ಫ್ರಾನ್ಸ್ ನ ಹೂಡಿಕೆದಾರರನ್ನು ಸೆಳೆಯಲು ಭಾರತದ ರಾಯಭಾರಿ ಅವರೊಂದಿಗೆ ವಾಣಿಜ್ಯ ಮತ್ತು ಕೈಗಾರಿಕೆಗಳು, ಮೂಲಸೌಕರ್ಯ ಸರ್ಕಾರ ಸಚಿವ ಎಂ.ಬಿ. ಪಾಟೀಲ್ ಮಹತ್ವದ ಮಾತುಕತೆ ನಡೆಸಿದ್ದಾರೆ.
ಫ್ರಾನ್ಸ್ ಮತ್ತು ಮೊನಾಕೊಗೆ ಭಾರತದ ರಾಯಭಾರಿ, ಗೌರವಾನ್ವಿತ ಶ್ರೀ ಸಂಜೀವ್ ಸಿಂಗ್ಲಾ ಅವರೊಂದಿಗೆ ಮಹತ್ವದ ಸಭೆ ನಡೆಸಿ, ಫ್ರಾನ್ಸ್‌ನ ಪ್ರಮುಖ ಕಂಪನಿಗಳಿಂದ ಕರ್ನಾಟಕಕ್ಕೆ ಹೂಡಿಕೆ ಆಕರ್ಷಿಸುವ ಕುರಿತು ಚರ್ಚಿಸಲಾಯಿತು.
ಕರ್ನಾಟಕದ ಕೈಗಾರಿಕಾ ಬೆಳವಣಿಗೆ, ಅಭಿವೃದ್ಧಿಯ ವೇಗ ಹಾಗೂ ಉತ್ತಮ ಗುಣಮಟ್ಟದ ಹೂಡಿಕೆಗಳನ್ನು ಆಕರ್ಷಿಸುವ ರಾಜ್ಯದ ಕಾರ್ಯತಂತ್ರದ ಕುರಿತು ಅಭಿಪ್ರಾಯಗಳನ್ನು ಹಂಚಿಕೊಳ್ಳಲಾಯಿತು.
ಕರ್ನಾಟಕದಲ್ಲಿ ಹೂಡಿಕೆ ಅಥವಾ ವಿಸ್ತರಣೆಗೆ ಆಸಕ್ತಿ ಹೊಂದಿರುವ ಪ್ರಮುಖ ಫ್ರೆಂಚ್ ಕಂಪನಿಗಳು ಹಾಗೂ ಹೂಡಿಕೆ ಅವಕಾಶಗಳ ಕುರಿತು ರಾಯಭಾರಿ ಅವರು ನಿರ್ದಿಷ್ಟ ಮಾಹಿತಿಯನ್ನು ಹಂಚಿಕೊಂಡರು.
ಕರ್ನಾಟಕದ ಪೂರ್ವಭಾವಿ ಮತ್ತು ವೃತ್ತಿಪರ ಹೂಡಿಕೆ ಆಕರ್ಷಣಾ ಕಾರ್ಯವೈಖರಿಯನ್ನು ರಾಯಭಾರಿ ಅವರು ಮೆಚ್ಚಿಕೊಂಡರು. ಭಾರತ–ಫ್ರಾನ್ಸ್ ಕೈಗಾರಿಕಾ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಿ, ಫ್ರಾನ್ಸ್ ನ ಜಾಗತಿಕ ಉದ್ಯಮಗಳನ್ನು ಕರ್ನಾಟಕದತ್ತ ಸೆಳೆಯುವ ನಮ್ಮ ಪ್ರಯತ್ನ ನಿರಂತರವಾಗಿರುತ್ತದೆ ಎಂದು ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ಡೇರಿ ಹಾಗೂ ಪೌಷ್ಟಿಕಾಂಶ ಕ್ಷೇತ್ರದಲ್ಲಿ ಹೂಡಿಕೆಗೆ ‘Danone’ ಉತ್ಸುಕ
ಫ್ರಾನ್ಸ್ ನ ಜಾಗತಿಕ ಆಹಾರ ಮತ್ತು ಪೌಷ್ಟಿಕಾಂಶ ಕ್ಷೇತ್ರದ ಪ್ರಮುಖ ಸಂಸ್ಥೆಯಾದ Danone ನ ಪ್ರಮುಖರೊಂದಿಗೆ ಮಹತ್ವದ ಸಭೆ ನಡೆಸಿ, ಕರ್ನಾಟಕದಲ್ಲಿ ಹೂಡಿಕೆ ಹಾಗೂ ಉದ್ಯಮ ವಿಸ್ತರಣೆಯ ಅವಕಾಶಗಳ ಕುರಿತು ಸುದೀರ್ಘವಾಗಿ ಚರ್ಚಿಸಲಾಗಿದೆ.
