ಚಿಕ್ಕಬಳ್ಳಾಪುರ: ಫ್ರೂಟ್ ಜಾಮ್ ಬಾಟಲ್ ಖರೀದಿಸುವ ಮುನ್ನ ಗ್ರಾಹಕರು ಎಚ್ಚರಿಕೆ ವಹಿಸುವುದು ಅಗತ್ಯ. ಗ್ರಾಹಕರೊಬ್ಬರು ಆಗತಾನೆ ಅಂಗಡಿಯಲ್ಲಿ ಖರೀದಿಸಿದ್ದ ಫ್ರೂಟ್ ಜಾಮ್ ನಲ್ಲಿ ಹುಳಗಳು ಪತ್ತೆಯಾಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರದ ನಂದಿ ಗ್ರಾಮದ ಶಾಂತಕುಮಾರ್ ಎಂಬುವವರು ಬೇಕರಿಯೊಂದರಲ್ಲಿ ಫ್ರೂಟ್ ಜಾಮ್ ಬಾಟಲ್ ಖರೀದಿಸಿದ್ದರು. ಮನೆಗೆ ಬಂದು ಫ್ರೂಟ್ ಜಾಮ್ ಮುಚ್ಚಳು ತೆಗೆದರೆ ಜಾಮ್ ನಲ್ಲಿ ಹುಳಗಳು ಪತ್ತೆಯಾಗಿವೆ.
ಬಾಟಲ್ ಮೇಲೆ ನಮೂದಿಸಿರುವ ದಿನಾಂಕದ ಪ್ರಕಾರ ಇನ್ನೂ ಅವಧಿ ಮೀರಿರಲಿಲ್ಲ. ಆದಾಗ್ಯೂ ಫ್ರೂಟ್ ಜಾಮ್ ನಲ್ಲಿ ಹುಳಗಳು ಪತ್ತೆಯಾಗಿದ್ದು, ಕುಟುಂಬದವರು ಶಾಕ್ ಆಗಿದ್ದಾರೆ. ಬಾಟಲ್ ಮೇಲೆ ಜಾಮ್ ತಯಾರಿಸಿದ ದಿನಾಂಕ ಸೆಪ್ಟೆಂಬರ್ 2025 ಹಾಗೂ ಅವಧಿ ಮುಗಿಯುವ ದಿನಾಂಕ ಅಕ್ಟೋಬರ್ 2026 ಎಂದಿದೆ. ಆದರೆ ಈಗಲೇ ಜಾಮ್ ನಲ್ಲಿ ಹುಳಗಳು ಕಂಡು ಬಂದಿವೆ. ಈ ಬಗ್ಗೆ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಗ್ರಾಹಕ ದೂರು ನೀಡಿದ್ದಾರೆ.

