ತೆಲಂಗಾಣ : ವಿನಾಯಕ ಮೂರ್ತಿ ಖರೀದಿಸಲು ತೆರಳಿದ್ದ ವ್ಯಕ್ತಿಗಳು ಹಾಗೂ ಮೂರ್ತಿ ಮಾರಾಟಗಾರರ ನಡುವೆ ನಡೆದ ಘರ್ಷಣೆಯಲ್ಲಿ ಓರ್ವ ಯುವಕ ಮೃತಪಟ್ಟಿದ್ದು, ಮತ್ತೋರ್ವ ಯುವಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಪೋಚಾರಂ ಐಟಿ ಕಾರಿಡಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಸ್ಥಳೀಯರ ಪ್ರಕಾರ, ಚೌದರಿಗುಡ ಪ್ರದೇಶದ ಕೆಲ ಯುವಕರು ಭಾನುವಾರ ಮಧ್ಯರಾತ್ರಿ ವಿನಾಯಕ ಮೂರ್ತಿ ಖರೀದಿಸಲು ಜೋಡಿಮೆಟ್ಲ ಸಮೀಪದಲ್ಲಿರುವ ವಿನಾಯಕ ಮೂರ್ತಿಗಳ ಶೆಡ್‌ಗೆ ತೆರಳಿದ್ದರು. ಈ ವೇಳೆ ಮೂರ್ತಿಗಳ ಬೆಲೆ ಹಾಗೂ ಖರೀದಿ ವಿಚಾರದಲ್ಲಿ ಮಾರಾಟಗಾರರೊಂದಿಗೆ ಮಾತಿನ ಚಕಮಕಿ ನಡೆದಿದೆ. ಬಳಿಕ ಅದು ಎರಡೂ ಗುಂಪುಗಳ ನಡುವೆ ಘರ್ಷಣೆಗೆ ತಿರುಗಿದೆ.
ಘರ್ಷಣೆಯಲ್ಲಿ ಮೂರ್ತಿಗಳನ್ನು ಮಾರಾಟ ಮಾಡುತ್ತಿದ್ದ ರಾಜಸ್ಥಾನ ಮೂಲದ ಚೋಗಾರಾಮ್ ಎಂಬ ವ್ಯಕ್ತಿಯ ತಲೆಗೆ ಗಂಭೀರ ಗಾಯಗಳಾಗಿವೆ. ಇದರಿಂದ ಆಕ್ರೋಶಗೊಂಡ ಚೋಗಾರಾಮ್ ಕುಟುಂಬಸ್ಥರು ಹಾಗೂ ಇತರ ಕೆಲವರು ಸೇರಿಕೊಂಡು ಪ್ರತಿದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಈ ದಾಳಿಯಲ್ಲಿ ಚೌದರಿಗುಡ ನಿವಾಸಿ ಪಸುಲಾದಿ ಕಿರಣ್ (34) ಗಂಭೀರವಾಗಿ ಗಾಯಗೊಂಡು ಪ್ರಜ್ಞಾಹೀನರಾಗಿದ್ದರು. ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕಿರಣ್ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಕಿರಣ್ ಸಾವಿನ ಹಿನ್ನೆಲೆಯಲ್ಲಿ ದಾಳಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಚೌದರಿಗುಡ ನಿವಾಸಿಗಳು ಮಧ್ಯರಾತ್ರಿ ವರಂಗಲ್–ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದರು. ಇದರಿಂದ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು.
ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ದಾಳಿಯಲ್ಲಿ ಭಾಗಿಯಾಗಿದ್ದವರನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದು, ಘಟನೆ ಕುರಿತು ತನಿಖೆ ಮುಂದುವರಿಸಿದ್ದಾರೆ.
ಶಾಂತಿ, ಸೌಹಾರ್ದತೆಯಿಂದ ಗೌರಿ-ಗಣೇಶ ಹಬ್ಬ ಆಚರಿಸಿ: ಎಸ್‍ಪಿ ಗುಂಜನ್ ಆರ್ಯ
ಧಾರವಾಡ : ಗೌರಿ-ಗಣೇಶ ಹಬ್ಬವನ್ನು ಜಿಲ್ಲೆಯಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಸಾಮರಸ್ಯದಿಂದ ಆಚರಿಸುವಂತೆ ಧಾರವಾಡ ಜಿಲ್ಲಾ ಪೊಲೀಸ್ ಅಧೀಕ್ಷಕ ಗುಂಜನ್ ಆರ್ಯ ಸೂಚಿಸಿದರು.
ಅವರು ಶ್ರೀ ದುರ್ಗಾದೇವಿ ದೇವಸ್ಥಾನದ ಸಭಾಭವನದಲಿ ಗೌರಿ-ಗಣೇಶ ಹಬ್ಬದ ಜಿಲ್ಲಾ ಮಟ್ಟದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗಣೇಶೋತ್ಸವ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಎಲ್ಲರೂ ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಬೇಕು. ಹಬ್ಬವನ್ನು ಶಾಂತಿಯುತವಾಗಿ ಹಾಗೂ ಸೌಹಾರ್ದಯುತ ವಾತಾವರಣದಲ್ಲಿ ಆಚರಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಡಿ.ಜೆ. ಬಳಕೆಯಿಂದ ಉಂಟಾಗಬಹುದಾದ ಶಬ್ದ ಮಾಲಿನ್ಯ ಹಾಗೂ ಸಮಾಜದ ಮೇಲೆ ಬೀರುವ ದುಷ್ಪರಿಣಾಮಗಳ ಕುರಿತು ಅವರು ಸಭೆಯಲ್ಲಿ ಜಾಗೃತಿ ಮೂಡಿಸಿದರು. ಡಿ.ಜೆ. ಬದಲಾಗಿ ಸಾಂಪ್ರದಾಯಿಕ ವಾದ್ಯವೃಂದಗಳನ್ನು ಬಳಸಿಕೊಂಡು ಗಣೇಶೋತ್ಸವ ಆಚರಿಸುವಂತೆ ಅವರು ಸಲಹೆ ನೀಡಿದರು.
ಸಭೆಯಲ್ಲಿ ಗ್ರಾಮೀಣ ಉಪವಿಭಾಗದ ಡಿ.ಎಸ್.ಪಿ ವಿನೋಧ ಮುಕ್ತೆದಾರ ಅವರು ಎಲ್ಲರನ್ನು ಸ್ವಾಗತಿಸಿದರು. ಸಭೆಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳ ಎಲ್ಲ ಸಮುದಾಯ ಮುಖಂಡರು, ಫ್ಲೆಕ್ಸ್ ಹಾಗೂ ಬ್ಯಾನರ್ ಮುದ್ರಣ ಅಂಗಡಿಗಳ ಮಾಲೀಕರು, ಡಿ.ಜೆ. ಸಿಸ್ಟಮ್ ಮಾಲೀಕರು, ಆರೋಗ್ಯ, ಲೋಕೋಪಯೋಗಿ, ಹೆಸ್ಕಾಂ, ಪರಿಸರ, ಅಬಕಾರಿ ಹಾಗೂ ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ಮತ್ತು ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.