ಡೇರಿ, ಸಸ್ಯಾಧಾರಿತ ಉತ್ಪನ್ನಗಳು ಹಾಗೂ ವಿಶೇಷ ಪೌಷ್ಟಿಕಾಂಶ ಕ್ಷೇತ್ರದಲ್ಲಿ 120ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ Danone ಸಂಸ್ಥೆಯನ್ನು, ಭಾರತದಲ್ಲೇ ತನ್ನ ಮುಂದಿನ ಹಂತದ ಬೆಳವಣಿಗೆಗೆ ಕರ್ನಾಟಕವನ್ನು ದಕ್ಷಿಣ ಭಾರತದ ಪ್ರಮುಖ ಹಬ್ ಆಗಿ ಪರಿಗಣಿಸುವಂತೆ ಆಹ್ವಾನಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯದ ಬಲಿಷ್ಠ ಡೇರಿ ಕ್ಷೇತ್ರ, ಆಹಾರ ಸಂಸ್ಕರಣಾ ಸಾಮರ್ಥ್ಯ, ವಿಸ್ತಾರವಾದ ಮಾರುಕಟ್ಟೆ ಹಾಗೂ ರೈತರ ಬೃಹತ್ ಜಾಲದ ಕುರಿತು ಸಂಸ್ಥೆಗೆ ವಿವರಣೆ ನೀಡಲಾಯಿತು.
ಕರ್ನಾಟಕದಲ್ಲಿನ ಈ ಅವಕಾಶಗಳ ಕುರಿತು Danone ಸಂಸ್ಥೆ ತೀವ್ರ ಆಸಕ್ತಿ ವ್ಯಕ್ತಪಡಿಸಿದ್ದು, ಮುಂದಿನ ಹಂತದ ಮಾತುಕತೆ ಹಾಗೂ ಹೂಡಿಕೆಯ ಸಾಧ್ಯತೆಗಳನ್ನು ಅನ್ವೇಷಿಸಲು ಸಕಾರಾತ್ಮಕವಾಗಿ ಸ್ಪಂದಿಸಿದೆ. ಜಾಗತಿಕ ಹೂಡಿಕೆಗಳನ್ನು ಕರ್ನಾಟಕದ ರೈತರು, ಉದ್ಯಮಗಳು ಮತ್ತು ಬಲಿಷ್ಠ ಡೇರಿ Ecosystem ಬೆಸೆಯುವ ನಮ್ಮ ಪ್ರಯತ್ನ ನಿರಂತರವಾಗಿ ಮುಂದುವರಿಯಲಿದೆ ಎಂದು ಎಂ.ಬಿ. ಪಾಟೀಲ್ ಹೇಳಿದ್ದಾರೆ.
