ಇಂದು ( ಜೂನ್ 3 ) ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸುತ್ತಿದ್ದು, ಅವರ ಜತೆ ಉಪ ಮುಖ್ಯಮಂತ್ರಿಯಾಗಿ ಜಿ ಪರಮೇಶ್ವರ್ ಹಾಗೂ ಮಂತ್ರಿಗಳಾಗಿ ಒಟ್ಟು 12 ಮಂದಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ.
ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಡಿಕೆ ಶಿವಕುಮಾರ್ ಮುಂದಿ ಮುಖ್ಯಮಂತ್ರಿ ಎಂಬುದು ಪಕ್ಕಾ ಆದಾಗಿನಿಂದ ದೆಹಲಿಗೆ ವರ್ಗಾವಣೆಯಾಗಿದ್ದ ಕರ್ನಾಟಕ ಮಂತ್ರಿಮಂಡಲ ರಚನೆಯ ಚರ್ಚೆಗೆ ಹೈಕಮಾಂಡ್ ಅಂತ್ಯ ಹಾಡಿ ಇವರಿಗೆ ಈ ಸ್ಥಾನ ಎಂದು ಇತ್ಯರ್ಥ ಮಾಡಿ ಕಳುಹಿಸಿತು.
ಅದರಂತೆ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾದರೆ, ಈ ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ಗೃಹಮಂತ್ರಿಯಾಗಿದ್ದ ಜಿ ಪರಮೇಶ್ವರ್ ಅವರಿಗೆ ಹೈಕಮಾಂಡ್ ಉಪ ಮುಖ್ಯಮಂತ್ರಿ ಜವಾಬ್ದಾರಿಯನ್ನು ಹೊರಿಸಿದೆ.
ಇನ್ನು ಸಿದ್ದರಾಮಯ್ಯ ರಾಜೀನಾಮೆ ನೀಡಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತ ಚರ್ಚೆಗಳು ನಡೆದಾಗ ಕೇಳಿಬಂದ ಕೆಲ ಹೆಸರುಗಳ ಪೈಕಿ ಪರಮೇಶ್ವರ್ ಅವರದ್ದೂ ಸಹ ಒಂದು. ಪರಮೇಶ್ವರ್ ಸಹ ಸಿಎಂ ರೇಸ್‌ನಲ್ಲಿ ಇದ್ದಾರೆ ಎನ್ನಲಾಗಿತ್ತು. ಆದರೆ ಕೊನೆ ಹಂತದಲ್ಲಿ ಸಿಎಂ ಕುರ್ಚಿ ಡಿಕೆ ಪಾಲಾಗಿದ್ದು, ಈ ಕುರಿತು ಮಾಧ್ಯಮಗಳ ಕೊನೆ ಕ್ಷಣದಲ್ಲಿ ಸಿಎಂ ಆಗುವ ಅವಕಾಶ ಕೈತಪ್ಪಿತೇ ಎಂದು ಸ್ವತಃ ಪರಮೇಶ್ವರ್ ಅವರನ್ನೇ ನೇರವಾಗಿ ಕೇಳಿದಾಗ ಅವರು ‘ಇದೆಲ್ಲ ಪಕ್ಷದ ತೀರ್ಮಾನ. ನಾನು ಶುರುವಿನಿಂದಲೇ ಎಲ್ಲವೂ ಹೈಕಮಾಂಡ್ ತೀರ್ಮಾನ, ಅವರ ತೀರ್ಮಾನಕ್ಕೆ ನಾವೆಲ್ಲರೂ ಬದ್ಧ ಎಂದು ಹೇಳಿಕೊಂಡೇ ಬರುತ್ತಿದ್ದೆ. ಮುಖ್ಯಮಂತ್ರಿ ಆಗಬೇಕು ಅಂತ ನನಗೂ ಸಹ ಆಸೆ ಇತ್ತು. ಆದರೆ ಹೈಕಮಾಂಡ್ ಏನು ತೀರ್ಮಾನ ಮಾಡುತ್ತೋ ಅದನ್ನು ನಾವು ಪಕ್ಷದ ಶಿಸ್ತಿನ ಸಿಪಾಯಿಗಳಾಗಿ ನಾವೆಲ್ಲ ಒಪ್ಪಿಕೊಳ್ಳಬೇಕಾಗುತ್ತದೆ. ಅವರು ನನ್ನನ್ನು ಉಪ ಮುಖ್ಯಮಂತ್ರಿ ಮಾಡಿದ್ದನ್ನು ನಾನು ಒಪ್ಪಿದ್ದೇನೆ’ ಎಂದರು.
ಈ ಸಮಯದಲ್ಲಿ ಮುಖ್ಯಮಂತ್ರಿಯಾಗುವ ಆಸೆಯಲ್ಲಿದ್ದ ನಿಮಗೆ ಉಪ ಮುಖ್ಯಮಂತ್ರಿಯಾಗಿದ್ದು ತೃಪ್ತಿ ಇದೆಯೇ ಎಂಬ ಪ್ರಶ್ನೆ ಎದುರಾಯಿತು. ಇದಕ್ಕೆ ಉತ್ತರಿಸಿದ ಪರಮೇಶ್ವರ್ ‘ರಾಜ್ಯದ ಜನರ ಸೇವೆ ಮಾಡಲು ಯಾವ ಸ್ಥಾನವಾದರೂ ಒಳ್ಳೆಯೇ ಅಲ್ಲವೇ? ಅದೊಂದು ಅವಕಾಶ. ಹಾಗಾಗಿ ಉಪ ಮುಖ್ಯಮಂತ್ರಿ ಸ್ಥಾನದಲ್ಲಿದ್ದುಕೊಂಡೇ ಕೆಲಸ ಮಾಡಬಹುದಲ್ವಾ?’ ಎಂದರು.

