ತುಮಕೂರು: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ವಿ.ಎನ್. ರೆಡ್ಡಿ(103) ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ರೆಡ್ಡಿ ವೆಂಕಟಾಪುರ ಗ್ರಾಮದ ಮನೆಯಲ್ಲಿ ನಿಧನರಾಗಿದ್ದಾರೆ.
ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ವಿ.ಎನ್. ರೆಡ್ಡಿ ವಿಧಿವಶರಾಗಿದ್ದಾರೆ. ಉಪ್ಪಿನ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಅವರು ಭಾಗವಹಿಸಿದ್ದರು. ಅಲ್ಲದೇ ಮಹಾತ್ಮ ಗಾಂಧೀಜಿಯವರ ಸೇವೆಯನ್ನು ಕೂಡ ಮಾಡಿದ್ದರು. ಕರ್ನಾಟಕಕ್ಕೆ ಭೇಟಿ ನೀಡಿದ್ದ ಮಹಾತ್ಮ ಗಾಂಧಿ ನಂದಿ ಬೆಟ್ಟದಲ್ಲಿ ವಿಶ್ರಾಂತಿಯಲ್ಲಿದ್ದಾಗ ಅವರ ಸೇವೆ ಮಾಡಿದ್ದರು.
ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ವಿವಿಧೆಡೆ ಚಳವಳಿಗಳಲ್ಲಿ ಭಾಗವಹಿಸಿದ್ದ ವಿ.ಎನ್. ರೆಡ್ಡಿ ಜೈಲುವಾಸ ಅನುಭವಿಸಿದ್ದರು. ವಿಧುರಾಶ್ವತ್ಥದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದಲ್ಲಿ ಕಲ್ಲೂರು ಸುಬ್ಬರಾವ್, ತರಿಮೆಲ ನಾಗಿರೆಡ್ಡಿ, ಅವರೊಂದಿಗೆ ಭಾಗವಹಿಸಿದ್ದರು.
ವಿ.ಎನ್. ರೆಡ್ಡಿ ಅವರ ನಿಧನಕ್ಕೆ ಮಾಜಿ ಸಚಿವ ವೆಂಕಟರಮಣಪ್ಪ, ಶಾಸಕ ಹೆಚ್.ವಿ. ವೆಂಕಟೇಶ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಸರ್ಕಾರಿ ಗೌರವದೊಂದಿಗೆ ವಿ.ಎನ್. ರೆಡ್ಡಿ ಅಂತ್ಯಕ್ರಿಯೆಗೆ ಸರ್ಕಾರ ಆದೇಶಿಸಿದೆ.
