸಭ್ಯವಾಗಿ ವರ್ತಿಸಲು ಆರಂಭಿಸಿದ್ದಾನೆ ಎಂದು ಬಾಲಕಿ ಆರೋಪಿಸಿದ್ದಾಳೆ. ಬಳಿಕ ಚಾಲಕ ಮತ್ತು ನಿರ್ವಾಹಕ ಇಬ್ಬರೂ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಪ್ರತಿರೋಧಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾಳೆ. ನಂತರ ಆರೋಪಿಗಳು ಬಾಲಕಿಯನ್ನು ದೆಹಲಿಯ ಕಾಶ್ಮೀರಿ ಗೇಟ್ ಸಮೀಪ ಬಿಟ್ಟು ಪರಾರಿಯಾಗಿದ್ದಾರೆ. ಬಳಿಕ ಬಾಲಕಿ ಪೊಲೀಸರನ್ನು ಸಂಪರ್ಕಿಸಿದ್ದಾಳೆ.
ಬಸ್ ವಶಕ್ಕೆ; ವಿಧಿವಿಜ್ಞಾನ ಪರೀಕ್ಷೆ
ಪೊಲೀಸರು ಬಸ್ ಅನ್ನು ವಶಕ್ಕೆ ಪಡೆದು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿದ್ದಾರೆ. ಬಸ್ ಸಂಚರಿಸಿದ ಮಾರ್ಗದ ಸಿಸಿಟಿವಿ ದೃಶ್ಯಗಳನ್ನೂ ಸಂಗ್ರಹಿಸಿದ್ದಾರೆ. ಬಸ್‌ನ ಸ್ಲೀಪರ್ ಬರ್ತ್‌ಗಳಿಗೆ ಪರದೆಗಳಿದ್ದವು. ವಿಧಿವಿಜ್ಞಾನ ತಂಡವು ಬಸ್‌ನಿಂದ ಬಾಲಕಿಯ ಕೂದಲಿನ ಎಳೆಗಳನ್ನು ಪತ್ತೆಹಚ್ಚಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರ, ಅಪಹರಣ ಮತ್ತು ಹಲ್ಲೆ ಸೇರಿದಂತೆ ವಿವಿಧ ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ. ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಬಾಲಕಿಯನ್ನು ಮಕ್ಕಳ ಕಲ್ಯಾಣ ಸಮಿತಿಯ ಮೂಲಕ ಆಕೆಯ ಪೋಷಕರಿಗೆ ಹಸ್ತಾಂತರಿಸಲಾಗಿದೆ. 2012ರಲ್ಲಿ ದೆಹಲಿಯಲ್ಲಿ ಬಸ್‌ನೊಳಗೆ 23 ವರ್ಷದ ಯುವತಿ ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಇದರ ಬಳಿಕ ಮಹಿಳೆಯರ ವಿರುದ್ಧದ ಅಪರಾಧಗಳನ್ನು ತಡೆಯಲು ಕೇಂದ್ರ ಸರ್ಕಾರ ಕಠಿಣ ಕಾನೂನುಗಳನ್ನು ಜಾರಿಗೆ ತಂದಿತ್ತು.

