ಮೈಸೂರು: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ತಮ್ಮದೇ ಪಕ್ಷದ ಹಿರಿಯ ಶಾಸಕ ಜಿ.ಟಿ.ದೇವೇಗೌಡ ವಿರುದ್ಧ ವಾಗ್ದಾಳಿ ನಡೆಸಿರುವ ಬೆನ್ನಲ್ಲೇ ತಮ್ಮ ಕುರಿತು ಹೆಚ್.ಡಿ. ಕುಮಾರಸ್ವಾಮಿ ಆಡಿರುವ ಮಾತುಗಳಿಗೆ ಜಿ.ಟಿ. ದೇವೇಗೌಡ ಕೌಂಟರ್ ಕೊಟ್ಟಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಜಿ.ಟಿ.ದೇವೇಗೌಡ, ನನ್ನ ಬೆಂಬಲದಿಂದಲೇ ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿದ್ದು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅಭಿವೃದ್ಧಿ ಬಿಟ್ಟರೆ ಬೇರೆ ರಾಜಕಾರಣ ನನಗೆ ಗೊತ್ತಿಲ್ಲ. ಕುಮಾರ ಪರ್ವ ಮಾಡಿದ್ದು ಚಾಮುಂಡೇಶ್ವರಿ ಜನ ಮಾತ್ರ. ಬೇರೆ ಯಾವ ಕ್ಷೇತ್ರದಲ್ಲೂ ಈ ರೀತಿಯ ಸಮಾವೇಶ ಮಾಡಿಲ್ಲ ಎಂದರು.
ನನಗೆ ಫೋನ್ , ಇನ್ಸ್ಟಾಗ್ರಾಂ ನೋಡಲು ಬರಲ್ಲ. ಎಸ್ಎಂಎಸ್ ನೋಡಲೂ ಬರಲ್ಲ. ಪಿಎಗಳು ಫೋನ್ ಮಾಡಿಕೊಡ್ತಾರೆ. ನಾನು ಟಿವಿ ನೋಡಿಲ್ಲ, ಹೀಗಾಗಿ ಅವರ ಹೇಳಿಕೆಯನ್ನ ಗಮನಿಸಿಲ್ಲ ಎಂದು ಜಿಟಿಡಿ ಹೇಳಿದ್ದಾರೆ.
ಈಗಾಗಲೇ ಜಿ.ಟಿ.ದೇವೇಗೌಡ ಒಂದು ಕಾಲಲ್ಲ, ಎರಡೂ ಕಾಲನ್ನು ಹೊರಗಿಟ್ಟಿದ್ದಾರೆ ಎಂಬ ಹೆಚ್.ಡಿ.ಕುಮರಸ್ವಾಮಿ ಹೇಳಿಕೆ ವಿಚಾರ ಹಾಗೂ ಕಾಂಗ್ರೆಸ್ ಸೇರಲಿದ್ದೀರಾ? ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಜಿ.ಟಿ.ದೇವೇಗೌಡ ಒಂದೂವರೆ ವರ್ಷದಿಂದ ಮಾತನಾಡಿಯೇ ಇಲ್ಲ ಎಂದು ಕುಮಾರಸ್ವಾಮಿಯವರೇ ಹೇಳಿದ್ದಾರೆ. ಹೀಗಿರುವಾಗ ನಾನು ಹೇಳುವುದೇನಿದೆ? ಎಂದರು. ಅಂದು ಸಿದ್ದರಾಮಯ್ಯ ಯಾಕೆ ರಾಜೀನಾಮೆ ಕೊಡಬೇಕು? ಎಂದು ಕೇಳಿದ್ದಕ್ಕೆ ಅವರು ಕಾಂಗ್ರೆಸ್ ಪಕ್ಷಕ್ಕೆ ಹೊರಟು ಹೋದರು ಎಂದು ಮಾತನಾಡಿಕೊಂಡರು. ಆದರೆ ನಾನು ಹೋಗಿದ್ದೇನಾ? ಈಗ ಡಿ.ಕೆ.ಶಿವಕುಮಾರ್ ಇದ್ದಾರೆ. ಆದರೂ ನಾನು ಹೋಗಿದ್ದೇನಾ? ಎಂದು ಪ್ರಶ್ನಿಸಿದ್ದಾರೆ.
ಡಿ.ಕೆ.ಶಿವಕುಮಾರ್ ಸಿಎಂ ಆದಮೇಲೆ ಅವತ್ತು ಒಂದುದಿನ ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಮನವಿ ಕೊಟ್ಟು ಬಂದೆ. ಅಲ್ಲಿ ನೂರು, ನೂರೈವತ್ತು ಜನರಿದ್ದರು. ನಾನು ಪ್ರತ್ಯೇಕವಾಗಿ ಸಿಎಂ ಭೇಟಿ ಮಾಡುವುದಾಗಲಿ, ಮನವಿ ಸಲ್ಲಿಸುವುದಾಗಿ ಮಾಡಿಲ್ಲ. ಕಾರಣ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಎಲ್ಲರೂ ಸದ್ಯ ಬ್ಯುಸಿ ಇದ್ದಾರೆ. ಮಂತ್ರಿಮಂಡಲ ರಚನೆ ಮೊದಲಾದ ವಿಚಾರದಲ್ಲಿ ಬ್ಯುಸಿ ಇರುವುದರಿಂದ ಅದೆಲ್ಲ ಮುಗಿದ ಮೇಲೆ ಸಿಎಂ ಭೇಟಿಯಾಗಿ ಕ್ಷೇತ್ರದ ಅಭಿವೃದ್ಧಿಗಾಗಿ ಮತ್ತೊಮ್ಮೆ ಮನವಿ ಮಾಡುತ್ತೇನೆ ಎಂದರು.
ಮುಂದೆ ಬೆಂಬಲಿಗರು ಏನು ಹೇಳುತ್ತಾರೆ ನೋಡೋಣ ಎಂದರು. ಜೆಡಿಎಸ್ ಪಕ್ಷ ಉಳಿಸಿಕೊಳ್ಳಬೇಕು ಎಂದರೆ ಪಕ್ಷ ಸಂಘಟನೆ ಮಾಡಲೇಬೇಕು. ಅಂದು ದೇವೇಗೌಡತು ಕಟ್ತಿದ ಪಕ್ಷವನ್ನು ಇಂದು ಕುಮಾರಸ್ವಾಮಿ ಉಳಿಸಿಕೊಂಡು ಹೋಗಬೇಕಿದೆ. ಆ ನಿತ್ಟಿನಲ್ಲಿ ಕೆಲಸ ಮಾಡುವುದು ಅವರಿಗೆ ಗೊತ್ತು ಎಂದರು.
ಕುಟುಂಬದಲ್ಲಿ ಅಸಮಾಧಾನ, ಭಿನ್ನಾಭಿಪ್ರಾಯ ಎಂಬುದು ಸಹಜ. ಯಾವ ಕುಟುಂಬದಲ್ಲಿ ಅಸಮಾಧಾನ ಇರುವುದಿಲ್ಲ. ಹಾಗಂತ ಅವರು ಒಂದಾಗಲ್ಲ ಎಂದುಕೊಳ್ಳಲು ಸಾಧ್ಯವೇ? ಒಂದಾಗಲ್ಲ ಎಂದುಕೊಂಡರೆ ಅದು ಮೂರ್ಖತನ ಎಂದು ಹೇಳಿದರು.