ರಾಜ್ಯದಲ್ಲಿ ಹೂಡಿಕೆಗೆ ಆಸಕ್ತಿ ವ್ಯಕ್ತಪಡಿಸಿದ ಫ್ರಾನ್ಸ್ ನ Savencia
ಚೀಸ್, ಡೇರಿ ಉತ್ಪನ್ನಗಳು ಹಾಗೂ ಪೌಷ್ಟಿಕಾಂಶದ ಉತ್ಪನ್ನಗಳಲ್ಲಿ ಪರಿಣತಿ ಹೊಂದಿರುವ Savencia, ತನ್ನ ಉತ್ಪನ್ನಗಳನ್ನು 120ಕ್ಕೂ ಹೆಚ್ಚು ದೇಶಗಳಲ್ಲಿ ಮಾರಾಟ ಮಾಡುತ್ತಿದ್ದು, ಜಾಗತಿಕವಾಗಿ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಈ ದಿನ ಸಂಸ್ಥೆಯ ಉನ್ನತಮಟ್ಟದ ಅಧಿಕಾರಿ Jean-Baptiste van Elslande ಅವರೊಂದಿಗೆ ಮಹತ್ವದ ಸಭೆ ನಡೆಸಿ, ಕರ್ನಾಟಕದಲ್ಲಿ ಹೂಡಿಕೆ ಹಾಗೂ ಉತ್ಪಾದನಾ ವಿಸ್ತರಣೆಯ ಸಾಧ್ಯತೆಗಳ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು.
ಕರ್ನಾಟಕದ ಬಲಿಷ್ಠ ಡೇರಿ ಪರಿಸರ ವ್ಯವಸ್ಥೆ, ಹೆಚ್ಚುತ್ತಿರುವ ಬೇಡಿಕೆ, ಗುಣಮಟ್ಟದ ಹಾಲು ಉತ್ಪಾದನೆ ಹಾಗೂ ಬಲವಾದ ರೈತ ಜಾಲವನ್ನು ಗಮನದಲ್ಲಿಟ್ಟುಕೊಂಡು, ದಕ್ಷಿಣ ಭಾರತದ ಬೆಳೆಯುತ್ತಿರುವ ಮಾರುಕಟ್ಟೆಯನ್ನು ಪೂರೈಸಲು ಕರ್ನಾಟಕದಲ್ಲೇ South India Manufacturing Hub ಸ್ಥಾಪಿಸುವಂತೆ Savenciaಗೆ ಆಹ್ವಾನ ನೀಡಲಾಯಿತು.
ರಾಜ್ಯದ ಡೇರಿ ಕ್ಷೇತ್ರದ ಸಾಮರ್ಥ್ಯವನ್ನು ವಿವರಿಸುವ ಸಂದರ್ಭದಲ್ಲಿ ನಂದಿನಿ ಮತ್ತು ಅಕ್ಷಯಕಲ್ಪದಂತಹ ಪ್ರಮುಖ ಸಂಸ್ಥೆಗಳ ಉಪಸ್ಥಿತಿಯನ್ನೂ ಉಲ್ಲೇಖಿಸಲಾಯಿತು. Savenciaಗೆ ಕರ್ನಾಟಕದ ಡೇರಿ ಪರಿಸರ ವ್ಯವಸ್ಥೆಯ ಪ್ರಮುಖ ಪಾಲುದಾರರು ಹಾಗೂ ರೈತರ ಜಾಲದೊಂದಿಗೆ ಸಂಪರ್ಕ ಕಲ್ಪಿಸಲು ಸರ್ಕಾರದ ವತಿಯಿಂದ ಸಂಪೂರ್ಣ ಸಹಕಾರ ನೀಡುವ ಭರವಸೆ ವ್ಯಕ್ತಪಡಿಸಿದೆವು. ಕರ್ನಾಟಕದಲ್ಲಿನ ಹೂಡಿಕೆ ಅವಕಾಶಗಳ ಕುರಿತು Savencia ಆಸಕ್ತಿ ವ್ಯಕ್ತಪಡಿಸಿದ್ದು, ಮುಂದಿನ ಹಂತದ ಮಾತುಕತೆ ನಡೆಸಿ ರಾಜ್ಯದಲ್ಲಿ ಹೂಡಿಕೆಯ ಸಾಧ್ಯತೆಗಳನ್ನು ಅನ್ವೇಷಿಸಲು ಸಕಾರಾತ್ಮಕವಾಗಿ ಮುಂದಾಗಿದೆ ಎಂದು ಎಂ.ಬಿ. ಪಾಟೀಲ್ ಮಾಹಿತಿ ನೀಡಿದ್ದಾರೆ.

